ಅಂತಾರಾಷ್ಟ್ರೀಯ ಸಾಲದಾತರಿಂದ ದಿವಾಳಿ ಪ್ರಕ್ರಿಯೆ ಚಾಲನೆಗೆ ಅರ್ಜಿ: ಬೈಜೂಸ್‌ಗೆ ನೋಟಿಸ್‌ ಜಾರಿ ಮಾಡಿದ ಎನ್‌ಸಿಎಲ್‌ಟಿ

ಅಮೆರಿಕಾ ಮೂಲದ ಸಾಲದಾತ ಕಂಪೆನಿಯು ಬೈಜೂಸ್‌ ₹8,000 ಕೋಟಿ ಪಾವತಿಸಲು ವಿಫಲವಾಗಿದೆ ಎಂದು ವಾದಿಸಿದೆ.
Byju's
Byju's

ಅಂತಾರಾಷ್ಟ್ರೀಯ ಸಾಲದಾತ ಸಂಸ್ಥೆ ಗ್ಲಾಸ್‌ ಟ್ರಸ್ಟ್‌ ಎಲ್‌ಎಲ್‌ಸಿಯು ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣವು (ಎನ್‌ಸಿಎಲ್‌ಟಿ) ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ನವೋದ್ಯಮವಾದ ಬೈಜೂಸ್‌ ಮಾತೃ ಸಂಸ್ಥೆ ಥಿಂಕ್‌ ಅಂಡ್‌ ಲರ್ನ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿ ಮಾಡಿದೆ.

ಅಮೆರಿಕಾದ ಬ್ಯಾಂಕಿಂಗೇತರ ಸಾಲದಾತ ಸಂಸ್ಥೆಯಾದ ಗ್ಲಾಸ್‌ ಟ್ರಸ್ಟ್‌ ಕಂಪೆನಿ ಎಲ್‌ಎಲ್‌ಸಿಯನ್ನು ಆಡಳಿತಾತ್ಮಕ ಏಜೆಂಟ್ ಆಗಿ 1.2 ಬಿಲಿಯನ್‌ ಡಾಲರ್‌ಗಳಷ್ಟು ಸಾಲ ನೀಡಿರುವ 100 ಸಾಲದಾತ ಸಂಸ್ಥೆಗಳು ನೇಮಿಸಿವೆ.

ಪಡೆದ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬೈಜೂಸ್‌ ವಿರುದ್ಧ ಗ್ಲಾಸ್‌ ಟ್ರಸ್ಟ್‌ ಎನ್‌ಸಿಎಲ್‌ಟಿ ಮೆಟ್ಟಿಲೇರಿದೆ. ಬೈಜೂಸ್‌ ₹8,000 ಕೋಟಿ ಪಾವತಿಸಲು ವಿಫಲವಾಗಿದೆ ಎಂದು ಗ್ಲಾಸ್‌ ಟ್ರಸ್ಟ್‌ ವಾದಿಸಿತು.

ಖೈತಾನ್‌ & ಕಂಪೆನಿ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, 2022ರಲ್ಲಿ ಸಾಲ ಮರುಪಾವತಿ ನಿಲ್ಲಿಸಿದ್ದು, ಅದು ಒಪ್ಪಿತ ಡಿಫಾಲ್ಟ್‌ ಆಗಿದೆ ಎಂದು ಹೇಳಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್‌ ಮತ್ತು ತಾಂತ್ರಿಕ ಸದಸ್ಯ ಮನೋಜ್‌ ಕುಮಾರ್‌ ದುಬೆ ಅವರ ನೇತೃತ್ವದ ಪೀಠವು ಬೈಜೂಸ್‌ಗೆ ನೋಟಿಸ್‌ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

Also Read
ಬೈಜೂಸ್‌ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಲು ಕೋರಿ ಎನ್‌ಸಿಎಲ್‌ಟಿ ಮೆಟ್ಟಿಲೇರಿದ ಮತ್ತೊಂದು ಸಂಸ್ಥೆ

ಗ್ಲಾಸ್‌ ಟ್ರಸ್ಟ್‌ ಕಂಪೆನಿಯಲ್ಲದೇ ಇತರೆ ಮೂರು ಸಂಸ್ಥೆಗಳು ಬೈಜೂಸ್‌ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಕೋರಿವೆ. ಸರ್ಫರ್‌ ಟೆಕ್ನಾಲಜೀಸ್‌ ಮೊದಲಿಗೆ ಅರ್ಜಿ ಸಲ್ಲಿಸಿದ್ದು, ಫೆಬ್ರವರಿ 6ರಂದು ಅದರ ವಿಚಾರಣೆ ನಡೆದಿತ್ತು.

ಬಿಪಿಒ ಟೆಲಿಪರ್ಫಾಮನ್ಸ್‌ ಬ್ಯುಸಿನೆಸ್‌ ಸರ್ವೀಸಸ್‌ ಎರಡನೇ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಎನ್‌ಸಿಎಲ್‌ಟಿಯು ಫೆಬ್ರವರಿ 8ರಂದು ನಡೆಸಿತ್ತು. ಇದಲ್ಲದೇ, ₹158 ಕೋಟಿ ಪಾವತಿಸದಿರುವುದಕ್ಕೆ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಬಿಸಿಸಿಐ ಕೋರಿತ್ತು.

Related Stories

No stories found.
Kannada Bar & Bench
kannada.barandbench.com