ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ರಾಯಗಢದ ಸಿಜೆಎಂ ನ್ಯಾಯಾಲಯ ಸೋಮವಾರ ಆರೋಪ ಮುಕ್ತಗೊಳಿಸಿದೆ.
ʼಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಎಷ್ಟು ವರ್ಷಗಳಾಗಿವೆ ಎಂದು ತಿಳಿಯದೇ ಇದ್ದʼ ಅಂದಿನ ಸಿಎಂ ಉದ್ಧವ್ ಅವರಿಗೆ ಕಪಾಳಮೋಕ್ಷ ಮಾಡುತ್ತಿದ್ದುದಾಗಿ ಆಗಸ್ಟ್ 2021ರಲ್ಲಿ ರಾಣೆ ಹೇಳಿದ್ದರಿಂದ ವಿವಾದ ಭುಗಿಲೆದ್ದಿತ್ತು.
ರಾಣೆ ಒಡ್ಡಿದ್ದಾರೆನ್ನಲಾದ ಬೆದರಿಕೆ ನಿರ್ದಿಷ್ಟ ಹಾಗೂ ತಕ್ಷಣದ ಕ್ರಿಮಿನಲ್ ಸ್ವರೂಪದ ಬೆದರಿಕೆಯಲ್ಲ, ಬದಲಿಗೆ ರಾಜಕೀಯವಾಗಿ ಅಸೂಕ್ಷ್ಮವಾದ ಹೇಳಿಕೆ ಎನ್ನಬಹುದು. ಇದನ್ನು ಕೇಂದ್ರ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅಪೇಕ್ಷಿತ ನಡೆಯಲ್ಲ ಎಂದು ನ್ಯಾಯಾಧೀಶ ಎಸ್ ಡಬ್ಲ್ಯೂ ಉಗಳೆ ತಿಳಿಸಿದರು.
ಐಪಿಸಿ ಸೆ. 153ಎ (2) (ಸಮಾಜದಲ್ಲಿ ಸಾಮರಸ್ಯ ಕದಡುವಂತೆ ದ್ವೇಷಕ್ಕೆ ಕುಮ್ಮಕ್ಕು), 500 (ಮಾನನಷ್ಟ) ಮತ್ತು 505 (2) (ಹಿಂಸಾಚಾರಕ್ಕೆ ಪ್ರಚೋದನೆ) ಅಡಿಯಲ್ಲಿ ರಾಣೆ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ರಾಣೆ ಅವರು ನೀಡಿರುವ ಹೇಳಿಕೆಯು ಯಾವುದೇ ಜಾತಿ, ಧರ್ಮ ಅಥವಾ ಜನಾಂಗೀಯ ಗುಂಪುಗಳ ವಿರುದ್ಧವಾಗಿ ತೋರುತ್ತಿಲ್ಲ. ದೂರುದಾರರನ್ನು ರಾಣೆ ಅವಮಾನಿಸಿಲ್ಲ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವಂತೆ ಪ್ರಚೋದನೆ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.