
ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್‌ಗಾಗಿ (ಬಿಪಿಎಸ್ಎಲ್) ಜೆಎಸ್‌ಡಬ್ಲ್ಯೂ ಸ್ಟೀಲ್‌ನ ₹19,700 ಕೋಟಿ ಪರಿಹಾರೋಪಾಯ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಕಲ್ಯಾಣಿ ಟ್ರಾನ್ಸ್ಕೋ ಮತ್ತು ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ನಡುವಣ ಪ್ರಕರಣ].
ವಿಳಂಬಕ್ಕೆ ಸಾಲಗಾರರ ಸಮಿತಿ (ಕಮಿಟಿ ಆಫ್ ಕ್ರೆಡಿಟರ್ಸ್ - ಸಿಒಸಿ) ಇಲ್ಲವೇ ಯಶಸ್ವಿ ಪರಿಹಾರೋಪಾಯ ಸಲ್ಲಿಸಿದ್ದ ಅರ್ಜಿದಾರರು (ಸಕ್ಸಸ್‌ಫುಲ್ ರೆಸಲ್ಯೂಷನ್ ಅಪ್ಲಿಕೆಂಟ್) ಹೊಣೆಗಾರರಲ್ಲ. ಅವರು ಸಮಸ್ಯೆಯನ್ನು ಬಗೆಹರಿಸಲು ಹಾಗೂ ಯೋಜನೆ ಜಾರಿಗೆ ಯತ್ನಿಸುತ್ತಿದ್ದರು. ಎಸ್‌ಆರ್‌ಎ ನೀಡಿರುವ ಕಂಪಲ್ಸರರಿ ಕನ್ವರ್ಟಬಲ್ ಡಿಬೆಂಚರ್‌ಗಳನ್ನು ಈಕ್ವಿಟಿ ರೂಪದಲ್ಲಿ ಪರಿಗಣಿಸಬೇಕು. ಸಿಒಸಿ ತೆಗೆದುಕೊಳ್ಳುವ ವಾಣಿಜ್ಯ ನಿರ್ಧಾರಗಳಲ್ಲಿ ತಾನು ಹಸ್ತಕ್ಷೇಪ ಮಾಡಲಾಗದು. ಒಮ್ಮೆ ಸಿಒಸಿ ಪರಿಹಾರೋಪಾಯ ಯೋಜನೆ ಅನುಮೋದಿಸಿದ ಬಳಿಕ ಯಾವುದೇ ದಾವೆಯನ್ನು ಮತ್ತೆ ತೆರೆಯಲು ಅವಕಾಶ ನೀಡುವುದು ಕಾನೂನಿನ ನಿಬಂಧನೆಗಳ ಮೇಲೆ ನಡೆಸುವ ದಾಳಿಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಹಾಗೂ ವಿನೋದ್ ಚಂದ್ರನ್ ಅವರಿದ್ದ ಪೀಠ ಹೇಳಿದೆ.
ಬಿಪಿಎಸ್ಎಲ್ ಅನ್ನು ಲಾಭದಾಯಕ ಕಂಪನಿಯನ್ನಾಗಿ ಮಾಡುವುದಕ್ಕಾಗಿ ಜೆಎಸ್‌ಡಬ್ಲ್ಯೂ ಭಾರಿ ಮೊತ್ತ ಹೂಡಿಕೆ ಮಾಡಿದೆ. ಇಂತಹ ಕ್ರಮಕ್ಕಾಗಿ ಜೆಎಸ್‌ಡಬ್ಲ್ಯೂವನ್ನು ಶಿಕ್ಷಿಸಲಾಗದು ಎಂದು ಅದು ಹೇಳಿದೆ.
ಸಾಲದ ಸುಳಿಗೆ ಸಿಲುಕಿದ್ದ ಭೂಷಣ್ ಪವರ್ ಅಂಡ್ ಸ್ಟೀಲ್ (ಬಿಪಿಎಸ್‌ಎಲ್ ) ಸಂಸ್ಥೆಗಾಗಿ ಜಎಸ್‌ಡಬ್ಲ್ಯೂ ಸ್ಟೀಲ್ ಪ್ರಸ್ತಾಪಿಸಿದ್ದ ₹19,700 ಕೋಟಿ ಪರಿಹಾರೋಪಾಯ ಯೋಜನೆ ರದ್ದುಗೊಳಿಸಿ ಸಂಸ್ಥೆ ದಿವಾಳಿಯಾಗಿದೆ ಎಂದು ಆದೇಶಿಸಿ ಮೇ 2ರಂದು ತಾನು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ಜುಲೈನಲ್ಲಿ ಹಿಂಪಡೆದಿತ್ತು.
ಯೋಜನೆ ರದ್ದುಗೊಳಿಸಿ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ನೀಡಿದ್ದ ತೀರ್ಪು ಯೋಜನೆಯನ್ನು ಅನುಮೋದಿಸುವಲ್ಲಿ ಸಿಒಸಿ ತಪ್ಪು ಮಾಡಿದೆ ಎಂದು ಹೇಳಿತ್ತು. ಆದರೆ ಈ ತೀರ್ಪು ನಿರ್ಣಾಯಕ ಸಂಗತಿಗಳು ಮತ್ತು ದಾಖಲೆಗಳಲ್ಲಿ ಅಧಿಕೃತವಾಗಿ ಕಂಡುಬರುವ ಕಾನೂನಾತ್ಮಕ ಅಂಶಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ ಎಂದು ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠ ಜುಲೈನಲ್ಲಿ ತಿಳಿಸಿತ್ತು.