ನಗರ್ತಪೇಟೆ ಗಲಾಟೆ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿದ ಹೈಕೋರ್ಟ್‌

ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 295ಎ ಹಾಗೂ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123(3ಎ) ಅಡಿ ಹಲಸೂರು ಗೇಟ್‌ ಠಾಣೆಯಲ್ಲಿ 20.03.2024ರಂದು ಪ್ರಕರಣ ದಾಖಲಾಗಿತ್ತು.
M P Tejasvi Surya and Karnataka High Court
M P Tejasvi Surya and Karnataka High Court
Published on

ಬೆಂಗಳೂರಿನ ನಗರ್ತಪೇಟೆಯ ಮೊಬೈಲ್ ಅಂಗಡಿ ಮಾಲೀಕ ಮುಖೇಶ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ತಂದ ಆರೋಪದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಎಫ್‌ಐಆರ್‌ಗೆ ತಡೆ ನೀಡಿತು.

ಅರ್ಜಿದಾರ ತೇಜಸ್ವಿಸೂರ್ಯ ಪರ ವಾದ ಮಂಡಿಸಿದ ವಕೀಲ ಪಿ ಪ್ರಸನ್ನ ಕುಮಾರ್ ಅವರು ಆಜಾನ್ ಆಗುವ ವೇಳೆ ಧಾರ್ಮಿಕ ಹಾಡು ನುಡಿಸಿದರು ಎಂದು ಆರೋಪಿಸಿ ಕೆಲ ಯುವಕರು ಮುಕೇಶ್‌ನ ಮೇಲೆ ಗಂಭೀರ ಹಲ್ಲೆ ನಡೆಸಿದರು. ಇದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅರ್ಜಿದಾರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಅದಕ್ಕೆ ಯಾವುದೇ ಪುರಾವೆಗಳಿಲ್ಲ, ವಿನಾಕಾರಣ ಅವರಿಗೆ ತೊಂದರೆ ನೀಡುವ ಉದ್ದೇಶದಿಂದ ರಾಜಕೀಯ ಪ್ರೇರಿತವಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ, ಅದನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

Also Read
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಅಕ್ರಮ ಆರೋಪ: ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ತೇಜಸ್ವಿ ಸೂರ್ಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 295ಎ ಹಾಗೂ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123(3ಎ) ಅಡಿ ಹಲಸೂರು ಗೇಟ್‌ ಠಾಣೆಯಲ್ಲಿ 20.03.2024ರಂದು ಪ್ರಕರಣ ದಾಖಲಾಗಿತ್ತು.

Kannada Bar & Bench
kannada.barandbench.com