ಲುಫ್ತಾನ್ಸಾ, ಬ್ರಿಟಿಷ್ ಏರ್‌ವೇಸ್‌ ನಿರ್ಲಕ್ಷದಿಂದ ಸಂಕಷ್ಟಕ್ಕೀಡಾದ ಮಹಿಳೆ, ₹ 50 ಲಕ್ಷ ಪರಿಹಾರಕ್ಕೆ ಆದೇಶ

ಮಹಿಳೆಯ ಬಳಿ ಟ್ರಾನ್ಸಿಟ್ ನಿಲುಗಡೆಗೆ ವೀಸಾ ಇದೆಯೇ ಎಂಬುದನ್ನು ಪರಿಶೀಲಿಸದೆ ಮಾರ್ಗ ಬದಲಾವಣೆ ಮಾಡಿದ್ದ ವಿಮಾನಯಾನ ಸಂಸ್ಥೆ. ಇದರಿಂದಾಗಿ ಕೊಪನ್‌ಹೆಗನ್‌ನಲ್ಲಿ ತಡೆಹಿಡಿಯಲ್ಪಟ್ಟ ಮಹಿಳೆ.
ಲುಫ್ತಾನ್ಸಾ, ಬ್ರಿಟಿಷ್ ಏರ್‌ವೇಸ್‌ ನಿರ್ಲಕ್ಷದಿಂದ ಸಂಕಷ್ಟಕ್ಕೀಡಾದ ಮಹಿಳೆ, ₹ 50 ಲಕ್ಷ ಪರಿಹಾರಕ್ಕೆ ಆದೇಶ
A1
Published on

ಏಕಪಕ್ಷೀಯವಾಗಿ ಮಾರ್ಗ ಬದಲಾವಣೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಹಿರಿಯ ಮಹಿಳಾ ಪ್ರಯಾಣಿಕರೊಬ್ಬರು ತನ್ನ ತಪ್ಪಿಲ್ಲದೆ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ತಡೆಹಿಡಿಯಲ್ಪಟ್ಟು ನೋವು ಅನುಭವಿಸಿದ ಕಾರಣಕ್ಕೆ ಅವರಿಗೆ ಲುಫ್ತಾನ್ಸಾ ಜರ್ಮನ್ ಏರ್‌ಲೈನ್ಸ್ ಮತ್ತು ಬ್ರಿಟಿಷ್ ಏರ್‌ವೇಸ್‌ ಒಟ್ಟಿಗೆ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಇತ್ತೀಚೆಗೆ ಅದೇಶಿಸಿದೆ [ಹರ್ಷನ್‌ ಕೌರ್‌ ಧಲಿಯಾವಾಲ್‌ ಮತ್ತು ಲುಫ್ತಾನ್ಸಾ ಜರ್ಮನ್ ಏರ್‌ಲೈನ್ಸ್ ಮತ್ತಿತರರ ನಡುವಣ ಪ್ರಕರಣ].

ಟ್ರಾನ್ಸಿಟ್‌ ನಿಲುಗಡೆಗೆ ಅಗತ್ಯವಾದ ವೀಸಾವನ್ನು ಮಹಿಳೆ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸದೆಯೇ ಅವರು ಸಂಚರಿಸಬೇಕಿದ್ದ ಮಾರ್ಗವನ್ನು ವಿಮಾನಯಾನ ಸಂಸ್ಥೆ ಬದಲಾವಣೆ (ರೀ-ರೂಟ್‌) ಮಾಡಿತ್ತು.  ಇದರಿಂದಾಗಿ ಕೊಪನ್‌ಹೆಗನ್‌ನಲ್ಲಿ ಸ್ಥಳೀಯ ಅಧಿಕಾರಿಗಳು ಅವರನ್ನು ಹಲವು ಗಂಟೆಗಳ ಕಾಲ ತಡೆಹಿಡಿದಿದ್ದರು.

Also Read
ಕೆಟ್ಟ ಕೇಶ ವಿನ್ಯಾಸ: ಎನ್‌ಸಿಡಿಆರ್‌ಸಿ ಆದೇಶಿಸಿದ್ದ ₹2 ಕೋಟಿ ಪರಿಹಾರ ರದ್ದು; ಹೊಸದಾಗಿ ಪರಿಗಣಿಸಲು ಸುಪ್ರೀಂ ಸೂಚನೆ

ಹಿನ್ನೆಲೆ

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ಪತ್ನಿಯಾದ ಮಹಿಳೆ 2018ರ ಮಾರ್ಚ್ 19ರಂದು, ಸ್ಯಾನ್ ಫ್ರಾನ್ಸಿಸ್ಕೋ ಪ್ರವಾಸ ಮುಗಿಸಿ ಜರ್ಮನಿಯ ಫ್ರಾಂಕ್‌ಫರ್ಟ್ ಮೂಲಕ ನವದೆಹಲಿಗೆ ಹಿಂತಿರುಗಬೇಕಿತ್ತು. ಆದರೆ ಅವರು ಪಯಣಿಸಬೇಕಿದ್ದ ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಮೂರು ಗಂಟೆಗಳ ಕಾಲ ಅವರನ್ನು ಕಾಯುವಂತೆ ಮಾಡಿತು. ಅಂತಿಮವಾಗಿ ಮಹಿಳೆಯು ಪಯಣಿಸಬೇಕಿದ್ದ ವಿಮಾನವು ರದ್ದಾಗಿರುವುದಾಗಿ ತಿಳಿಸಿತು. ಅಲ್ಲದೆ, ಹಣ ಹಿಂತಿರುಗಿಸುವ ಬದಲಿಗೆ ತನ್ನ ವಿಮಾನದ ಬದಲು ಬ್ರಿಟಿಷ್‌ ಏರ್‌ವೇಸ್‌ ವಿಮಾನ ಏರಿ ಡೆನ್ಮಾರ್ಕ್‌ನ ಕೊಪನ್‌ಹೆಗನ್ ತಲುಪವಂತೆಯೂ ಅಲ್ಲಿಂದ ಏರ್ ಇಂಡಿಯಾ ವಿಮಾನದ ಮೂಲಕ ದೆಹಲಿ ತಲುಪಬಹುದೆಂದೂ ತಿಳಿಸಿ ಟಿಕೆಟ್ ನೀಡಿತು.

ಆದರೆ, ಈ ವೇಳೆ ವಿಮಾನಯಾನ ಸಂಸ್ಥೆಯು ಕೊಪನ್‌ಹೆಗನ್‌ನಲ್ಲಿ ಆಕೆ ವಿಮಾನ ಬದಲಾಯಿಸಲು ಇಳಿಯುವುದಕ್ಕೆ ಅಗತ್ಯವಾದ ಟ್ರಾನ್ಸಿಟ್‌ ವೀಸಾ ಹೊಂದಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಿಲ್ಲ. ಅಕೆ ಹೊಂದಿರುವ ವೀಸಾ ಅಥವಾ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸುವ ಗೋಜಿಗೂ ಹೋಗಲಿಲ್ಲ. ಇತ್ತ ಮಹಿಳೆಯನ್ನು ಸ್ಯಾನ್‌ಫ್ರಾನ್ಸಿಸ್ಕೋದಿಂದ ಕೋಪನ್‌ಹೆಗನ್‌ಗೆ ಕರೆದೊಯ್ಯಬೇಕಿದ್ದ ಬ್ರಿಟಿಷ್‌ ಏರ್‌ವೇಸ್‌ ವಿಮಾನ ತಡವಾಗಿ ಬಂದು ಆಕೆ ಟ್ರಾನ್ಸಿಟ್‌ ನಿಲ್ದಾಣ ತಲುಪುವ ವೇಳೆಗೆ ಭಾರತಕ್ಕೆ ಬರಬೇಕಿದ್ದ ಏರ್‌ ಇಂಡಿಯಾ ವಿಮಾನ ಅಲ್ಲಿಂದ ಹೊರಟುಬಿಟ್ಟಿತ್ತು. ಪರಿಣಾಮ ಟ್ರಾನ್ಸಿಟ್ ವೀಸಾ ಇಲ್ಲದ ಕಾರಣಕ್ಕಾಗಿ ಅವರನ್ನು ಕೊಪನ್‌ಹೆಗನ್‌ನಲ್ಲಿ ಸ್ಥಳೀಯ ಪೊಲೀಸರು ತಡೆಹಿಡಿದರು.

ಅಂತಿಮವಾಗಿ ಮಹಿಳೆಯ ಪತಿ ಅಧಿಕಾರಿಗಳೊಂದಿಗೆ ಭಾರತದಿಂದಲೇ ಮಾತುಕತೆ ನಡೆಸಿ ಮಹಿಳೆಯ ಪ್ರಾಮಾಣಿಕತೆಯನ್ನು ದೃಢಪಡಿಸಿದ ನಂತರವೇ  ಡೆನ್ಮಾರ್ಕ್‌ನಿಂದ ಟರ್ಕಿಯ ಮೂಲಕ ಭಾರತಕ್ಕೆ ಮರಳಲು ಆಕೆಗೆ ಅನುಮತಿ ನೀಡಲಾಯಿತು. ಈ ಎಲ್ಲ ಅಂಶಗಳನ್ನು ಆಯೋಗ ಗಮನಿಸಿತು.

ಹೀಗೆ ತನ್ನದಲ್ಲದ ತಪ್ಪಿನಿಂದಾಗಿ, ತಾಂತ್ರಿಕತೆಗಳ ಅರಿವಿಲ್ಲದೆ ಒಂಟಿ ಮಹಿಳೆಯು ರಾತ್ರಿಯಿಡೀ ಸಾವಿರಾರು ಮೈಲು ದೂರದಲ್ಲಿ ದುಃಖ, ನೋವು, ಆತಂಕವನ್ನು ಅನುಭವಿಸಬೇಕಾಯಿತು ಎಂಬುದನ್ನು ಆಯೋಗವು ಆದೇಶದಲ್ಲಿ ದಾಖಲಿಸಿದೆ. ಈ ತಪ್ಪಿಗೆ ಲುಫ್ತಾನ್ಸಾ ಮತ್ತು ಬ್ರಿಟಿಷ್ ಏರ್‌ವೇಸ್‌ ಎರಡೂ ಕಾರಣವೆಂದು ಅದು ಸ್ಪಷ್ಟಪಡಿಸಿದೆ.

Also Read
ರಕ್ತದ ಗುಂಪಿನ ವ್ಯತ್ಯಾಸದಿಂದಾಗಿ ರೋಗಿ ಸಾವನ್ನಪ್ಪಿದರೆ ಅದು ವೈದ್ಯಕೀಯ ನಿರ್ಲಕ್ಷ್ಯ: ಎನ್‌ಸಿಡಿಆರ್‌ಸಿ

ಸುಮಾರು 13 ಗಂಟೆಗಳ ಕಾಲ ಮಹಿಳೆಯು ಅನ್ಯ ನೆಲದಲ್ಲಿ ಸಂಕಷ್ಟ ಎದುರಿಸಿರುವುದನ್ನು ಆಯೋಗದ ಅಧ್ಯಕ್ಷರಾದ ದಿನೇಶ್ ಸಿಂಗ್ ಮತ್ತು ಸದಸ್ಯರಾದ ನ್ಯಾಯಮೂರ್ತಿ ಕರುಣಾ ನಂದ ಬಾಜಪೇಯಿ ಪರಿಗಣಿಸಿದರು. ಅಂತಿಮವಾಗಿ, ನಿರ್ಲಕ್ಷ್ಯದಿಂದ ಹಿರಿಯ ಮಹಿಳೆಯನ್ನು ಸಂಕಷ್ಟಕ್ಕೆ ದೂಡಿದ ಲುಫ್ತಾನ್ಸಾ ಹಾಗೂ ಬ್ರಿಟಿಷ್‌ ವಿಮಾನಯಾನ ಸಂಸ್ಥೆಗಳು ಮಹಿಳೆಗೆ ಕ್ರಮವಾಗಿ ತಲಾ ₹ 30 ಲಕ್ಷ ಮತ್ತು ₹ 20 ಲಕ್ಷ ಪರಿಹಾರ ನೀಡುವಂತೆ ಹಾಗೂ ಘಟನೆ ನಡೆದ ದಿನದಿಂದ ಇಂದಿನವರೆಗೆ ವಾರ್ಷಿಕ ಶೇ.5 ಬಡ್ಡಿ ಪಾವತಿಸುವಂತೆ ಆದೇಶಿಸಿತು. ಪರಿಹಾರ ಪಾವತಿಗೆ 8 ವಾರಗಳ ಗಡುವು ನೀಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Harsharn_Kaur_Dhaliawal_v__Lufthansa_German_Airlines_and_ors.pdf
Preview
Kannada Bar & Bench
kannada.barandbench.com