

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ರಾಜ್ಯದಾದ್ಯಂತ ಡಿಸೆಂಬರ್ 13ರಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳೂ ಸೇರಿ ಒಂದು ಕೋಟಿಗೂ ಅಧಿಕ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಸಂಬಂಧಪಟ್ಟವರಿಗೆ ₹3 ಸಾವಿರ ಕೋಟಿಗೂ ಅಧಿಕ ಪರಿಹಾರ ಕೊಡಿಸಲಾಗಿದೆ.
ಹೈಕೋರ್ಟ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಈ ವರ್ಷದ ಕೊನೆಯ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.
ಲೋಕ ಅದಾಲತ್‌ಗಾಗಿ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ, ಕಲಬುರ್ಗಿ ಪೀಠಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳೂ ಸೇರಿ ಒಟ್ಟು 971 ಪೀಠಗಳನ್ನು ಸ್ಥಾಪಿಸಲಾಗಿತ್ತು. ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ಬಾಕಿ ಇದ್ದ ಒಟ್ಟು 1,107 ಪ್ರಕರಣಗಳು, ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿದ್ದ 3,00,289 ಪ್ರಕರಣಗಳು ಸೇರಿ ಒಟ್ಟು 3,01,396 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೆ, 1,01,64,841 ವ್ಯಾಜ್ಯಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಒಟ್ಟಾರೆ 1,04,66,237 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಮೂಲಕ ಸಂಬಂಧಪಟ್ಟವರಿಗೆ ₹3,103 ಕೋಟಿ ಪರಿಹಾರ ಒದಗಿಸಲಾಗಿದೆ ಎಂದರು.
ರಾಜ್ಯದಾದ್ಯಂತ ಒಟ್ಟು 2,469 ವೈವಾಹಿಕ ಪ್ರಕರಣಗಳು ₹8,14,33,139 ಮೊತ್ತಕ್ಕೆ ಇತ್ಯರ್ಥ. 367 ದಂಪತಿ ರಾಜಿ ಸಂಧಾನದ ಮೂಲಕ ಒಂದಾಗಿ, ಸಹಜೀವನ ನಡೆಸಲು ನಿರ್ಧಾರ.
3,673 ವಿಭಾಗ ದಾವೆಗಳು (ಪಾರ್ಟಿಷನ್ ಸೂಟ್) ₹43 ಕೋಟಿ ಪರಿಹಾರ ಮೊತ್ತದೊಂದಿಗೆ ವಿಲೇವಾರಿ; 4,660 ಮೋಟಾರು ವಾಹನ ಅಪರಾಧ ಪರಿಹಾರ (ಎಂವಿಸಿ) ಪ್ರಕರಣಗಳು ₹297 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ.
925 ಎಂವಿಸಿ ಅಮಲ್ಜಾರಿ ಪ್ರಕರಣಗಳು ₹74 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ; 601 ಭೂಸ್ವಾಧೀನ (ಎಲ್‌ಎಸಿ) ಅಮಲ್ಜಾರಿ ಪ್ರಕರಣಗಳ ವಿಲೇವಾರಿ, ₹121 ಕೋಟಿ ಪರಿಹಾರ; 4,432 ಇತರ ಅಮಲ್ಜಾರಿ ಪ್ರಕರಣಗಳು ₹264 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ.
18 ರೇರಾ ಪ್ರಕರಣಗಳು ₹4 ಕೋಟಿ ಪರಿಹಾರ ಮೊತ್ತಕ್ಕೆ ವಿಲೇವಾರಿ. 13,517 ಚೆಕ್ ಬೌನ್ಸ್ ಪ್ರಕರಣಗಳು ಇತ್ಯರ್ಥ, ₹633 ಕೋಟಿ ಪರಿಹಾರ.
ಸಾಲ ವಸೂಲಾತಿ ನ್ಯಾಯ ಮಂಡಳಿಯ 150 ಪ್ರಕರಣಗಳು ₹73 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ; 157 ಗ್ರಾಹಕ ವ್ಯಾಜ್ಯ ಪ್ರಕರಣಗಳು ₹8 ಕೋಟಿ ಪರಿಹಾರ ಮೊತ್ತಕ್ಕೆ ವಿಲೇವಾರಿ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 24,29,461 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, ₹56 ಕೋಟಿ ಗಳಿಗೂ ಅಧಿಕ ಮೊತ್ತದ ದಂಡ ಸಂಗ್ರಹಿಸಲಾಗಿದೆ. ಇದಲ್ಲದೆ, ಸಾರಿಗೆ ಇಲಾಖೆಗೆ ಸಂಬಂಧಿಸಿದ ಒಟ್ಟು 902 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹29,66,564 ದಂಡ ವಿಧಿಸಲಾಗಿದೆ.
ಈ ಬಾರಿಯ ಲೋಕ ಅದಾಲತ್‌ನಲ್ಲಿ 5 ವರ್ಷಕ್ಕೂ ಹಳೆಯ 2,268 ಪ್ರಕರಣಗಳು, 10 ವರ್ಷಕ್ಕೂ ಹಳೆಯ 351 ಹಾಗೂ 15 ವರ್ಷಕ್ಕೂ ಹಳೆಯ 56 ಪ್ರಕರಣಗಳೂ ಸೇರಿ ಒಟ್ಟು 2,675 ಹಳೇ ಪ್ರಕರಣಗಳ ಇತ್ಯರ್ಥ.
ಹಿರಿಯ ನಾಗರಿಕರಿಗೆ ಸಂಬಂಧಿಸಿದ 2,144 ಪ್ರಕರಣಗಳ ವಿಲೇವಾರಿ. 92 ವರ್ಷದ ಮಹಿಳೆಯೊಬ್ಬರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ಇತ್ಯರ್ಥ. ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಸಂಬಂಧಿಸಿದ 19 ವರ್ಷ ಹಳೆಯ ಪಾಲು ವಿಭಾಗ ಮೊಕದ್ದಮೆ ವಿಲೇವಾರಿ.
ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿದ್ದ ಮಾಜಿ ಕ್ರಿಕೆಟಿಗ ಸದಾನಂದ ವಿಶ್ವನಾಥ್ ಅವರ ಪ್ರಕರಣ ಇತ್ಯರ್ಥ.
ವಿಜಯಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿದ್ದ ವಾಣಿಜ್ಯ ಮೊಕದ್ದಮೆ ₹21 ಕೋಟಿ ಪರಿಹಾರ ಮೊತ್ತದೊಂದಿಗೆ ವಿಲೇವಾರಿ.
ಜಾಗೃತಿ ಅಭಿಯಾನ: ಇದೇ ವೇಳೆ, ರಸ್ತೆ ಸುರಕ್ಷತೆ ಮತ್ತು ಬಾಲ್ಯ ವಿವಾಹ ನಿರ್ಮೂಲನೆಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಎಸ್‌ಎ ವತಿಯಿಂದ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದರು. ಅಪಘಾತಗಳನ್ನು ತಡೆಗಟ್ಟುವ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೊಸ ವರ್ಷದ ಆರಂಭದಲ್ಲೇ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಜನವರಿ 1ರಿಂದ 31ರವರೆಗೆ ಒಂದು ತಿಂಗಳ ಕಾಲ 'ರಸ್ತೆ ಸುರಕ್ಷತಾ ವಿಶೇಷ ಅಭಿಯಾನ' ನಡೆಯಲಿದೆ ಎಂದರು.
ಇದಲ್ಲದೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಲ್‌ಎಸ್‌ಎ) ನಿರ್ದೇಶನದ ಮೇರೆಗೆ, ಬಾಲ್ಯ ವಿವಾಹ ನಿರ್ಮೂಲನೆಗಾಗಿ ಆಶಾ-(ಜಾಗೃತಿ, ಬೆಂಬಲ, ಸಹಾಯ ಮತ್ತು ಕ್ರಮ) ಎಂಬ ಮಾನದಂಡದ ಅಡಿಯಲ್ಲಿ ಅಭಿಯಾನ ನಡೆಯಲಿದೆ. ಬಾಲ್ಯ ವಿವಾಹ ಮುಕ್ತ ಭಾರತದ ಗುರಿಯೊಂದಿಗೆ 100 ದಿನಗಳ ತೀವ್ರ ಜಾಗೃತಿ ಅಭಿಯಾನವನ್ನು 2025ರ ಡಿಸೆಂಬರ್ 4ರಿಂದ ಆರಂಭಿಸಲಾಗಿದ್ದು, 2026ರ ಮಾರ್ಚ್ 8ರವರೆಗೆ ನಿಗದಿಪಡಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.