ದೇಶದ ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಹಿರಿಯ ನ್ಯಾಯವಾದಿ, ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ)ಯಿಂದ ಕಣಕ್ಕಿಳಿದಿದ್ದ ಧನಕರ್ ಅವರು ಚಲಾವಣೆಯಾದ 725 ಮತಗಳಲ್ಲಿ 528 ಮತಗಳನ್ನು ಪಡೆದು 346 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವಾ (ಮಾರ್ಗರೇಟ್ ಕೂಡ ಕಾನೂನು ವಿದ್ಯಾರ್ಥಿನಿ, ಕೆಲಕಾಲ ವಕೀಲಿಕೆಯಲ್ಲಿ ತೊಡಗಿದ್ದವರು) 182 ಮತಗಳನ್ನು ಪಡೆದರೆ 15 ಮತಗಳು ಅಸಿಂಧುವಾಗಿವೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾಗಿದ್ದ ಧನಕರ್ ರಾಜಕೀಯಕ್ಕೆ ಧುಮುಕುವ ಮೊದಲು ವಕೀಲಿಕೆಯಲ್ಲಿ ಸಕ್ರಿಯರಾಗಿದ್ದವರು. 1989ರಲ್ಲಿ ರಾಜಸ್ಥಾನದ ಝುಂಝುನು ಕ್ಷೇತ್ರದಿಂದ 9 ನೇ ಲೋಕಸಭೆಗೆ ಧನಕರ್ ಆಯ್ಕೆಯಾದರು. ಇತ್ತೀಚೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಹೊಸದಾಗಿ ಮಂಜೂರು ಮಾಡಿದ ಚೇಂಬರ್ ಅನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದರು.
ಧನಕರ್ ಅವರೇ ಹೇಳಿಕೊಂಡಂತೆ ಅವರು ಒಲ್ಲದ ಮನಸ್ಸಿನಿಂದ ರಾಜಕೀಯಕ್ಕೆ ಬಂದವರು. ʼಬಾರ್ ಅಂಡ್ ಬೆಂಚ್ʼಗೆ 2020ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಅವರು “1989 ರಲ್ಲಿ (ಬೊಫೋರ್ಸ್ ಹಗರಣದ ಕುರಿತು ಇಡೀ ದೇಶದಲ್ಲಿ ಚರ್ಚೆಗಳು ನಡೆಯುತ್ತಿದ್ದಾಗ) ಝುಂಝುನು ಲೋಕಸಭಾ ಕ್ಷೇತ್ರದಿಂದ ಸ್ಪೃಧಿಸುವಂತೆ ತಿಳಿಸಿದಾಗ ನಾನು ದಿಢೀರನೆ ರಾಜಕೀಯ ಲೋಕಕ್ಕೆ ಜಿಗಿದೆ” ಎಂದು ಅವರು ತಿಳಿಸಿದ್ದರು.