ಶೈಕ್ಷಣಿಕ ನವೋದ್ಯಮವಾದ ಬೈಜೂಸ್ ಮಾತೃಸಂಸ್ಥೆ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದಿವಾಳಿ ಮತ್ತು ದಿವಾಳಿತನ ಸಂಹಿತೆ ಅಡಿ ಪ್ರಕ್ರಿಯೆ ಆರಂಭಿಸುವಂತೆ ಬಿಪಿಒ ಟೆಲಿಪರ್ಫಾಮೆನ್ಸ್ ಬ್ಯುಸಿನೆಸ್ ಸರ್ವೀಸ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಂಪೆನಿ ನ್ಯಾಯಾಧಿಕರಣವು (ಎನ್‌ಸಿಎಲ್‌ಟಿ) ಬುಧವಾರ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಂಗ ಸದಸ್ಯ ನಿವೃತ್ತ ನ್ಯಾಯಾಧೀಶರಾದ ಟಿ ಕೃಷ್ಣವಲ್ಲಿ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರ ನೇತೃತ್ವದ ವಿಶೇಷ ಪೀಠವು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಬೈಜೂಸ್‌ಗೆ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿದೆ.
ಬೈಜೂಸ್‌ನ ನಿರ್ವಹಣಾ ಸಾಲದಾತರಾದ ಟೆಲಿಫರ್ಮಾಮೆನ್ಸ್, ಫ್ರಾನ್ಸ್‌ನ ಬಹುರಾಷ್ಟ್ರೀಯ ಕಂಪೆನಿಯ ಭಾರತದ ಘಟಕವಾಗಿದೆ. ಕಿಂಗ್ ಸ್ಟಬ್ ಮತ್ತು ಕಸಿವಾ ಕಾನೂನು ಸಂಸ್ಥೆಯ ಮೂಲಕ ಕಳೆದ ವರ್ಷದ ನವೆಂಬರ್ 4ರಂದು ಅರ್ಜಿ ಸಲ್ಲಿಸಲಾಗಿದೆ. 2022ರ ಏಪ್ರಿಲ್ 16ರಂದು ಪಕ್ಷಕಾರರು ಸೇವಾ ಒಪ್ಪಂದ ಮಾಡಿಕೊಂಡಿದ್ದು, 2022ರ ಮಾರ್ಚ್ 14ರಿಂದ ಆಗಸ್ಟ್ ಅಂತ್ಯದವರೆಗೆ 21 ಇನ್‌ವಾಯ್ಸ್ (ರಸೀದಿ) ಮೂಲಕ ಹಣ ಪಾವತಿಗೆ ಕೋರಲಾಗಿದೆ. ಇವುಗಳಲ್ಲಿನ ಹಣವನ್ನು ಬೈಜೂಸ್ ಪಾವತಿಸಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
₹4.82 ಕೋಟಿ ಸಾಲದ ಬಾಕಿ ಮತ್ತು ₹21 ಲಕ್ಷ ಬಡ್ಡಿಯನ್ನು ಇದುವರೆಗೂ ಪಾವತಿಸಿಲ್ಲ ಎಂದು ಟೆಲಿಫರ್ಮಾಮೆನ್ಸ್ ಹೇಳಿದೆ.
ಈ ಅರ್ಜಿ ಹೊರತುಪಡಿಸಿ ಇನ್ನೂ ಎರಡು ಸಾಲದಾತ ಸಂಸ್ಥೆಗಳು ಬೈಜೂಸ್ ವಿರುದ್ಧ ದಿವಾಳಿ ಮತ್ತು ದಿವಾಳಿ ಪ್ರಕ್ರಿಯೆ ಆರಂಭಿಸಲು ಕೋರಿ ಮನವಿ ಸಲ್ಲಿಸಿವೆ.
ಈಚೆಗೆ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯಾದ ಸರ್ಫರ್ ಟೆಕ್ನಾಲಜೀಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 6ರಂದು ಬೆಂಗಳೂರಿನ ಎನ್‌ಸಿಎಲ್‌ಟಿ ವಿಚಾರಣೆ ನಡೆಸಿತ್ತು. ₹2.3 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಸರ್ಫರ್ ಟೆಕ್ನಾಲಜೀಸ್ ಅರ್ಜಿಯಲ್ಲಿ ಆರೋಪಿಸಿದೆ.
ಅಂತಾರಾಷ್ಟ್ರೀಯ ಸಾಲದಾತರಾಗಿರುವ ಎರಡನೇ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿಯನ್ನು ಇನ್ನಷ್ಟೇ ವಿಚಾರಣೆಗೆ ಪಟ್ಟಿ ಮಾಡಬೇಕಿದೆ. ಆ ಅರ್ಜಿಯಲ್ಲಿ ಬೈಜೂಸ್‌ನಿಂದ 1.2 ಬಿಲಿಯನ್ ಡಾಲರ್ ವಸೂಲಿಗೆ ಆದೇಶಿಸಬೇಕು ಎಂದು ಕೋರಲಾಗಿದೆ ಎನ್ನಲಾಗಿದೆ.
ಒಪ್ಪಂದದ ಪ್ರಕಾರ ₹158 ಕೋಟಿ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಬೈಜೂಸ್ ವಿರುದ್ಧ ಕಾರ್ಪೊರೇಟ್ ದಿವಾಳಿತನ ಪ್ರಕ್ರಿಯೆ ಆರಂಭಿಸಿದೆ. ಮಧ್ಯಸ್ಥಿಕೆಯ ಮೂಲಕ ಇದನ್ನು ಇತ್ಯರ್ಥಪಡಿಸಿಕೊಳ್ಳಲು ಬೈಜೂಸ್ ಪ್ರಯತ್ನಿಸುತ್ತಿದ್ದು, ಈ ವಿವಾದವೂ ಎನ್‌ಸಿಎಲ್‌ಟಿ ಮುಂದಿದೆ.