ಕರ್ನಾಟಕ ಮೂಲದ ಜಾಗತಿಕ ಕಾಫೀ ಉದ್ಯಮ ಕೆಫೆ ಕಾಫಿ ಡೇಯ ಮೂಲ ಕಂಪನಿಯಾದ ಕಾಫಿ ಡೇ ಎಂಟರ್ ಪ್ರೈಸರ್ಸ್ ಲಿಮಿಟೆಡ್ (ಸಿಡಿಇಎಲ್) ವಿರುದ್ಧ ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಆರಂಭಿಸಿದ್ದ ದಿವಾಳಿ ಪ್ರಕ್ರಿಯೆಗೆ ಚೆನ್ನೈನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಬುಧವಾರ ತಡೆ ನೀಡಿದೆ.
ಆಗಸ್ಟ್ 8 ರಂದು ಸಿಡಿಇಎಲ್ ವಿರುದ್ಧ ದಿವಾಳಿತನದ ಪ್ರಕ್ರಿಯೆ ಆರಂಭಿಸಿ ಬೆಂಗಳೂರು ಪೀಠ ಹೊರಡಿಸಿದ್ದ ಆದೇಶಕ್ಕೆ ನ್ಯಾಯಾಂಗ ಸದಸ್ಯ ಶರದ್ ಕುಮಾರ್ ಶರ್ಮಾ ಮತ್ತು ತಾಂತ್ರಿಕ ಸದಸ್ಯ ಜತೀಂದ್ರನಾಥ್ ಸ್ವೈನ್ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ.
ಕಾಫಿ ಡೇ ₹228.45 ಕೋಟಿಯಷ್ಟು ಸುಸ್ತಿದಾರನಾಗಿದ್ದು ಇದರಿಂದಾಗಿ ಅದು ದಿವಾಳಿಯಾಗಿದೆ ಎಂದು ಘೋಷಿಸುವಂತೆ ಸಿಡಿಇಎಲ್‌ಗೆ ಸಾಲ ನೀಡಿದ್ದ ಸಂಸ್ಥೆಗಳಲ್ಲಿ ಒಂದಾದ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ (ಐಡಿಬಿಐಟಿಎಸ್ಎಲ್) ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿತ್ತು.
ಕಾಫಿ ಡೇ ಎಂಟರ್‌ಪ್ರೈಸಸ್‌ನ ನಿರ್ದೇಶಕಿ (ಕಾಫಿ ಡೇ ಪ್ರವರ್ತಕ ದಿ. ವಿ ಜಿ ಸಿದ್ಧಾರ್ಥ ಅವರ ಪತ್ನಿ) ಮಾಳವಿಕಾ ಹೆಗ್ಡೆ ಅವರು ಎನ್‌ಸಿಎಲ್‌ಟಿ ಆದೇಶವನ್ನು ಪ್ರಶ್ನಿಸಿದ್ದರು. ದಿವಾಳಿ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 7ರ ಅಡಿಯಲ್ಲಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ (ಸಿಐಆರ್‌ಪಿ) ಹೂಡುವಂತೆ ಮನವಿ ಮಾಡಲು ಐಡಿಬಿಐಟಿಎಸ್ಎಲ್‌ಗೆ ಯಾವುದೇ ಅಧಿಕಾರವಿಲ್ಲ, ಏಕೆಂದರೆ ಅದು ಹಣಕಾಸಿನ ಸಾಲದಾತನಲ್ಲ ಎಂದು ಅವರು ವಾದಿಸಿದ್ದರು.
ಆದರೆ ಈ ವಿಚಾರವನ್ನು ನಂತರದ ಹಂತದಲ್ಲಿ ಅರ್ಹತೆಯ ಆಧಾರದಲ್ಲಿ ಪರಿಗಣಿಸುವುದಾಗಿ ಹೇಳಿದ ಎನ್‌ಸಿಎಲ್‌ಎಟಿ ಪ್ರತ್ಯುತ್ತರ ಪ್ರಮಾಣಪತ್ರ ಸಲ್ಲಿಸುವಂತೆ ಐಡಿಬಿಐಟಿಎಸ್ಎಲ್‌ಗೆ ಮೂರು ವಾರಗಳ ಕಾಲಾವಕಾಶ ನೀಡಿತು.
"ಈ ಹಂತದಲ್ಲಿ, ಸೆಕ್ಷನ್ 7 ರ ಅಡಿಯಲ್ಲಿ ವಿಚಾರಣೆಗೆ ಮುಂದಾದ ಪ್ರತಿವಾದಿಯು (ಐಟಿಎಸ್ಎಲ್) ಮಾಡಿದ ಕಾರ್ಯವಿಧಾನದಲ್ಲಿನ ದೋಷಕ್ಕೆ ಸಂಬಂಧಿಸಿದಂತೆ ಪಕ್ಷಕಾರರ ವಿಸ್ತರಿಸಿದ ವಾದಗಳನ್ನು ಮಾತ್ರ ನಾವು ಆಲಿಸಲಿದ್ದೇವೆ" ಎಂದು ಎನ್‌ಸಿಎಲ್‌ಎಟಿ ಹೇಳಿತು.