ನೀಟ್ ಪಿಜಿ 2022ಗೆ ಅರ್ಜಿ ಸಲ್ಲಿಕೆಗಾಗಿ ಅರ್ಹತೆ ಪಡೆಯಲು ಪೂರ್ಣಗೊಳಿಸಬೇಕಾದ ತರಬೇತಿಯ (ಇಂಟರ್ನ್‌ಶಿಪ್) ಗಡುವು ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಮನವಿ ಸ್ವೀಕರಿಸಿದ ಒಂದು ವಾರದೊಳಗೆ ಅರ್ಜಿದಾರರ ವಿವರಣೆಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಸೂಚಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಕಟ್ ಆಫ್ ದಿನಾಂಕವನ್ನು ಮೂರು ತಿಂಗಳು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಆದರೆ ಆಡಳಿತಾಂಗದ ನೀತಿ ನಿರೂಪಣೆಯ ವಿಚಾರದ ಮೇಲೆ ಅತಿಕ್ರಮಣ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಈ ಮನವಿಯನ್ನು ಪುರಸ್ಕರಿಸಲು ನ್ಯಾಯಾಲಯ ಒಲವು ತೋರಲಿಲ್ಲ.
"ನಾವು ಸಂಕಷ್ಟದ ಆಧಾರದ ಮೇಲೆ ಹೇಳಿಕೆ ದಾಖಲಿಸಬಹುದು. ನೀವು ಕೇಂದ್ರಕ್ಕೆ ಮನವಿ ನೀಡಿ ನಿಮ್ಮಪ್ರಾರ್ಥನೆಯನ್ನು ಸ್ವಲ್ಪ ಸಹಾನುಭೂತಿಯಿಂದ ಪರಿಗಣಿಸಲು ಕೇಳಿಕೊಳ್ಳಿ" ಎಂದು ಪೀಠ ಸಲಹೆ ನೀಡಿತು.
ಮಾರ್ಚ್ 12 ರಂದು ನಡೆಯಬೇಕಿರುವ ನೀಟ್ ಪಿಜಿ 2022 ಪರೀಕ್ಷೆಯ ದಿನಾಂಕ ಮುಂದೂಡುವುದು ಅರ್ಜಿಯಲ್ಲಿನ ಪ್ರಮುಖ ಪ್ರಾರ್ಥನೆಗಳಲ್ಲಿ ಒಂದಾಗಿತ್ತು. ಆದರೆ ಕೇಂದ್ರ ಸರ್ಕಾರ 6 ರಿಂದ 8 ವಾರಗಳವರೆಗೆ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದ್ದರಿಂದ ಆ ಪ್ರಾರ್ಥನೆ ಹಿನ್ನೆಲೆಗೆ ಸರಿದಿದೆ.
ಆದರೂ ಅನೇಕ ಅರ್ಜಿದಾರರು ಮೇ 31ರ ನಿಗದಿತ ಗಡುವಿನೊಳಗೆ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಇಂಟರ್ನ್‌ಶಿಪ್‌ಗೆ ಸಂಬಂಧಿಸಿದ ಸಮಸ್ಯೆ ಮುಂದುವರಿದಿದೆ. ಇಂಟರ್ನ್‌ಶಿಪ್ ಪೂರ್ಣಗೊಳಿಸುವುದು ಪ್ರವೇಶಾತಿ ಅರ್ಹತೆಯ ಮಾನದಂಡಗಳಲ್ಲಿ ಒಂದಾಗಿದೆ.
ಬಹುತೇಕ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿದ್ದು ಇದರಿಂದಾಗಿ ಅವರು ಇಂಟರ್ನ್‌ಶಿಪ್‌ನಲ್ಲಿ ತೊಡಗಿಕೊಳ್ಳಲು ವಿಳಂಬ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.