ಅತ್ಯಾಚಾರಕ್ಕೀಡಾದ ಅಪ್ರಾಪ್ತೆಯ ಗುರುತು ಬಹಿರಂಗ: ರಾಹುಲ್ ವಿರುದ್ಧ ಕ್ರಮ ಕೋರಿದ್ದ ಪಿಐಎಲ್‌ಗೆ ಎನ್‌ಸಿಪಿಸಿಆರ್‌ ಬೆಂಬಲ

ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಅಪ್ರಾಪ್ತ ಬಾಲಕಿಯ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಪೋಷಕರಿಗೆ ಸಾಂತ್ವನ ಹೇಳುತ್ತಿರುವ ಫೋಟೊ ಪ್ರಕಟಿಸಿದ್ದರು.
Rahul Gandhi
Rahul Gandhi Facebook

ದೆಹಲಿಯ ಚಿತಾಗಾರವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾಗಿದ್ದ 9 ವರ್ಷದ ಹೆಣ್ಣುಮಗಳೊಬ್ಬಳ ಗುರುತನ್ನು ಬಹಿರಂಗಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಬೆಂಬಲ ನೀಡುವುದಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

ರಾಹುಲ್‌ ಅವರ ಟ್ವೀಟನ್ನು ಟ್ವಿಟರ್‌ ತಡೆ ಹಿಡಿದಿದ್ದರೂ ಅಪರಾಧ ಹಾಗೇ ಉಳಿದಿದೆ ಎಂದು ಎನ್‌ಸಿಪಿಸಿಆರ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Also Read
ವಿಪಕ್ಷಗಳ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಷಡ್ಯಂತ್ರ: ದೆಹಲಿ ಹೈಕೋರ್ಟ್‌ ಮುಂದೆ ರಾಹುಲ್‌, ಸೋನಿಯಾ ಆಕ್ಷೇಪಣೆ

ರಾಹುಲ್‌ ಟ್ವೀಟ್‌ ಬಗ್ಗೆ ಆಕ್ಷೇಪಿಸಿ ಮಕರಂದ್ ಸುರೇಶ್ ಮ್ಹಡ್ಲೇಕರ್ ಎಂಬವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಎನ್‌ಸಿಪಿಸಿಆರ್‌ ವಕೀಲರು ವಾದ ಮಂಡಿಸಿದರು.

ಟ್ವಿಟರ್‌ ಪರವಾಗಿ ಇಂದು ಹಾಜರಿದ್ದ ಹಿರಿಯ ನ್ಯಾಯವಾದಿ ಸಜ್ಜನ್‌ ಪೂವಯ್ಯ ಭಾರತದಾದ್ಯಂತ ಪ್ರಾದೇಶಿಕವಾಗಿ ಟ್ವೀಟನ್ನು ನಿರ್ಬಂಧಿಸಲಾಗಿದೆ. ಆದರೆ ವಿಶ್ವದೆಲ್ಲೆಡೆ ಅದನ್ನು ನಿರ್ಬಂಧಿಸಲು ಸಾಧ್ಯವಾಗಿಲ್ಲ ಎಂದರು.

ಟ್ವಿಟರ್‌ನಲ್ಲಿ ಪ್ರತಿದಿನ ಸುಮಾರು 50 ಕೋಟಿ ಟ್ವೀಟ್‌ ಮಾಡಲಾಗುತ್ತದೆ. ಹೀಗಾಗಿ ರಾಹುಲ್‌ ಅವರ ಪೋಸ್ಟ್‌ ಮರು ಟ್ವೀಟ್‌ ಮಾಡಬಹುದಾದ ಎಲ್ಲಾ ಟ್ವೀಟ್‌ಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದರು.

ಅವರಿಗೆ ನೋಟಿಸ್‌ ನೀಡುವಂತೆ ಎನ್‌ಸಿಪಿಸಿಆರ್ ವಕೀಲರು ನ್ಯಾಯಾಲಯವನ್ನು ಕೋರಿದರಾದರೂ ಅರ್ಜಿದಾರರು ಹೊಸ ವಕೀಲರನ್ನು ನೇಮಿಸಿಕೊಂಡಿರುವುದರಿಂದ ಮುಂದಿನ ವಿಚಾರಣೆಯ ದಿನದಂದು ಈ ವಿಚಾರ ಪರಿಗಣಿಸುವುದಾಗಿ ತಿಳಿಸಿದ ನ್ಯಾಯಾಲಯ ಪ್ರಕರಣವನ್ನು ಡಿ. 7ಕ್ಕೆ ನಿಗದಿಪಡಿಸಿತು.

Related Stories

No stories found.
Kannada Bar & Bench
kannada.barandbench.com