ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೂಲಕ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಮಾಡಿ, ಅಖಿಲ ಭಾರತೀಯ ಕೋಟಾದ (ಎಐಕ್ಯು) ಅಡಿ ಬಾಕಿ ಉಳಿದಿರುವ ಸೀಟುಗಳನ್ನು ತುಂಬಲು ಹೊಸದಾಗಿ ಪ್ರತ್ಯೇಕ ಕೌನ್ಸೆಲಿಂಗ್ ನಡೆಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ (ಡಾ. ಅಶೀಮಾ ಗೋಯಲ್ ಮತ್ತು ಇತರರು ವರ್ಸಸ್ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಮತ್ತು ಇತರರು).
ಪ್ರತ್ಯೇಕ ಸುತ್ತಿನ ಕೌನ್ಸೆಲಿಂಗ್ ನಡೆಸುವುದು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
"ಇದಾಗಲೇ 8-9 ಸುತ್ತುಗಳ ಕೌನ್ಸೆಲಿಂಗ್ ಮುಗಿದಿದೆ. ಆದರೂ ಕೆಲ ಕ್ಲಿನಿಕಲ್ ಹೊರತಾದ ಸೀಟುಗಳು ಖಾಲಿ ಇವೆ. ಹೀಗಾಗಿ, ಪ್ರತ್ಯೇಕ ಸುತ್ತನ್ನು ನಡೆಸಿಲ್ಲದೆ ಇರುವುದು ಸ್ವೇಚ್ಛೆಯ ನಡೆ ಎನ್ನಲಾಗದು. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗದು," ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಸುಮಾರು 40 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಲ್ಲಿ ಕೇವಲ 1,456 ಸೀಟುಗಳು ಮಾತ್ರ ಭರ್ತಿಯಾಗಿಲ್ಲ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು.
ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದಾಗ ಎಐಕ್ಯು ಸೀಟುಗಳು ಖಾಲಿ ಇರುವುದು ಅರ್ಜಿದಾರರಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮತ್ತು ಕಾಲೇಜುಗಳ ದೃಷ್ಟಿಯಿಂದ ಸಂಬಂಧಪಟ್ಟವರಿಗೆ ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ಸ್ಪಂದನೆ ದೊರೆತಿರಲಿಲ್ಲ ಎಂದು ವಕೀಲ ಮಲಿಂದ್ ಕುಮಾರ್ ಅವರ ಮೂಲಕ ಸಲ್ಲಿಸಿದ್ದ ಮನವಿಯಲ್ಲಿ ವಿವರಿಸಲಾಗಿತ್ತು.
ತುರ್ತಾಗಿ ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸುವುದಕ್ಕೆ ಸಂಬಂಧಿಸಿದಂತೆ ಎಐಕ್ಯು ಸೀಟುಗಳ ವಿವರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.
ಅರ್ಜಿದಾರರು ಎಐಕ್ಯು ಕೌನ್ಸೆಲಿಂಗ್ ಮತ್ತು ರಾಜ್ಯ ಕೋಟಾ ಕೌನ್ಸೆಲಿಂಗ್‌ನ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಭಾಗವಹಿಸಿದ್ದರು. ಈ ಎರಡೂ ಸುತ್ತುಗಳಲ್ಲೂ ಅವರಿಗೆ ಇಲ್ಲಿಯವರೆಗೆ ಸೀಟು ದೊರೆತಿರಲಿಲ್ಲ. ನಂತರ ರಾಜ್ಯ ಸುತ್ತಿನಲ್ಲಿ ಹಾಗೂ ಆನಂತರದ ಮಾಪ್‌ಅಪ್ ಸುತ್ತುಗಳಲ್ಲಿಯೂ ಸೀಟು ದೊರೆತಿರಲಿಲ್ಲ.
ನೀಟ್ ಪಿಜಿ ಕೌನ್ಸೆಲಿಂಗ್ 2021ರ ತಂತ್ರಾಂಶದ ಬಳಕೆಯು ಮುಕ್ತಾಯಗೊಂಡಿದ್ದು (ಸಾಫ್ಟ್‌ವೇರ್ ಕ್ಲೋಸ್ಡ್) ಈಗ ಸೀಟುಗಳನ್ನು ಭರ್ತಿ ಮಾಡಲು ಹೊರಟರೆ ಅದು ಬರುವ ವರ್ಷದ ಕೌನ್ಸೆಲಿಂಗ್‌ಗೆ ತೊಡಕುಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಈ ಹಂತದಲ್ಲಿ ಹೆಚ್ಚುವರಿಯಾಗಿ ಕೌನ್ಸೆಲಿಂಗ್ ನಡೆಸಿದರೆ ಅದು 2022ನೇ ಸಾಲಿನ ಕೌನ್ಸೆಲಿಂಗ್‌ಗೆ ಅಡ್ಡಿ ಉಂಟು ಮಾಡುತ್ತದೆ. ಅಲ್ಲದೆ ಭದ್ರತಾ ಠೇವಣಿ ಮರುಪಾವತಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಸಲ್ಲಿಸಿರುವ ಅಫಿಡವಿಟ್ ತಿಳಿಸಿತ್ತು.