[ನಾರದ ಪ್ರಕರಣ] ಟಿಎಂಸಿಯ ನಾಲ್ವರು ನಾಯಕರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಕಲ್ಕತ್ತಾ ಹೈಕೋರ್ಟ್‌

"ಪ್ರಕರಣದ ವಿಚಾರಣೆಗೆ ವಾರ ಅಥವಾ ಅದಕ್ಕೂ ಹೆಚ್ಚಿನ ಸಮಯಬೇಕಿರುವುದರಿಂದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ವಿಚಾರಣೆ ಮುಂದುವರಿಸುತ್ತೇವೆ ಎಂಬುದು ನಮ್ಮ ಸದ್ಯದ ಅಭಿಪ್ರಾಯ” ಎಂದು ನ್ಯಾಯಾಲಯ ಹೇಳಿದೆ.
TMC leaders
TMC leaders

ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಬಂಧಿತರಾಗಿರುವ ಟಿಎಂಸಿಯ ನಾಲ್ವರು ನಾಯಕರಿಗೆ ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ವಿಚಾರಗಳ ವಿಚಾರಣೆಗೆ ಬಾಕಿ ಇದ್ದು, ಆರೋಪಿಗಳಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌, ನ್ಯಾಯಮೂರ್ತಿಗಳಾದ ಐಪಿ ಮುಖರ್ಜಿ, ಹರೀಶ್‌ ಟಂಡನ್‌, ಸೌಮೇನ್‌ ಸೇನ್‌ ಮತ್ತು ಅರಿಜಿತ್‌ ಬ್ಯಾನರ್ಜಿ ಅವರನ್ನೊಳಗೊಂಡ ಪಂಚ ಪೀಠವು ಮಧ್ಯಂತರ ಜಾಮೀನು ಮಂಜೂರು ಮಾಡಲಾಗುವುದು ಎಂದಿತು.

“ಪ್ರಕರಣದ ವಿಚಾರಣೆಗೆ ವಾರ ಅಥವಾ ಅದಕ್ಕೂ ಹೆಚ್ಚಿನ ಸಮಯಬೇಕಿರುವುದರಿಂದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ವಿಚಾರಣೆ ಮುಂದುವರಿಸುತ್ತೇವೆ. ಇದು ನಮ್ಮ ಸದ್ಯದ ಅಭಿಪ್ರಾಯ” ಎಂದು ಜಾಮೀನು ನೀಡುವ ಹಿಂದಿನ ಕಾರಣವನ್ನು ನ್ಯಾಯಾಲಯ ವಿವರಿಸಿದೆ.

ತಲಾ ಎರಡು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ ನೀಡುವಂತೆ ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಮಾತನಾಡದಂತೆಯೂ ಅವರಿಗೆ ನಿರ್ದೇಶಿಸಿದೆ.

ಪ್ರಕರಣದ ತನಿಖೆಗೆ ಸಮಸ್ಯೆ ಉಂಟು ಮಾಡುವಷ್ಟು ಆರೋಪಿಗಳು ಸಶಕ್ತರಾಗಿದ್ದಾರೆ ಎಂದ ಸಿಬಿಐ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಇದು ಸಮಾಜದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ನಾನು ಗೌರವಯುತವಾಗಿ ಕೋರುತ್ತೇನೆ” ಎಂದರು.

ಈ ಸಂದರ್ಭದಲ್ಲಿ ನ್ಯಾ. ಐ ಪಿ ಮುಖರ್ಜಿ ಅವರು “ಪ್ರಕರಣದ ವಿಚಾರಣೆಯು 2017ರಲ್ಲಿ ಆರಂಭವಾಗಿದೆ. ಆಗ ಅವರನ್ನು ಬಂಧಿಸಲಾಗಿಲ್ಲ. ಅವರನ್ನು ಬಂಧಿಸದೇ ತನಿಖೆ ಮುಕ್ತಾಯಗೊಳಿಸಲಾಗಿದೆ. ಸಾರ್ವಜನಿಕ ಸೇವೆ ಮಾಡದಂತೆ ತಡೆದು ಅವರನ್ನು ಈಗ ಬಂಧಿಸಬೇಕೆಂದು ನೀವು ಏಕೆ ಹೇಳುತ್ತಿದ್ದೀರಿ?” ಎಂದರು.

Also Read
[ನಾರದ ಪ್ರಕರಣ] ಹೈಕೋರ್ಟ್ ಘನತೆಗೆ ತಕ್ಕಂತೆ ನಮ್ಮ ನಡವಳಿಕೆ ಇಲ್ಲ: ಹಂಗಾಮಿ ಸಿಜೆಗೆ ಪತ್ರ ಬರೆದ ಹಾಲಿ ನ್ಯಾಯಮೂರ್ತಿ

ಆಗ ಮೆಹ್ತಾ ಅವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರೆ, ಮಾಧ್ಯಮಗಳ ಜೊತೆ ಮಾತನಾಡದಂತೆ ಅವರಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು.

ಅಂತಿಮವಾಗಿ ಪೀಠವು ಮೇ 17ರಂದು ಸಿಬಿಐ ಬಂಧನಕ್ಕೆ ಒಳಪಟ್ಟಿದ್ದ ಟಿಎಂಸಿ ನಾಯಕರಾದ ಫಿರ್ಹಾದ್‌ ಹಕೀಮ್‌, ಸುಬ್ರತಾ ಮುಖರ್ಜಿ, ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ಅವರಿಗೆ ಜಾಮೀನು ನೀಡಿ, ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com