ಸೇವೆ ಪಡೆದೂ ಹಣ ಪಾವತಿಸದ ಬ್ಲೂಸ್ಮಾರ್ಟ್ ಅಂಗಸಂಸ್ಥೆ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಎನ್‌ಸಿಎಲ್‌ಟಿ ಅನುಮತಿ

ಏಪ್ರಿಲ್ 2024 ಮತ್ತು ಏಪ್ರಿಲ್ 2025 ರ ನಡುವೆ ತಾನು ನೀಡಿದ್ದ ಸೇವೆಗೆ ಪ್ರತಿಯಾಗಿ ₹5.84 ಕೋಟಿ ಹಣ ಪಾವತಿಸದಿರುವ ಬಗ್ಗೆ ಗೂಗಲ್ ಮ್ಯಾಪ್ಸ್ ಸೇವೆಗಳ ಅಧಿಕೃತ ರೀಸೆಲರ್ ಲೆಪ್ಟನ್ ಸಾಫ್ಟ್‌ವೇರ್‌, ಜೂನ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
BluSmart Electric vehicle
BluSmart Electric vehicle
Published on

ಈಗಾಗಲೇ ಹಣಕಾಸು ತೊಂದರೆ ಎದುರಿಸಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆಗೆ (ಸಿಐಆರ್‌ಪಿ) ಒಳಗಾಗಿರುವ ಭಾರತೀಯ ಎಲೆಕ್ಟ್ರಿಕ್ ಸಂಚಾರಿ ಸೇವಾ ಸ್ಟಾರ್ಟಪ್ ಬ್ಲೂ-ಸ್ಮಾರ್ಟ್ ಮೊಬಿಲಿಟಿ ಲಿಮಿಟೆಡ್ ಅಂಗಸಂಸ್ಥೆಯಾದ ಬ್ಲೂಸ್ಮಾರ್ಟ್ ಮೊಬಿಲಿಟಿ ಟೆಕ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಲು ಲೆಪ್ಟನ್ ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ ಅಂಡ್‌ ರಿಸರ್ಚ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅಹಮದಾಬಾದ್ ಪೀಠ ಪುರಸ್ಕರಿಸಿದೆ.

ಇವಿ ರೈಡ್ ಪ್ಲಾಟ್‌ಫಾರ್ಮ್‌ನ ಮ್ಯಾಪಿಂಗ್ ಮತ್ತು ರೂಟಿಂಗ್ ಸಿಸ್ಟಮ್‌ಗಳಿಗೆ ಬಳಸುವ ಗೂಗಲ್ ನಕ್ಷೆ ಆಧಾರಿತ ಜಿಯೋಸ್ಪೇಷಿಯಲ್ ಮತ್ತು ಎಪಿಐ ಸೇವೆಗಳ ಬಳಕೆಗೆ ₹5.84 ಕೋಟಿ ಬಾಕಿ ಪಾವತಿಸದೆ ಸುಸ್ತಿದಾರನಾಗಿರುವ  ಬಗ್ಗೆ ಬ್ಲೂಸ್ಮಾರ್ಟ್ ಮೊಬಿಲಿಟಿ ಟೆಕ್ ವಿರುದ್ಧ ಲೆಪ್ಟನ್ ಅರ್ಜಿ ಸಲ್ಲಿಸಿತ್ತು.

Also Read
ಭೂಷಣ್ ಪವರ್‌ ದಿವಾಳಿ ಪ್ರಕ್ರಿಯೆ: ಜೆಎಸ್‌ಡಬ್ಲ್ಯೂ ಪರಿಹಾರೋಪಾಯ ಯೋಜನೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಪ್ರಧಾನ ಮತ್ತು ನವೀಕರಣ ಒಪ್ಪಂದದ ಅಡಿಯಲ್ಲಿ ಒದಗಿಸಲಾದ ಅಂತಹ ಮ್ಯಾಪಿಂಗ್ ಮತ್ತು ಎಪಿಐ ಸೇವೆಗಳಿಗೆ ಬ್ಲೂಸ್ಮಾರ್ಟ್ ಮೊಬಿಲಿಟಿ ಟೆಕ್ ಹಣ ಪಾವತಿಸಿಲ್ಲ. ಇಂತಹ ಪ್ರಕರಣಕ್ಕೆ ತಡೆ ನೀಡಿದ ಉದಾಹರಣೆಗಳು ಈ ಹಿಂದೆ ಇಲ್ಲ ಎಂದು ಅಕ್ಟೋಬರ್ 14 ರಂದು, ನ್ಯಾಯಾಂಗ ಸದಸ್ಯ ಶಮ್ಮಿ ಖಾನ್ ಮತ್ತು ತಾಂತ್ರಿಕ ಸದಸ್ಯ ಸಂಜೀವ್ ಶರ್ಮಾ ಅವರಿದ್ದ ಪೀಠ ತೀರ್ಪು ನೀಡಿತು.  

ಏಪ್ರಿಲ್ 2024 ಮತ್ತು ಏಪ್ರಿಲ್ 2025 ರ ನಡುವೆ ತಾನು ನೀಡಿದ್ದ ಸೇವೆಗೆ ಪ್ರತಿಯಾಗಿ ₹5.84 ಕೋಟಿ ಹಣ ಪಾವತಿಸದಿರುವ ಬಗ್ಗೆ ಗೂಗಲ್ ಮ್ಯಾಪ್ಸ್ ಸೇವೆಗಳ ಅಧಿಕೃತ ರೀಸೆಲರ್ ಲೆಪ್ಟನ್ ಸಾಫ್ಟ್‌ವೇರ್‌, ಜೂನ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರಲ್ಲಿ ₹5.39 ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸೇವಾ ಶುಲ್ಕವಾದರೆ, ₹44.98 ಲಕ್ಷ ಹಣವು ಒಪ್ಪಂದದ ಅನ್ವಯ ಬಾಕಿ ಹಣಕ್ಕೆ ನೀಡಬೇಕಾದ ಶೇ.2.5 ಬಡ್ಡಿಯಾಗಿದೆ.

ಒಪ್ಪಂದ ಮುಗಿದ ಬಳಿಕವೂ ಗೂಗಲ್‌ ಆನ್‌ ಡಿಮಾಂಡ್‌ ರೈಸ್‌ ಅಂಡ್‌ ಡೆಲಿವರೀಸ್‌ ಸೇವೆಯನ್ನು ಬ್ಲೂಸ್ಮಾರ್ಟ್‌ ಬಳಸುತ್ತಿತ್ತು. ಈ ಸಂಬಂಧ ತಾನು ಪ್ರತಿ ತಿಂಗಳೂ ಇನ್‌ವಾಯ್ಸ್‌ ಕಳಿಸುತ್ತಿದ್ದೆ. 3 ಮೇ 2025 ರಂದು ನೀಡಿದ ಡಿಮಾಂಡ್ ನೋಟೀಸ್ ಬಳಿಕವೂ, ಬಾಕಿ ಹಣ ಪಾವತಿಯಾಗದೆ ಉಳಿದಿತ್ತು ಎಂಬುದು ಲೆಪ್ಟನ್‌ ವಾದವಾಗಿತ್ತು.

Also Read
ಜೆಎಸ್‌ಡಬ್ಲ್ಯೂ ಅರ್ಜಿ ಬಾಕಿ ಹಿನ್ನೆಲೆ: ಭೂಷಣ್ ಪವರ್ ದಿವಾಳಿ ಅರ್ಜಿ ಕುರಿತು ಯಥಾಸ್ಥಿತಿಗೆ ಸುಪ್ರೀಂ ಆದೇಶ

ಆದರೆ ಬ್ಲೂಸ್ಮಾರ್ಟ್‌ ಹೊಸ ಆಡಳಿತ ಮಂಡಳಿ ಇದನ್ನು ಒಪ್ಪಲಿಲ್ಲ. ಒಪ್ಪಂದ ಮುಗಿದ ಬಳಿಕ ಇನ್ವಾಯ್ಸುಗಳು ಅಮಾನ್ಯವಾಗುತ್ತವೆ. ಬಾಕಿ ಹಣ ವಸೂಲಿಗೆ ನಡೆಸಲಾಗುವ ದಿವಾಳಿ ಪ್ರಕ್ರಿಯೆಯ ಚಾಲನೆ ನೀಡಲು ಅಗತ್ಯವಾದ ₹1 ಕೋಟಿ ಹಣಕ್ಕಿಂತ ಬಾಕಿ ಮೊತ್ತ ಕಡಿಮೆ ಇದೆ ಎಂದು ಅದು ವಾದಿಸಿತು. ಮೊಬಿಲಾಕ್ಸ್‌ ಇನ್ನೋವೇಷನ್ಸ್‌ ಮತ್ತು ಕಿರುಸಾ ಸಾಫ್ಟ್‌ವೇರ್‌ ನಡುವಣ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಲೆಪ್ಟನ್‌ ಸಲ್ಲಿಸಿದ್ದ ಅರ್ಜಿಗೆ ತಡೆ ನೀಡಬೇಕಿತ್ತು. ಇದು ಒಪ್ಪಂದದ ಕುರಿತಾದ ವ್ಯಾಜ್ಯವೇ ಹೊರತು ದಿವಾಳಿ ಪ್ರಕ್ರಿಯೆಗೆ ಎಳೆಸುವಂತಹ ವ್ಯಾಜ್ಯವಲ್ಲ ಎಂದು ಅದು ವಾದಿಸಿತು.  

ಬ್ಲೂಸ್ಮಾರ್ಟ್‌ನ ಈ ವಾದಗಳನ್ನು ಎನ್‌ಸಿಎಲ್‌ಟಿ ಮನ್ನಿಸಿಲ್ಲ. ಬ್ಲೂಸ್ಮಾರ್ಟ್‌ ಸೇವೆ ಪಡೆಯುವುದನ್ನು ಮುಂದುವರೆಸಿದ್ದು ಹಣ ಪಾವತಿ ಬಾಕಿ ಇರುವುದನ್ನು ಒಪ್ಪಿಕೊಂಡಿದೆ. ಭಾರತೀಯ ಒಪ್ಪಂದ ಕಾಯಿದೆ 1872ರ ಸೆಕ್ಷನ್‌ 70 ಮತ್ತು ಕ್ವಾಂಟಮ್ ಮೆರುಯಿಟ್‌‌ ತತ್ವದನ್ವಯ ಲೆಪ್ಟನ್‌ಗೆ ಹಕ್ಕು ಇದೆ ಎಂದ ನ್ಯಾಯಮಂಡಳಿ ಇನ್‌ವಾಯ್ಸ್‌ಗಳು ಒಪ್ಪಂದದ ಆಧಾರವನ್ನು ಹೊಂದಿಲ್ಲ ಎಂಬ ಬ್ಲೂಸ್ಮಾರ್ಟ್‌ ವಾದವನ್ನು ಪೀಠ ತಿರಸ್ಕರಿಸಿತು. ಅಲ್ಲದೆ ಇಂತಹ ಪ್ರಕರಣಕ್ಕೆ ತಡೆ ನೀಡಿದ ಉದಾಹರಣೆಗಳು ಈ ಹಿಂದೆ ಇಲ್ಲ ಎಂದಿತು.

Kannada Bar & Bench
kannada.barandbench.com