[ಎನ್‌ಡಿಪಿಎಸ್ ಕಾಯಿದೆ] ಪೋಲೀಸರು ಔಪಚಾರಿಕತೆ ಪಾಲಿಸಿಲ್ಲ ಎಂಬುದು ಜಾಮೀನಿಗೆ ಆಧಾರವಲ್ಲ: ಕರ್ನಾಟಕ ಹೈಕೋರ್ಟ್

ಕಡ್ಡಾಯ ನಿಯಮಾವಳಿಗಳನ್ನು ಪಾಲಿಸದಿರುವ ಪೊಲೀಸರ ಇಂತಹ ಸಮಸ್ಯೆಗಳನ್ನು ವಿಚಾರಣೆಯ ಹಂತದಲ್ಲಿ ಪರಿಗಣಿಸಬಹುದೇ ವಿನಾ ಜಾಮೀನು ಅರ್ಜಿಯ ಸಮಯದಲ್ಲಿ ಅಲ್ಲ ಎಂದು ನ್ಯಾ. ಎಚ್ ಪಿ ಸಂದೇಶ್ ಹೇಳಿದರು.
Karnataka High Court

Karnataka High Court

ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌ ಕಾಯಿದೆ) ಅಡಿಯಲ್ಲಿ ಆರೋಪಿಗೆ ತಾಂತ್ರಿಕತೆಯ ಆಧಾರದ ಮೇಲೆ ಜಾಮೀನು ನೀಡಲಾಗದು ಮತ್ತು ಪೋಲೀಸರು ಔಪಚಾರಿಕತೆ ಅನುಸರಿಸಿಲ್ಲ ಎಂಬುದನ್ನು ಜಾಮೀನಿನ ಹಂತದಲ್ಲಿ ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. [ಜೊಶ್ವಿನ್‌ ಲೊಬೊ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಕಡ್ಡಾಯ ನಿಬಂಧನೆಗಳನ್ನು ಅನುಸರಿಸದಿರುವ ಪೊಲೀಸರ ಇಂತಹ ಸಮಸ್ಯೆಗಳನ್ನು ವಿಚಾರಣೆಯ ಹಂತದಲ್ಲಿ ಪರಿಗಣಿಸಬಹುದೇ ವಿನಾ ಜಾಮೀನು ಅರ್ಜಿಯ ಸಮಯದಲ್ಲಿ ಅಲ್ಲ ಎಂದು ನ್ಯಾ. ಎಚ್‌ ಪಿ ಸಂದೇಶ್ ಹೇಳಿದರು.

"ತಾಂತ್ರಿಕತೆಯ ಆಧಾರದ ಮೇಲೆ ಜಾಮೀನು ನೀಡಲಾಗದು ಮತ್ತು ಔಪಚಾರಿಕತೆ ಪಾಲನೆ ಕುರಿತು ಜಾಮೀನು ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂಬುದು ಈ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಉಲ್ಲೇಖಿಸಿರುವ ತೀರ್ಪುಗಳಲ್ಲಿ ಸ್ಪಷ್ಟವಾಗಿದೆ" ಎಂದು ಹೈಕೋರ್ಟ್ ಹೇಳಿದೆ.

Also Read
[ಚುಟುಕು] ಎನ್‌ಡಿಪಿಎಸ್‌ ಪ್ರಕರಣ: ಸಮೀರ್‌ ವಿರುದ್ಧ ಆರೋಪ ಮಾಡಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್‌

ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸಾಗಣೆ ಆರೋಪಿಯಾದ ಅರ್ಜಿದಾರರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅರ್ಜಿದಾರರಿಂದ ವಾಣಿಜ್ಯ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದು ಪೊಲೀಸರು ಕಡ್ಡಾಯ ನಿಬಂಧನೆಗಳನ್ನು ಪಾಲಿಸದ ಕಾರಣಕ್ಕೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.

(ಜಾಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆವಿಶೇಷ ಅಧಿಕಾರ ಒದಗಿಸುವ) ಸಿಆರ್‌ಪಿಸಿ ಸೆಕ್ಷನ್ 439ರ ಅಡಿ ಅಧಿಕಾರ ಚಲಾಯಿಸುವಾಗ ದಾಖಲೆಯಲ್ಲಿರುವ ಸಾಕ್ಷ್ಯವನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಕೂಡ ಅದು ಹೇಳಿದೆ.

Also Read
[ಆರ್ಯನ್ ಖಾನ್ ಪ್ರಕರಣ] ಅಮಲು ಪದಾರ್ಥ ಪೂರೈಕೆ ಆರೋಪಿಗೆ ಜಾಮೀನು ಮಂಜೂರು ಮಾಡಿದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ

ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ತೆರಳುವವರಿಗೆ ಎಕ್ಸ್‌ಟೆಸಿ ಮಾತ್ರೆಗಳು, ಹ್ಯಾಶ್ ಮತ್ತು ಎಲ್‌ಎಸ್‌ಡಿ ಸ್ಟ್ರಿಪ್‌ಗಳಂತಹ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದಾರೆ ಎಂಬುದು ಅರ್ಜಿದಾರರ ವಿರುದ್ಧದ ಆರೋಪವಾಗಿದೆ.

ಸಹಾಯಕ ಪೊಲೀಸ್ ಆಯುಕ್ತರು ಶೋಧ ನಡೆಸಲು ಆರೋಪಿ ಒಪ್ಪಿಗೆ ನೀಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಗೆಜೆಟೆಡ್ ಅಧಿಕಾರಿಯೂ ಆಗಿರುವ ಸಹಾಯಕ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಖುದ್ದು ಶೋಧ ನಡೆದಿದ್ದರೂ, ಅವರು ಅದೇ ಇಲಾಖೆಗೆ ಸೇರಿದವರು ಎಂಬ ವಾದವನ್ನು ಪ್ರಾಸಿಕ್ಯೂಷನ್‌ ನಂಬಲು ಆಧಾರವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದಲ್ಲದೆ, ಪ್ರಕರಣವನ್ನು ದಾಖಲಿಸಿದವರು ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಯಲ್ಲ ಮತ್ತು ಅದು ಎನ್‌ಡಿಪಿಎಸ್ ಕಾಯಿದೆಗೆ ವಿರುದ್ಧವಾಗಿದೆ ಎಂಬ ವಾದ ವಿಚಾರಣೆಯ ಹಂತದಲ್ಲಿ ನಿರ್ಧರಿಸಬೇಕಾದ ಸಂಗತಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಎನ್‌ಸಿಬಿ ಸೂಪರಿಂಟೆಂಡೆಂಟ್‌ ಮತ್ತು ಆರ್‌ ಪೌಲ್‌ಸಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ ಎನ್‌ಡಿಪಿಎಸ್ ಕಾಯಿದೆಯ ಔಪಚಾರಿಕತೆ ಪಾಲಿಸದಿರುವುದು ಆರೋಪಿಗೆ ಜಾಮೀನು ನೀಡಲು ಕಾರಣವಾಗದು ಎಂದಿತು.

ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 37 (ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧಗಳು) ಅಡಿಯಲ್ಲಿ, ಆರೋಪಿ ತಪ್ಪಿತಸ್ಥನಲ್ಲ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗುವ ಸಾಧ್ಯತೆಯಿಲ್ಲ ಎಂದು ನಂಬಲು ಸಮಂಜಸವಾದ ಆಧಾರವಿಲ್ಲದಿದ್ದರೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಸಮಾಜಕ್ಕೆ ವಿರುದ್ಧವಾದ ಇಂತಹ ಅಪರಾಧಗಳನ್ನು ಎದುರಿಸಲು ಭಾರತೀಯ ದಂಡ ಸಂಹಿತೆ (ಐಪಿಸಿ) ಸಾಕಾಗುವುದಿಲ್ಲ ಎಂದು ಕಂಡುಬಂದಿದ್ದರಿಂದ ಎನ್‌ಡಿಪಿಎಸ್‌ ವಿಶೇಷ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ, ರಾಜ್ಯ ಸರ್ಕಾರದ ಪರವಾಗಿ ವಕೀಲ ಕೃಷ್ಣಕುಮಾರ್ ಕೆ.ಕೆ. ವಾದ ಮಂಡಿಸಿದರು.

ಆದೇಶವನ್ನುಇಲ್ಲಿ ಓದಿ:

Attachment
PDF
Joswin_Lobo_v_State (1).pdf
Preview

Related Stories

No stories found.
Kannada Bar & Bench
kannada.barandbench.com