ಆಸ್ತಿ ಕಬಳಿಸಲು ʼಡಿ ಕಂಪೆನಿʼ ಜೊತೆ ಸಂಚು ರೂಪಿಸಿದ್ದ ನವಾಬ್ ಮಲಿಕ್: ಮುಂಬೈ ನ್ಯಾಯಾಲಯ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ 9 ಸಂಪುಟದಷ್ಟು ಬೃಹತ್ ಆರೋಪಪಟ್ಟಿಯನ್ನು ಮುಂಬೈ ನ್ಯಾಯಾಲಯಕ್ಕೆ ಸಲ್ಲಿಸಿದೆ.
Nawab Malik, ED
Nawab Malik, EDA1

ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಮುಂಬೈನ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.

ಪ್ರಕರಣವನ್ನು ಮುಂದುವರೆಸಲು ಸಾಕಷ್ಟು ಆಧಾರಗಳಿರುವುದನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರು ಮಲಿಕ್‌ ಮತ್ತಿತರ ಆರೋಪಿಗಳಿಗೆ ನೋಟಿಸ್‌ ಜಾರಿ ಮಾಡಿದರು.

Also Read
ಮಲಿಕ್‌ ಚಿಕಿತ್ಸೆಗೆ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳಿವೆಯೇ? ಇ ಡಿ ಪ್ರಶ್ನಿಸಿದ ಮುಂಬೈ ನ್ಯಾಯಾಲಯ

“ಶ್ರೀಮತಿ ಮುನಿರಾ ಪ್ಲಂಬರ್‌ (ದೂರುದಾರೆ) ಅವರಿಗೆ ಸೇರಿದ ಪ್ರಧಾನ ಆಸ್ತಿ ಕಬಳಿಸಲು ಡಿ ಕಂಪೆನಿಯ ಸದಸ್ಯರೊಂದಿಗೆ ಸೇರಿ ಮಲಿಕ್‌ ಕ್ರಿಮಿನಲ್‌ ಸಂಚು ರೂಪಿಸಿದ್ದರು. ಹೀಗಾಗಿ ಹಸೀನಾ ಪಾರ್ಕರ್ (ಲೇಡಿ ಡಾನ್‌ ಎಂದೇ ಕುಖ್ಯಾತಳಾಗಿದ್ದ ದಾವೂದ್‌ ಗುಂಪಿನ ಸದಸ್ಯೆ) ಮತ್ತಿತರರೊಂದಿಗೆ ಸೇರಿ ಆರೋಪಿ (ಮಲಿಕ್‌) ಅತಿಕ್ರಮಿಸಿದ ಆಸ್ತಿ ಪಿಎಂಎಲ್‌ಎ ಕಾಯಿದೆಯಡಿ ಅಪರಾಧದ ಗಳಿಕೆಯಾಗಿದೆ. ಅಪರಾಧದ ಮೂಲಕ ಗಳಿಸಿದ ಈ ಆಸ್ತಿಯು ಅಕ್ರಮ ಚಟುವಟಿಕೆಗಳ ಮೂಲಕ ಹುಟ್ಟಿರುವಂಥದ್ದು. ಆರೋಪಿ ನೇರವಾಗಿ ಮತ್ತು ಉದ್ದೇಶಪೂರ್ವಕವಾಗಿ ಅಕ್ರಮ ಹಣ ವರ್ಗಾವಣೆ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಸೂಚಿಸುವ ಮೇಲ್ನೋಟದ ಸಾಕ್ಷಿಗಳು ಇವೆ. ಆದ್ದರಿಂದ, ಅಕ್ರಮ ಹಣ ವರ್ಗಾವಣೆಯ ಅಪರಾಧ ಎಸಗಿದ್ದಕ್ಕೆ ಆರೋಪಿ ಜವಾಬ್ದಾರನಾಗಿದ್ದು ಶಿಕ್ಷೆಗೆ ಅರ್ಹನಾಗಿದ್ದಾನೆ” ಎಂದು 7 ಪುಟಗಳ ಆದೇಶದಲ್ಲಿ ತಿಳಿಸಲಾಗಿದೆ.

ಡಿ-ಕಂಪನಿ ಎಂಬುದು ದಾವೂದ್ ಇಬ್ರಾಹಿಂ ನೇತೃತ್ವದ ಭೂಗತ ಸದಸ್ಯರಿಗೆ ನೀಡಲಾದ ಅನೌಪಚಾರಿಕ ಹೆಸರು. ಕಳೆದ ತಿಂಗಳು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ 9 ಸಂಪುಟದಷ್ಟು ಬೃಹತ್‌ ಆರೋಪ ಪಟ್ಟಿ ಸಲ್ಲಿಸಿತ್ತು.

Kannada Bar & Bench
kannada.barandbench.com