ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಗೆ (ನೀಟ್ ಪಿಜಿ 2022) ಅರ್ಜಿ ಸಲ್ಲಿಸುವುದಕ್ಕಾಗಿ ಅರ್ಹತೆ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಇರುವ ಗಡುವನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ಶಿಖರ್ ಮತ್ತಿತರರು ಹಾಗೂ ಎನ್‌ಬಿಇ ನಡುವಣ ಪ್ರಕರಣ.]
ಜುಲೈ 31, 2022ರ ಇಂಟರ್ನ್‌ಶಿಪ್ ಗಡುವನ್ನು ವಿಸ್ತರಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಇದರಿಂದಾಗಿ ಆಗಸ್ಟ್ 1ರಿಂದ ಆರಂಭವಾಗಲಿರುವ ಶೈಕ್ಷಣಿಕ ಪಠ್ಯಕ್ರಮಕ್ಕೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ಕೋವಿಡ್-19 ಕರ್ತವ್ಯಗಳ ಕಾರಣದಿಂದಾಗಿ ಅರ್ಜಿದಾರರ ಇಂಟರ್ನ್‌ಶಿಪ್ ವಿಳಂಬವಾಗಿರುವುದರಿಂದ ತಮಗೆ ಸೀಟ್ ಒದಗಿಸುವಂತೆ ವೈದ್ಯರ ಗುಂಪೊಂದು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು. ಜುಲೈ 31, 2022ರ ಗಡುವಿನೊಳಗೆ ಅಥವಾ ಅದಕ್ಕೂ ಮೊದಲು ಇಂಟರ್ನ್‌ಶಿಪ್ ಪೂರ್ಣಗೊಳಿಸಲು ವಿಫಲರಾಗುವ ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಬೇಕು ಎಂಬುದು ಅರ್ಜಿದಾರರ ವಾದವಾಗಿತ್ತು.
ಫೆಬ್ರವರಿಯಲ್ಲಿ, ನ್ಯಾಯಾಲಯ ಇದೇ ರೀತಿಯ ಮನವಿಯನ್ನು ತಿರಸ್ಕರಿಸಿತ್ತು. ಮೇ 31ರ ಗಡುವನ್ನು ಮುಂದೂಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ಅರ್ಜಿದಾರರು ಸ್ವತಂತ್ರರು ಎಂದಿತ್ತು. ತರುವಾಯ, ಗಡುವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿತ್ತು. ಈ ಗಡುವನ್ನು ಪ್ರಶ್ನಿಸಿ ಪ್ರಸ್ತುತ ಅರ್ಜಿ ಸಲ್ಲಿಕೆಯಾಗಿತ್ತು.