ರಾಷ್ಟ್ರೀಯ ಭದ್ರತೆಗಾಗಿ, ಸ್ವಾಭಾವಿಕ ನ್ಯಾಯದ ತತ್ವಗಳನ್ನು ಬಿಟ್ಟುಕೊಡಬಹುದು: ದೆಹಲಿ ಹೈಕೋರ್ಟ್

ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಸರ್ಕಾರದ ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಗೌಪ್ಯವಾಗಿಡಬಹುದು ಎಂದ ಪೀಠ.
ರಾಷ್ಟ್ರೀಯ ಭದ್ರತೆಗಾಗಿ, ಸ್ವಾಭಾವಿಕ ನ್ಯಾಯದ ತತ್ವಗಳನ್ನು ಬಿಟ್ಟುಕೊಡಬಹುದು: ದೆಹಲಿ ಹೈಕೋರ್ಟ್
Published on

ಅಂತರ್ಜಾಲ ಬಳಸದೆಯೇ ಸಂದೇಶ ರವಾನಿಸಲು ಅವಕಾಶ ಕಲ್ಪಿಸುವ ಬ್ರಿಯಾರ್‌ ಮೆಸೇಜಿಂಗ್ ಆ್ಯಪ್ ಅನ್ನು ಜಮ್ಮು ಕಾಶ್ಮೀರದಲ್ಲಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದ್ದು ರಾಷ್ಟ್ರೀಯ ಭದ್ರತೆಗಾಗಿ, ಸ್ವಾಭಾವಿಕ ನ್ಯಾಯದ ತತ್ವಗಳನ್ನು ಬಿಟ್ಟುಕೊಡಬಹುದು ಎಂದು ಅದು ನುಡಿದಿದೆ [ಸಬ್‌ಲೈಮ್‌ ಸಾಫ್ಟ್‌ವೇರ್‌ ಲಿಮಿಟೆಡ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ದೇಶದ ಭದ್ರತೆ ಮತ್ತು ಸಾರ್ವಭೌಮತ್ವದ ಹಿತದೃಷ್ಟಿಗಾಗಿ ಸರ್ಕಾರ ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಗೌಪ್ಯವಾಗಿಡಬಹುದು ಎಂದು ಕೂಡ ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್‌ ತಿಳಿಸಿದ್ದಾರೆ.

Also Read
ಸ್ವಾಭಾವಿಕ ನ್ಯಾಯ ಪಾಲಿಸದೆ ಮನೆಗಳ ನೆಲಸಮ ಮಾಡುವುದು ಸ್ಥಳೀಯ ಸಂಸ್ಥೆಗಳ ಫ್ಯಾಶನ್ ಆಗಿದೆ: ಮ. ಪ್ರದೇಶ ಹೈಕೋರ್ಟ್ ಕಿಡಿ

ರಾಷ್ಟ್ರೀಯ ಭದ್ರತೆಯ ವಿಚಾರ ಬಂದಾಗ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಬಿಟ್ಟುಕೊಡಬಹುದು. ರಾಷ್ಟ್ರೀಯ ಭದ್ರತೆಯ ವಿಚಾರಗಳು ಪರಿಗಣನೆಗೆ ಒಳಪಟ್ಟಾಗ ನ್ಯಾಯೋಚಿತ ವಿಚಾರಣೆಯ ಹಕ್ಕು ಮಣಿಯಬೇಕಾಗುತ್ತದೆ ಎಂಬುದು ಸುಸ್ಥಾಪಿತವಾಗಿದೆ. ಭದ್ರತೆ ಮತ್ತು ಸಾರ್ವಭೌಮತ್ವದ ಅನುಕೂಲಕ್ಕಾಗಿ ಉನ್ನತ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಗೌಪ್ಯವಾಗಿಡಬಹುದು ಎಂದು ನ್ಯಾಯಾಲಯ ನುಡಿದಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ ಸೆಕ್ಷನ್ 69A ಅಡಿಯಲ್ಲಿ ಮನ್ನಣೆ ಪಡೆದ ಆ್ಯಪ್‌ ಅನ್ನು ನಿರ್ಬಂಧಿಸಿ ತಾನು ಹೊರಡಿಸಿರುವ ಆದೇಶದ ವಿವರವನ್ನು ಪ್ರಕಟಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬ್ರಿಯಾರ್‌ ಹೈಕೋರ್ಟ್‌ ಮೊರೆ ಹೋಗಿತ್ತು.

Also Read
ಭಯೋತ್ಪಾದನೆ ವಿರುದ್ಧ ಕಠೋರ ಕ್ರಮ ಅಗತ್ಯ ಎಂದ ದೆಹಲಿ ಹೈಕೋರ್ಟ್‌: ಐಸಿಸ್ ಅಪರಾಧಿಯ ಮನವಿ ತಿರಸ್ಕೃತ

ಬ್ರಿಯಾರ್‌ ಎಂಬುದು ಉಚಿತ ಮತ್ತು ಮುಕ್ತ ಮಾಹಿತಿ (ಓಪನ್‌ ಸೋರ್ಸ್‌) ತಂತ್ರಾಂಶವಾಗಿದ್ದು ಅದನ್ನು ಬಳಸಲು ಮುಕ್ತ ಪರವಾನಗಿ ಇದೆ. ಅಲ್ಲದೆ ತಂತ್ರಾಂಶವನ್ನು ಯಾವುದೇ ರೀತಿಯಲ್ಲಿಯಾದರೂ ನಕಲು ಮಾಡಬಹುದಾಗಿದ್ದು ಬದಲಿಸಬಹುದಾಗಿದೆ. ಜೊತೆಗೆ ಅಂತರ್ಜಾಲ ಸಂಪರ್ಕ ಇಲ್ಲದೆಯೂ ಬ್ರಿಯಾರ್‌ ತಂತ್ರಾಂಶ ಕಾರ್ಯ ನಿರ್ವಹಿಸುತ್ತಿದ್ದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಇದನ್ನು ಬಳಸುತ್ತಾರೆ ಎಂಬ ಶಂಕೆ ಇದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.  

ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅರ್ಜಿದಾರರ ಆ್ಯಪ್ ಅನ್ನು ಜಮ್ಮು ಕಾಶ್ಮೀರದಲ್ಲಿ ಮಾತ್ರ ನಿರ್ಬಂಧಿಸಲಾಗಿದ್ದು ದೇಶದ ಉಳಿದೆಲ್ಲಾ ಭಾಗಗಳಲ್ಲಿ ಅದನ್ನು ಬಳಸಬಹುದಾಗಿದೆ ಎಂದು ತಿಳಿಸಿತು. ಈ ಹಿನ್ನೆಲೆಯಲ್ಲಿ ಬ್ರಿಯಾರ್ ಸಲ್ಲಿಸಿದ್ದ ಅರ್ಜಿಯನ್ನು ಅದು ವಜಾಗೊಳಿಸಿತು.

Kannada Bar & Bench
kannada.barandbench.com