
ಜೂನ್ 15ರಂದು ನಡೆಯಬೇಕಿದ್ದ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ ಪರೀಕ್ಷೆಗಳನ್ನು (ನೀಟ್ ಪಿಜಿ) ಆಗಸ್ಟ್ 3ಕ್ಕೆ ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಗೆ (ಎನ್‌ಬಿಇ) ಅನುಮತಿ ನೀಡಿದೆ.
ಎರಡು ಪಾಳಿಗಳ ಬದಲು ಒಂದು ಪಾಳಿಯಲ್ಲಿ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಈ ಹಿಂದೆ ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ಎನ್‌ಬಿಇ ಪರೀಕ್ಷೆ ಮುಂದೂಡಿಕೆಗೆ ಅನುಮತಿ ಕೋರಿತ್ತು.
ಈ ಬಗ್ಗೆ ಇಂದು ಪ್ರಸ್ತಾಪಿಸಿದ ಎನ್‌ಬಿಇ "ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲು ನಮಗೆ ದುಪ್ಪಟ್ಟು ಪರೀಕ್ಷಾ ಕೇಂದ್ರಗಳು ಬೇಕಾಗುತ್ತವೆ. ಅವುಗಳ ಗುರುತಿಸುವಿಕೆ, ಭದ್ರತಾ ಮಾನದಂಡಗಳ ಪರಿಶೀಲನೆ ನಿರ್ಣಯಿಸುವುದು ಇತ್ಯಾದಿಗಳಿಗೆ ಸಮಯ ತೆಗೆದುಕೊಳ್ಳುತ್ತದೆ. ಆಗಸ್ಟ್ 3ರಂದೇ ಏಕೆ ಪರೀಕ್ಷೆ ನಡೆಸಬೇಕು ಎಂಬುದಕ್ಕೆ ಅರ್ಜಿಯಲ್ಲಿ ಕಾರಣಗಳನ್ನು ವಿವರಿಸಿದ್ದೇವೆ" ಎಂದು ಎನ್‌ಬಿಇ ಪರ ವಕೀಲರು ಹೇಳಿದರು. ಅಂತೆಯೇ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.
"ನೀಟ್ ಪಿಜಿ ಪರೀಕ್ಷೆಯನ್ನು ಆಗಸ್ಟ್ 3ಕ್ಕೆ ಮರು ನಿಗದಿಪಡಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರಗಳ ತಾಂತ್ರಿಕ ಪ್ಯಾರಾಫ್ರೇಸಿಂಗ್ ಅನ್ನು ಸಿದ್ಧಪಡಿಸಲು ಅಗತ್ಯವಿರುವ ವ್ಯಾಪಕ ಕ್ರಮಗಳ ಕುರಿತು ಪ್ರತಿವಾದಿಗಳು ಮತ್ತು ಅವರ ತಾಂತ್ರಿಕ ಪಾಲುದಾರ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್) ನಡುವಿನ ವಿವಿಧ ಪತ್ರ ವ್ಯವಹಾರಗಳನ್ನು ಉಲ್ಲೇಖಿಸಲಾಗಿದೆ. ಎನ್‌ಬಿಇ ಆಗಸ್ಟ್ 3, 2025ರಂದು ಪರೀಕ್ಷೆ ನಡೆಸಲು ಅನುಮತಿಸಲಾಗಿದೆ. ಗಡವು ವಿಸ್ತರಿಸುವುದಿಲ್ಲ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ನೀಟ್ ಪಿಜಿಯನ್ನು ಈ ಹಿಂದೆ ಒಂದೇ ಪಾಳಿಯಲ್ಲಿ ನಡೆಸಲಾಗುತ್ತಿತ್ತು. ಆದರೆ ಈಗ ಎನ್‌ಬಿಇ ಬದಲಾವಣೆ ತಂದಿದೆ ಎಂದು ವಾದಿಸಿ ಅಭ್ಯರ್ಥಿಗಳ ಗುಂಪೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಅವರು ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಬಹಿರಂಗಪಡಿಸುವಂತೆಯೂ ಕೋರಿದ್ದರು.
ಮೇ 30ರಂದು ನ್ಯಾಯಾಲಯ ಎನ್‌ಬಿಇಗೆ ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸುವಂತೆ ನಿರ್ದೇಶಿಸಿತ್ತು. ಅದರಂತೆ ಪರೀಕ್ಷೆ ಮುಂದೂಡುವಂತೆ ಕೋರಿ ಎನ್‌ಬಿಇ ನ್ಯಾಯಾಲಯದ ಮೆಟ್ಟಿಲೇರಿತ್ತು.