ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಾರ್ಚ್ 12ರಂದು ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಅದಾಲತ್ ನಡೆಯಲಿದೆ. ರಾಜ್ಯದಾದ್ಯಂತ ಸುಮಾರು ಒಂದು ಸಾವಿರ ಪೀಠಗಳನ್ನು ಪ್ರಕರಣಗಳ ಇತ್ಯರ್ಥಕ್ಕಾಗಿ ಸೃಷ್ಟಿಸಲಾಗುತ್ತಿದೆ. ಪಕ್ಷಕಾರರು ತಮ್ಮ ವಕೀಲರಲ್ಲದೇ ಹೈಕೋರ್ಟ್, ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಾಯ ಪಡೆಯಬಹುದಾಗಿದೆ. ಸಿವಿಲ್, ಕ್ರಿಮಿನಲ್, ರೇರಾ, ಗ್ರಾಹಕರ ವೇದಿಕೆ ಪ್ರಕರಣಗಳ ಜೊತೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿನ ಪ್ರಕರಣಗಳನ್ನೂ ಈ ಬಾರಿ ಅದಾಲತ್‌ನಲ್ಲಿ ಇತ್ಯರ್ಥಕ್ಕೆ ಪರಿಗಣಿಸಲಾಗುತ್ತಿದೆ ಎಂದು ಕೆಎಸ್‌ಎಲ್‌ಎಸ್‌ಎ ಸಾರ್ವಜನಿಕ ಸಂಪರ್ಕಾಧಿಕಾರಿ ವಿಘ್ನೇಶ್ ಕುಮಾರ್ ಅವರು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದ್ದಾರೆ.