ಸ್ವಾಭಾವಿಕ ನ್ಯಾಯ ಪಾಲಿಸದೆ ಮನೆಗಳ ನೆಲಸಮ ಮಾಡುವುದು ಸ್ಥಳೀಯ ಸಂಸ್ಥೆಗಳ ಫ್ಯಾಶನ್ ಆಗಿದೆ: ಮ. ಪ್ರದೇಶ ಹೈಕೋರ್ಟ್ ಕಿಡಿ

"ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಪಾಲಿಸದೆ ಮನೆ ನೆಲಸಮಗೊಳಿಸಿ ಪತ್ರಿಕೆಯಲ್ಲಿ ಪ್ರಕಟಿಸುವುದು ಈಗ ಫ್ಯಾಶನ್ ಆಗಿದೆ" ಎಂದು ನ್ಯಾಯಾಲಯ ಹೇಳಿದೆ.
ಬುಲ್ಡೋಜರ್
ಬುಲ್ಡೋಜರ್

ವ್ಯಕ್ತಿಗಳಿಬ್ಬರಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸಿದ್ದ ಉಜ್ಜಯಿನಿ ನಗರ ಪಾಲಿಕೆ ಅವರಿಬ್ಬರಿಗೂ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ (ರಾಧಾ ಲಾಂಗ್ರಿ ಮತ್ತಿತರರು ಹಾಗೂ ಉಜ್ಜಯಿನಿ ಪಾಲಿಕೆ ಆಯುಕ್ತರು ಇನ್ನಿತರರ ನಡುವಣ ಪ್ರಕರಣ).

ಸ್ವಾಭಾವಿಕ ನ್ಯಾಯದ ತತ್ವಗಳನ್ನುಪಾಲಿಸದೆ ಸ್ಥಳೀಯ ಸಂಸ್ಥೆಗಳು ಮನೆಗಳನ್ನು ನೆಲಸಮ ಮಾಡುವುದು ಈಗ 'ಫ್ಯಾಶನ್' ಆಗಿದೆ ಎಂದು ನ್ಯಾ. ವಿವೇಕ್ ರುಸಿಯಾ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಪಾಲಿಸದೆ ಮನೆ ನೆಲಸಮಗೊಳಿಸಿ ಪತ್ರಿಕೆಯಲ್ಲಿ ಪ್ರಕಟಿಸುವುದು ಈಗ ಫ್ಯಾಶನ್ ಆಗಿದೆ.

ನ್ಯಾಯಮೂರ್ತಿ ವಿವೇಕ್ ರುಸಿಯಾ
ನ್ಯಾಯಮೂರ್ತಿ ವಿವೇಕ್ ರುಸಿಯಾ

ಪಾಲಿಕೆ ಅಧಿಕಾರಿಗಳು ತಮಗೆ ಪರಿಹಾರ ನೀಡಬೇಕು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ತಮ್ಮ ಮನೆಗಳ ಉಳಿದ ಭಾಗ ನೆಲಸಮ ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿತು.

ಉಜ್ಜಯಿನಿಯ ಸಂಡಾಪಾನಿ ನಗರದಲ್ಲಿನ ತನ್ನ ಮತ್ತು ತನ್ನ ಪತಿಗೆ ಸೇರಿದ ಎರಡು ಮನೆಗಳನ್ನು ಮುನ್ಸೂಚನೆ ನೀಡದೆಯೇ ನೆಲಸಮ ಮಾಡಲಾಗಿದೆ ಎಂದು ಅರ್ಜಿದಾರೆಯೊಬ್ಬರು ಆರೋಪಿಸಿದ್ದರೆ ಮತ್ತೊಬ್ಬ ದೂರುದಾರರು ತನಗೆ ಉತ್ತರಿಸಲು ಕೇವಲ ಒಂದು ದಿನ ಮಾತ್ರ ಅವಕಾಶ ನೀಡಿ ಮನೆಗಳನ್ನು ಕೆಡವಲಾಗಿದೆ ಎಂದು ಅಳಲು ತೋಡಿಕೊಂಡಿದ್ದರು.

ಅನುಮತಿ ಪಡೆಯದೆ ಕಟ್ಟಡಗಳನ್ನು ನಿರ್ಮಿಸಿದ್ದರಿಂದ ಅವುಗಳನ್ನು ತೆರವುಗೊಳಿಸಲಾಗಿದೆ. ನೆಲಸಮ ಮಾಡಿದ್ದು ಸಮರ್ಥನೀಯವಾಗಿದೆ ಎಂದು ಪಾಲಿಕೆ ಪರ ವಕೀಲರು ಸಮರ್ಥಿಸಿಕೊಂಡರು.

ಅರ್ಜಿದಾರರ ಹೆಸರಿನಲ್ಲಿ ನೋಂದಾಯಿತ ಕ್ರಯಪತ್ರಗಳಿದ್ದು ಅವರು ತಮ್ಮ ಹೆಸರಿಗೆ ಮ್ಯೂಟೇಷನ್‌ ಮಾಡಿಕೊಳ್ಳಲು ಪಾಲಿಕೆಯನ್ನು ಸಂಪರ್ಕಿಸಿಲ್ಲ. ಅಲ್ಲದೆ, ನಿರ್ಮಾಣ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರೆ, ಮಾಲೀಕತ್ವದ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತಿತ್ತು. ಆಗ ತಾವು ನಿಜವಾದ ಮಾಲೀಕರಿಗೆ ನೋಟಿಸ್ ನೀಡುತ್ತಿಲ್ಲ ಎಂಬುದು ಅವರಿಗೆ ತಿಳಿಯುತ್ತಿತ್ತು ಎಂದು ನ್ಯಾಯಾಲಯ ಹೇಳಿದೆ.

ಜೊತೆಗೆ ಸ್ಥಳದ ಪಂಚನಾಮೆ ನಡೆದಿಲ್ಲ. ಮೊದಲ ಅರ್ಜಿದಾರರ ಆಸ್ತಿಗಳ ಮಾಲೀಕರು ಅಸ್ತಿತ್ವದಲ್ಲಿಲ್ಲ. ಆದ್ದರಿಂದ, ಅಸ್ತಿತ್ವದಲ್ಲಿಯೇ ಇಲ್ಲದ ಕಾಲ್ಪನಿಕ ವ್ಯಕ್ತಿಗೆ ನೋಟಿಸ್ ನೀಡುವುದು ಅತ್ಯಂತ ಕಾನೂನುಬಾಹಿರ ಮತ್ತು ನಿರಂಕುಶ ಕ್ರಮವಾಗಿದೆ ಎಂದು ನ್ಯಾಯಾಲಯ ನಿರ್ಧರಿಸಿತು. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆಸ್ತಿ ತೆರಿಗೆ ರಸೀದಿಗಳ ಆಧಾರದ ಮೇಲೆ ಮಾಲೀಕತ್ವದ ವಿವರಗಳನ್ನು ಪರಿಶೀಲಿಸಬಹುದಿತ್ತು ಎಂದು ಅದು ಅಭಿಪ್ರಾಯಪಟ್ಟಿತು.

ಅರ್ಜಿದಾರರು ಅದಾಗಲೇ ನಿರ್ಮಿಸಿದ ಮನೆಯನ್ನು ಖರೀದಿಸಿದ್ದು ಅದಕ್ಕೆ ಅನುಮತಿ ಇಲ್ಲದಿದ್ದರೆ, ಸಕ್ರಮಗೊಳಿಸಲು ಕೂಡ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿತು.

"ಅನುಮತಿಯಿಲ್ಲದೆ ಯಾವುದೇ ವ್ಯಕ್ತಿಗೆ ಮನೆ ನಿರ್ಮಿಸಲು ಹಕ್ಕಿಲ್ಲ ಅಥವಾ ಕಟ್ಟಡದ ಅನುಮತಿ ಇದ್ದೂ ಎಂಒಎಸ್ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಮಾಡಲು ಅನುಮತಿಸಲಾಗುವುದಿಲ್ಲ ಎಂಬುದು ಸರಿಯೇ. ಆದರೆ ಎರಡೂ ಸಂದರ್ಭಗಳಲ್ಲಿ, ನೆಲಸಮಗೊಳಿಸುವುದು ಕೊನೆಯ ಮಾರ್ಗವಾಗಿರಬೇಕು. ಅದೂ ಮನೆಯ ಮಾಲೀಕರಿಗೆ ತಮ್ಮ ಕಟ್ಟಡಗಳನ್ನು ಸಕ್ರಮಗೊಳಿಸಲು ಸೂಕ್ತ ಅವಕಾಶ ನೀಡಿದ ಬಳಿಕವೇ ನೆಲಸಮ ಕಾರ್ಯಾಚರಣೆಗೆ ಮುಂದಾಗಬೇಕು" ಎಂದು ಅದು ಹೇಳಿದೆ.

ಹೀಗಾಗಿ ಹಣದ ರೂಪದ ದಂಡದ ಜೊತೆಗೆ ಸ್ಥಳ ಪಂಚನಾಮೆ ವೇಳೆ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಅದು ನಿರ್ದೇಶನ ನೀಡಿತು. ಇದೇ ವೇಳೆ ಅರ್ಜಿದಾರರು ತಮ್ಮ ಕಟ್ಟಡಗಳನ್ನು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಸಲ್ಲಿಸುವಂತೆಯೂ ಅದು ಸೂಚಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Radha Langri and Anr vs The Commissioner, Municipal Corporation Ujjain and Ors..pdf
Preview

Related Stories

No stories found.
Kannada Bar & Bench
kannada.barandbench.com