ಕೋಮು ಸೌಹಾರ್ದಕ್ಕೆ ಧಕ್ಕೆ: ಧೀರೇಂದ್ರ ಶಾಸ್ತ್ರಿ ಸಂದರ್ಶನ ತೆಗೆದುಹಾಕುವಂತೆ ನ್ಯೂಸ್ 18ಗೆ ಎನ್‌ಬಿಡಿಎಸ್ಎ ಸೂಚನೆ

ಮೂಢನಂಬಿಕೆಯನ್ನು ಉತ್ತೇಜಿಸುವ ಮತ್ತು ಸಮುದಾಯದ ನಡುವೆ ಕೋಮು ದ್ವೇಷಕ್ಕೆ ಕಾರಣವಾಗುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.
Dhirendra Shastri (Bageshwar Baba), News18 India
Dhirendra Shastri (Bageshwar Baba), News18 India
Published on

ಮೌಢ್ಯ ಬಿತ್ತುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರಣಕ್ಕೆ ಬಾಗೇಶ್ವರ್ ಬಾಬಾ ಎಂದು ಪ್ರಸಿದ್ಧರಾದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸಂದರ್ಶನ ತೆಗೆದುಹಾಕುವಂತೆ ಸುದ್ದಿವಾಹಿನಿ ನ್ಯೂಸ್ 18 ಇಂಡಿಯಾಗೆ ಸುದ್ದಿ ಪ್ರಸರಣ ಮತ್ತು ಡಿಜಿಟಲ್‌ ಗುಣಮಟ್ಟ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಬುಧವಾರ ಸೂಚಿಸಿದೆ.

ಈ ಸಂಬಂಧ ಸುದ್ದಿವಾಹಿನಿಗೆ ಎಚ್ಚರಿಕೆ ನೀಡಿರುವ ಎನ್‌ಬಿಡಿಎಸ್‌ಎ ಏಳು ದಿನಗಳಲ್ಲಿ ಎಲ್ಲಾ ಮಾಧ್ಯಮ ವೇದಿಕೆಗಳಿಂದ ಸಂದರ್ಶನ ತೆಗೆದುಹಾಕುವಂತೆ ನಿರ್ದೇಶಿಸಿದೆ.

Also Read
ಮಹಿಳೆಯರ ವಿರುದ್ಧದ ಪ್ರತಿ ಅಪರಾಧವನ್ನು 'ಲವ್‌ ಜಿಹಾದ್‌'ನೊಂದಿಗೆ ಬೆಸೆಯುತ್ತಿದ್ದ ಹಿಂದಿ ಸುದ್ದಿ ವಾಹಿನಿಗಳಿಗೆ ದಂಡ

ಸಂದರ್ಶನದಲ್ಲಿ ಮೌಢ್ಯವನ್ನು ಉತ್ತೇಜಿಸುವಂತಹ ಹಲವು ನಿಲುವುಗಳನ್ನು ಸ್ವಾಮೀಜಿ ಮಾಡಿದ್ದು ಹಿಂದೂ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡಲಾಗಿದೆ. ಇದು ಸ್ವಭಾವತಃ ವಿಭಜನಕಾರಿಯಾಗಿದ್ದು  ಭಾರತದಲ್ಲಿ ವಾಸಿಸಲು "ಸೀತಾ ರಾಮ್" ಎಂದು ಹೇಳುವುದು ಕಡ್ಡಾಯ. ಅಲ್ಲದೆ ಲವ್‌ ಜಿಹಾದ್‌ನಲ್ಲಿ ಹಿಂದೂ ಯುವತಿಯರನ್ನು ಸಿಲುಕಿಸಿ ನಂತರ ಅವರನ್ನು ಕೊಲ್ಲುವಂತೆ ಇಸ್ಲಾಂ ಧರ್ಮ ಹೇಳುತ್ತದೆ ಎಂಬುದಾಗಿ ಅವರು ಹೇಳಿದ್ದರು ಎಂದು ಎನ್‌ಬಿಡಿಎಸ್‌ಎ ಅಧ್ಯಕ್ಷ (ನಿವೃತ್ತ) ನ್ಯಾಯಮೂರ್ತಿ ಎ ಕೆ ಸಿಕ್ರಿ ತಿಳಿಸಿದರು.

ಈ ಸಂಬಂಧ ಇಂದ್ರಜಿತ್‌ ಘೋರ್ಪಡೆ ಎಂಬುವವರು ದೂರು ಸಲ್ಲಿಸಿದ್ದರು. ಪ್ರಸಾರಕರು ಅನುಸರಿಸಬೇಕಾದ ಸ್ವಯಂ ನಿಯಂತ್ರಣ ತತ್ವವನ್ನು ಸಂದರ್ಶನ ಉಲ್ಲಂಘಿಸಿದೆ. ಮೌಢ್ಯ ಮತ್ತು ಕೋಮು ಭಾವನೆ ಕೆರಳಿಸುವ ಇಂತಹ ಕಾರ್ಯಕ್ರಮಗಳನ್ನು ತಪ್ಪಿಸುವ ಅವಶ್ಯಕತೆ ಇದೆ ಎಂದಿದ್ದರು.

ಶಾಸ್ತ್ರಿ ಅವರು ಅಲೌಕಿಕ ಶಕ್ತಿ  ಬಳಸಿಕೊಂಡು ಚುನಾವಣಾ ಫಲಿತಾಂಶಗಳನ್ನು ಊಹಿಸಬಹುದು ಎಂದು ಕೂಡ ಹೇಳಿದ್ದಾರೆ.ಇದೇ ವೇಳೆ  ಸುದ್ದಿವಾಹಿನಿ  ತಾನು ಆ ಹೇಳಿಕೆಗಳಿಗೆ ಜವಾಬ್ದಾರನಲ್ಲ ಎಂದಿದೆ. ಆದರೆ ಎನ್‌ಬಿಡಿಎಸ್‌ಎ ಮಾರ್ಗಸೂಚಿ ಮತ್ತು ಬಾಂಬೆ ಹೈಕೋರ್ಟ್ ತೀರ್ಪಿನ ಪ್ರಕಾರ ಕಾರ್ಯಕ್ರಮ ಆಹ್ವಾನಿತರು ನೀಡುವ ಹೇಳಿಕೆಗಳಿಗೆ ಸುದ್ದಿವಾಹಿನಿಗಳು ಜವಾಬ್ದಾರಿಯುತವಾಗಿರುತ್ತವೆ. ಆದ್ದರಿಂದ ಕೋಮು ದಳ್ಳುರಿಗೆ ಕಾರಣವಾಗುವ ಹೇಳಿಕೆ ನೀಡುವಂತಹವರನ್ನು ಆಹ್ವಾನಿಸುವುದನ್ನು ತಪ್ಪಿಸಬೇಕು. ಪ್ರಸಾರಕರೇ ಇಂತಹ ಹೇಳಿಕೆಗಳಿಗೆ ಜವಾಬ್ದಾರಿ ಎಂಬುದನ್ನು ಸಾರಲು ಪ್ರಸಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರು.

Also Read
ಕರ್ನಾಟಕ ಹಿಜಾಬ್ ವಿವಾದದ ಕುರಿತು ಕೋಮುವಾದಿ ಕಾರ್ಯಕ್ರಮ: ನ್ಯೂಸ್ 18 ವಾಹಿನಿಗೆ ₹50 ಸಾವಿರ ದಂಡ

ಅಂತಹ ವ್ಯಕ್ತಿಯನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದೇಕೆ ಎಂದು ಎನ್‌ಬಿಡಿಎಸ್‌ಎ ಪ್ರಸಾರಕರನ್ನು ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಸ್‌ 18, ಶಾಸ್ತ್ರಿ ಅವರು ತಿಂಗಳುಗಳ ಕಾಲ ಪ್ರಮುಖ ಸುದ್ದಿ ವ್ಯಕ್ತಿಯಾಗಿದ್ದರು, ಬಿಹಾರದ ರಾಜಕಾರಣಿ ತೇಜ್ ಪ್ರತಾಪ್ ಯಾದವ್ ಅವರಿಂದ ಬೆದರಿಕೆ ಎದುರಿಸಿದ್ದರು.  ಅವರ ಪ್ರಸಾರಕ್ಕೆ ಗಮನಾರ್ಹ ಸುದ್ದಿ ಮೌಲ್ಯವನ್ನು ಒದಗಿಸಿದ್ದರು. ಕಾರ್ಯಕ್ರಮ ನಿರೂಪಕರು ಕೋಮುವಾದಿ ಹೇಳಿಕೆಗಳನ್ನು ತಡೆಯಲು ಯತ್ನಿಸಿದ್ದರು ಎಂದಿತ್ತು.

Kannada Bar & Bench
kannada.barandbench.com