CJI N V Ramana pays floral tribute to Justice Mohan Shanthanagoudar
CJI N V Ramana pays floral tribute to Justice Mohan Shanthanagoudar

ನಮ್ಮದು ವಸಹಾತುಶಾಹಿ ಕಾಲದ ಕಾನೂನು ವ್ಯವಸ್ಥೆ, ನ್ಯಾಯದಾನ ವ್ಯವಸ್ಥೆಯ ಭಾರತೀಕರಣ ಸದ್ಯದ ತುರ್ತು: ಸಿಜೆಐ ಎನ್‌ ವಿ ರಮಣ

ನ್ಯಾ. ಮೋಹನ್‌ ಶಾಂತನಗೌಡರ್‌ ಅವರ ಸರಳತೆ, ಸಜ್ಜನಿಕೆ, ಹಾಸ್ಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ನೆನೆದ ಮುಖ್ಯ ನ್ಯಾಯಮೂರ್ತಿ ರಮಣ ಅವರು “ಎಲ್ಲರಿಗೂ ಸಹಾನುಭೂತಿ ತೋರುತ್ತಿದ್ದ ಅವರಿಗೆ ದೇವರು ಸಹಾನುಭೂತಿ ತೋರಲಿಲ್ಲ” ಎಂದು ಬೇಸರಿಸಿದರು.
Published on

“ನಮ್ಮದು ವಸಹಾತುಶಾಹಿ ಕಾಲದ ಕಾನೂನು ವ್ಯವಸ್ಥೆ, ಇದು ಭಾರತದ ಜನತೆಗೆ ಅನ್ವಯಿಸುವಂತಹದ್ದಲ್ಲ. ನ್ಯಾಯದಾನ ವ್ಯವಸ್ಥೆಯ ಭಾರತೀಕರಣ ಸದ್ಯದ ತುರ್ತು” ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಶನಿವಾರ ವಿಧಾನ ಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದಿವಂಗತ ಮೋಹನ್‌ ಎಂ ಶಾಂತನಗೌಡರ್‌ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಭಾರತೀಕರಣ ಎಂದರೆ ದೇಶದ ಪ್ರಾಯೋಗಿಕ ವಾಸ್ತವಿಕತೆಗೆ ಹೊಂದಾಣಿಕೆಯಾಗುವಂತೆ ಮಾಡಬೇಕು. ನ್ಯಾಯದಾನ ವ್ಯವಸ್ಥೆಯನ್ನು ಸ್ಥಳೀಯಗೊಳಿಸಬೇಕು” ಎಂದು ಸಲಹೆ ನೀಡಿದರು.

“ಉದಾಹರಣೆಗೆ ಹೇಳುವುದಾದರೆ ಕೌಟುಂಬಿಕ ವಿವಾದವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಬರುವ ಜನರಿಗೆ ನ್ಯಾಯಾಲಯದಲ್ಲಿ ಅಪರಿಚಿತ ಅನುಭವವಾಗುತ್ತದೆ. ನ್ಯಾಯಾಲಯದಲ್ಲಿ ಅವರಿಗೆ ವಾದ, ಮನವಿ ಅರ್ಥವಾಗುವುದಿಲ್ಲ. ಏಕೆಂದರೆ ಅವೆಲ್ಲವೂ ಇಂಗ್ಲಿಷ್‌ನಲ್ಲಿರುತ್ತವೆ. ಇಂಗ್ಲಿಷ್‌ ಗ್ರಾಮೀಣ ಭಾಗದ ಜನರಿಗೆ ಅಪರಿಚಿತವಾದ ಭಾಷೆ. ಇತ್ತೀಚೆಗೆ ನ್ಯಾಯಾಲಯದ ತೀರ್ಪುಗಳು ಸುದೀರ್ಘವಾಗಿದ್ದು, ಇದು ದಾವೆದಾರರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ. ತೀರ್ಪಿನ ಪರಿಣಾಮ ಅರ್ಥ ಮಾಡಿಕೊಳ್ಳಲು ಅವರು ಹೆಚ್ಚು ಹಣ ವ್ಯಯಿಸಬೇಕಾದ ಸ್ಥಿತಿ ಇದೆ” ಎಂದು ಅಭಿಪ್ರಾಯಪಟ್ಟರು.

“ನ್ಯಾಯಾಲಯಗಳು ದಾವೆದಾರರ ಕೇಂದ್ರೀಕೃತವಾಗಬೇಕು. ದಾವೆದಾರರೇ ನ್ಯಾಯಾಲಯದ ಅಂತಿಮ ಫಲಾನುಭವಿಗಳು. ಹೀಗಾಗಿ, ಸರಳವಾದ ರೀತಿಯಲ್ಲಿ ನ್ಯಾಯದಾನ ಮಾಡುವುದು ನಮ್ಮ ಅಂತಿಮ ಕಳಕಳಿಯಾಗಬೇಕು. ಹೀಗೆ ಮಾಡುವುದರಿಂದ ನ್ಯಾಯಾಲಯದಲ್ಲಿ ಪಾರದರ್ಶಕತೆ, ಎಲ್ಲರಿಗೂ ದಕ್ಕುವಂತೆ ಮಾಡುವುದು ಮತ್ತು ಪರಿಣಾಮಕಾರಿಯಾಗಿಸಲು ಸಾಧ್ಯ” ಎಂದು ವಿವರಿಸಿದರು.

“ನ್ಯಾಯ ಪಡೆಯಲು ಕಾರ್ಯವಿಧಾನದ ಪ್ರಕ್ರಿಯೆ ತಡೆಯಾಗಿದೆ. ನ್ಯಾಯಾಲಯಗಳು ದಾವೆದಾರ ಸ್ನೇಹಿಯಾಗಿರಬೇಕು. ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಸಾಮಾನ್ಯ ಜನರು ಭಯಭೀತರಾಗಬಾರದು. ಸಾಮಾನ್ಯ ಜನರಿಗೆ ಸಾಂತ್ವನ ಹೇಳುವ ರೀತಿಯಲ್ಲಿ ನ್ಯಾಯಾಲಯಗಳು ಇರಬೇಕು. ಇಂಥ ವಾತಾವರಣವನ್ನು ಮೊಕದ್ದಮೆದಾರು ಮತ್ತು ಸಂಬಂಧಪಟ್ಟ ಎಲ್ಲರಿಗೂ ಕಲ್ಪಿಸುವುದು ನ್ಯಾಯಮೂರ್ತಿಗಳು ಮತ್ತು ವಕೀಲರ ಕರ್ತವ್ಯವಾಗಿದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಿವಂಗತ ನ್ಯಾ. ಮೋಹನ್‌ ಶಾಂತನಗೌಡರ್‌ ಅವರ ಸರಳತೆ, ಸಜ್ಜನಿಕೆ, ಹಾಸ್ಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ನೆನೆದ ಮುಖ್ಯ ನ್ಯಾಯಮೂರ್ತಿ ರಮಣ ಅವರು “ಎಲ್ಲರಿಗೂ ಸಹಾನುಭೂತಿ ತೋರುತ್ತಿದ್ದ ಅವರಿಗೆ ದೇವರು ಸಹಾನುಭೂತಿ ತೋರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಉಂಗುರದ ಹರಳು ಹುಡುಕಿಕೊಟ್ಟಿದ್ದ ನ್ಯಾ. ಶಾಂತನಗೌಡರ್‌

ಸುಪ್ರೀಂ ಕೋರ್ಟ್‌ ಹೊರಾಂಗಣದಲ್ಲಿ ಒಮ್ಮೆ ನಾನು ಉಂಗುರದ ಹರಳು ಕಳೆದುಕೊಂಡಿದ್ದೆ. ಈ ವಿಚಾರವನ್ನು ನ್ಯಾ. ಮೋಹನ್‌ ಶಾಂತನಗೌಡರ್‌ ಅವರಿಗೆ ತಿಳಿಸಿದೆ. ಕಲಾಪ ಕೊಠಡಿಯಲ್ಲಿ ಹುಡುಕಿದರೂ ಸಿಗಲಿಲ್ಲ. ಅದನ್ನು ಮೊದಲಿಗೆ ನಾನು ನ್ಯಾಯಮೂರ್ತಿಯಾಗಿದ್ದಾಗ ಸಾಯಿ ಬಾಬಾ ನೀಡಿದ್ದರು. ಒಂದೂವರೆ ವರ್ಷಗಳ ಕಾಲ ಮೋಹನ್‌ ಶಾಂತನಗೌಡರ್‌ ಅವರ ಜೊತೆ ಪೀಠ ಹಂಚಿಕೊಂಡಿದ್ದೆ. ಈ ಸಂದರ್ಭದಲ್ಲಿ ನಾವು ಹಲವು ಧಾರ್ಮಿಕ ವಿಚಾರಗಳನ್ನು ಹಂಚಿಕೊಂಡಿದ್ದೆವು. ಇದರ ಮಹತ್ವ ಅವರಿಗೆ ಅರಿವಾಗಿ ಸಾವಿರಾರು ಜನರು ಓಡಾಡುವ ಸುಪ್ರೀಂ ಕೋರ್ಟ್‌ ಲಾಂಜ್‌ನಲ್ಲಿ ಸುತ್ತಾಡಿ ನನ್ನ ಉಂಗುರದ ಹರಳು ಹುಡುಕಿ ತಂದುಕೊಟ್ಟಿದ್ದರು. ಅಷ್ಟರಮಟ್ಟಿಗೆ ಅವರು ಮತ್ತೊಬ್ಬರ ಬಗ್ಗೆ ಕಾಳಜಿವಹಿಸುತ್ತಿದ್ದರು ಎಂದು ನ್ಯಾ. ಶಾಂತನಗೌಡರ್‌ ಅವರೊಂದಿಗಿನ ನೆನೆಪು ಮೆಲುಕು ಹಾಕಿದರು.

ಕನ್ನಡದ ಹೆಸರಾಂತ ಕವಿ ಡಿ ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ” ಎಂಬ ಸಾಲುಗಳು ಅಕ್ಷರಶಃ ನ್ಯಾ. ಶಾಂತನಗೌಡರ್‌ ಅವರಿಗೆ ಅನ್ವಯಿಸುತ್ತವೆ ಎಂದರು.

ಲೋಕಸಭಾ ಸದಸ್ಯರಾಗಲು ಬಯಸಿದ್ದ ನ್ಯಾ. ಶಾಂತನಗೌಡರ್‌!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾ. ಶಾಂತನಗೌಡರ್‌ ಅವರೊಂದಿಗಿನ ಒಡನಾಟ ಮತ್ತು ಸರಳತೆಯನ್ನು ನೆನೆದರು. ಈ ಸಂದರ್ಭದಲ್ಲಿ “ಒಮ್ಮೆ ನ್ಯಾ. ಶಾಂತನಗೌಡರು ನಮ್ಮ ತಂದೆ ಎಸ್‌ ಆರ್‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಆದರೆ, ನಮ್ಮ ತಂದೆಯವರು ನಿಮಗೆ ಅತ್ಯುತ್ತಮವಾದ ಲೀಗಲ್‌ ಮೈಂಡ್‌ ಇದೆ. ಅದೇ ಕ್ಷೇತ್ರದಲ್ಲಿ ನೀವು ಮುಂದುವರಿಯಿರಿ ಎಂದು ಸಲಹೆ ಮಾಡಿದ್ದರು. ಹಾಗೆ ಮಾಡಿದ್ದ ನ್ಯಾ. ಶಾಂತನಗೌಡರ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಇತಿಹಾಸ” ಎಂದು ನೆನೆಪಿಸಿಕೊಂಡರು. ಇದೇ ಸಂದರ್ಭದಲ್ಲಿ ನ್ಯಾ. ಮೋಹನ್‌ ಶಾಂತನಗೌಡರ್‌ ಅವರ ಬಾಲ್ಯ, ಬದುಕು ನೆನೆಪಿಸುವ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.

Also Read
ಹೈಬ್ರಿಡ್‌ ಮಾದರಿ ವಿಸ್ತರಿಸಿದರೆ ರಾಜ್ಯವು ದೇಶದಲ್ಲಿಯೇ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆ ಹೊಂದಲಿದೆ: ನ್ಯಾ. ಓಕಾ

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌, ಎ ಎಸ್‌ ಬೋಪಣ್ಣ, ಅಭಯ್‌ ಶ್ರೀನಿವಾಸ್‌ ಓಕ್‌, ಬಿ ವಿ ನಾಗರತ್ನ, ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಕೆಎಸ್‌ಬಿಸಿ ಅಧ್ಯಕ್ಷ ಎಲ್‌ ಶ್ರೀನಿವಾಸ್‌ ಬಾಬು, ನ್ಯಾ. ಶಾಂತನಗೌಡರ್‌ ಅವರ ಪುತ್ರ ಶಿವಪ್ರಸಾದ್‌ ಮತ್ತಿತರರು ನ್ಯಾ. ಮೋಹನ್‌ ಶಾಂತನಗೌಡರ್‌ ಅವರೊಂದಿಗಿನ ಒಡನಾಟವನ್ನು ನೆನೆದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌ ರವೀಂದ್ರನ್‌, ಲೋಕಾಯುಕ್ತ ಬಿ ವಿ ವಿಶ್ವನಾಥ್‌ ಶೆಟ್ಟಿ, ಉಪಲೋಕಾಯುಕ್ತ ಬಿ ಎಸ್‌ ಪಾಟೀಲ್‌, ಕರ್ನಾಟಕ ಹೈಕೋರ್ಟ್‌ನ ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳು, ಭಾರತೀಯ ವಕೀಲರ ಪರಿಷತ್‌ನ ಉಪಾಧ್ಯಕ್ಷ ವೈ ಆರ್‌ ಸದಾಶಿವರೆಡ್ಡಿ, ಕೆಎಸ್‌ಬಿಸಿ ಉಪಾಧ್ಯಕ್ಷ ತುಕಾರಾಂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com