'ಜಾಮೀನಿಗೆ ಪ್ರಾಶಸ್ತ್ಯ ನೀಡುವ ತತ್ವವನ್ನೇಕೆ ಜಿಲ್ಲಾ ನ್ಯಾಯಾಧೀಶರು ಪಾಲಿಸುತ್ತಿಲ್ಲ?' ಸಿಜೆಐ ಚಂದ್ರಚೂಡ್ ಆತಂಕ

ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಲಯಗಳು ಜಾಮೀನು ನೀಡದೆ ಸಂಯಮದಿಂದ ವರ್ತಿಸುತ್ತಿವೆ ಎಂಬ ಆತಂಕದ ಬಗ್ಗೆ ಮಾತನಾಡಿದ ಸಿಜೆಐ ಈ ಪ್ರವೃತ್ತಿ ಏಕೆ ತಲೆದೋರಿದೆ ಎಂಬುದನ್ನು ಜಿಲ್ಲಾ ನ್ಯಾಯಾಧೀಶರು ನನಗೆ ತಿಳಿಸಬೇಕು ಎಂದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್

ಜಾಮೀನು ನೀಡಿಕೆಯು ನಿಯಮವಾಗಿದ್ದು, ಅನಿವಾರ್ಯವಾದಲ್ಲಿ ಮಾತ್ರವೇ ಜೈಲಿಗೆ ಕಳುಹಿಸಬೇಕು ಎಂಬ ತತ್ವ ದೇಶದೆಲ್ಲೆಡೆಯ ಜಿಲ್ಲಾ ನ್ಯಾಯಾಲಯಗಳಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಶನಿವಾರ ಕಳವಳ ವ್ಯಕ್ತಪಡಿಸಿದರು.

ಜನರ ವೈಯಕ್ತಿಕ ಸ್ವಾತಂತ್ರ್ಯ ಎತ್ತಿಹಿಡಿಯಲು ಜಿಲ್ಲಾ ನ್ಯಾಯಾಲಯಗಳು ಏಕೆ ಹಿಂಜರಿಯುತ್ತಿವೆ ಎಂಬುದರ ಪರಿಶೀಲನೆಯಾಗಬೇಕಿದೆ ಎಂದು ಅವರು ಕರೆ ನೀಡಿದರು.

ಗುಜರಾತ್‌ನ ಕಛ್‌ನಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಸಿಜೆಐ ಮಾತನಾಡಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಿಲ್ಲಾ ನ್ಯಾಯಾಲಯಗಳು ನಿರ್ಬಂಧಿತವಾಗಿ ವರ್ತಿಸುತ್ತಿವೆ ಎಂಬ ಆತಂಕ ಹೆಚ್ಚುತಿದೆ.

  • ಜಾಮೀನಿಗೇ ಪ್ರಾಶಸ್ತ್ಯ ನೀಡಬೇಕು ಎಂಬ ಸಿದ್ಧಾಂತ ಜಿಲ್ಲಾ ನ್ಯಾಯಾಲಯಗಳಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದು ಈ ಪ್ರವೃತ್ತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ.

  • ಈ ಪ್ರವೃತ್ತಿ ಏಕೆ ತಲೆದೋರಿದೆ ಎಂಬುದನ್ನು ಜಿಲ್ಲಾ ನ್ಯಾಯಾಧೀಶರು ನನಗೆ ತಿಳಿಸಬೇಕು.

  • ನಾಗರಿಕರ ನಂಬಿಕೆ ಉಳಿಸಿಕೊಳ್ಳಲು ಜಿಲ್ಲಾ ನ್ಯಾಯಾಂಗ ನಿರಂತರವಾಗಿ ವಿಕಸನಗೊಳ್ಳಬೇಕಾಗಿದೆ.

  • ಸೂಕ್ತ ಕೊಠಡಿಗಳಿರುವ ಜಿಲ್ಲಾ ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಪ್ರಮುಖ ಕಾಳಜಿಯಾಗಬೇಕಿದೆ.

  • ಅನೇಕ ನ್ಯಾಯಾಲಯಗಳಲ್ಲಿ ದಟ್ಟಣೆ ಹೆಚ್ಚಿದ್ದು ಪ್ರಕರಣ ಸಲ್ಲಿಕೆಯಾಗಲು ವಿಳಂಬವಾಗುತ್ತಿದೆ.

  • ಪ್ರಕರಣಗಳ ಮುಂದೂಡಿಕೆ ಮತ್ತು ಬಾಕಿ ಎಂಬ ಸಂಸ್ಕೃತಿ ನ್ಯಾಯಾಂಗ ಪ್ರಕ್ರಿಯೆಯ ಭಾಗ ಎಂದು ಜನ ಭಾವಿಸುತ್ತಿದ್ದಾರೆ. ತೀರ್ಪಿಗಾಗಿ ಕಾಯುತ್ತಲೇ ಜನ ಸಾಯುವಂತಾಗಬಾರದು.

  • ಕೇವಲ ಶೇ 6ರಷ್ಟು ಜಿಲ್ಲಾ ನ್ಯಾಯಾಲಯಗಳಲ್ಲಿ ಮಾತ್ರ ಮಹಿಳಾ ಸ್ನೇಹಿ ಸ್ಯಾನಿಟರಿ ವೆಂಡಿಂಗ್ ಯಂತ್ರಗಳಿವೆ. ಶೌಚಾಲಯ, ಮಕ್ಕಳ ಆರೈಕೆ ಕೇಂದ್ರಗಳಿಗೆ ಸಂಬಂಧಿಸಿದಂತೆಯೂ ಸಮಸ್ಯೆಗಳಿದ್ದು ಮಹಿಳೆಯರ ಮೇಲೆ ಪ್ರತ್ಯೇಕ ಹೊರೆ ಹೊರಿಸುತ್ತಿದ್ದೇವೆ.

  • ತೀರ್ಪುಗಳಲ್ಲಿ ಮಹಿಳೆಯರೆಡೆಗೆ ಲಘುವಾದ ಮತ್ತು ಅನುಚಿತವಾದ ಭಾಷಾ ಪ್ರಯೋಗಗಳ ಬಗ್ಗೆ ಜಿಲ್ಲಾ ನ್ಯಾಯಾಲಯಗಳು ಎಚ್ಚರದಿಂದಿರಬೇಕು. ಈ ರೀತಿಯ ತೀರ್ಪುಗಳು ಪಕ್ಷಪಾತವನ್ನು ಶಾಶ್ವತಗೊಳಿಸುತ್ತವೆ.

  • ಜಿಲ್ಲಾ ನ್ಯಾಯಾಂಗವನ್ನು ಅಧೀನ ನ್ಯಾಯಾಂಗ ಎಂದು ಸಂಬೋಧಿಸುವುದನ್ನು ನಿಲ್ಲಿಸೋಣ. ಮಾಡಿದ ಕೆಲಸ ಕುರಿತು ಘನತೆಯನ್ನು ತರೋಣ.

  • ನ್ಯಾ. ಬೇಲಾ ತ್ರಿವೇದಿ ಅವರು ಜಿಲ್ಲಾ ನ್ಯಾಯಾಂಗದಿಂದಲೇ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾರೆ. ಸುಪ್ರೀಂ ಕೋರ್ಟ್‌ ನೀತಿ ರೂಪಿಸಿದರೆ ಅದನ್ನು ಕಾರ್ಯಗತಗೊಳಿಸುವುದು ಜಿಲ್ಲಾ ನ್ಯಾಯಾಂಗವೇ.

Kannada Bar & Bench
kannada.barandbench.com