
ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯು (ಎನ್‌ಬಿಇ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ ಪರೀಕ್ಷೆಗಳನ್ನು (ನೀಟ್ ಪಿಜಿ) ಒಂದೇ ಪಾಳಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ [ಅದಿತಿ ಮತ್ತಿತರರು ಹಾಗೂ ವೈದ್ಯಕೀಯ ವಿಜ್ಞಾನದಲ್ಲಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ಇನ್ನಿತರರ ನಡುವಣ ಪ್ರಕರಣ].
ದೇಶದಲ್ಲಿ ಪರೀಕ್ಷಾ ಕೇಂದ್ರಗಳ ಕೊರತೆಯಿಂದಾಗಿ ಒಂದೇ ಪಾಳಿಯಲ್ಲಿ ಪರೀಕ್ಷೆಗಳನ್ನು ನಡೆಸುವುದರಿಂದ ಸುರಕ್ಷತೆ ಮತ್ತು ಭದ್ರತಾ ಕಾಳಜಿ ಉಂಟಾಗುತ್ತದೆ ಎಂಬ ಎನ್‌ಬಿಇ ವಾದವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಪಿ ವಿ ಸಂಜಯ್ ಕುಮಾರ್ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ತಿರಸ್ಕರಿಸಿತು.
ಎರಡು ಪ್ರಶ್ನೆಪತ್ರಿಕೆಗಳು ಅವುಗಳು ಕಠಿಣತೆಯಲ್ಲಾಗಿ ಅಥವಾ ಸುಲಭದ ವಿಚಾರದಲ್ಲಾಗಲೀ ಒಂದೇ ರೀತಿ ಇರಲು ಸಾಧ್ಯವಿಲ್ಲವಾದ್ದರಿಂದ ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಸುವುದು ಸ್ವೇಚ್ಛಾನುಸಾರದ ನಡೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಇಡೀ ದೇಶದಲ್ಲಿ ತಾಂತ್ರಿಕ ಪ್ರಗತಿಯನ್ನು ಪರಿಗಣಿಸಿ ಒಪ್ಪಲಾಗದು" ಎಂದು ಪೀಠ ಹೇಳಿದೆ.
ಪರೀಕ್ಷೆಗೆ ಇನ್ನೂ ಎರಡು ವಾರಗಳಿದ್ದು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದಿರುವ ಅದು ಜೂನ್ 15 ರೊಳಗೆ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಕಂಡುಬಂದರೆ, ಎನ್‌ಬಿಇ ಮತ್ತಿತರ ಪ್ರತಿವಾದಿಗಳು ಗಡುವು ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಅವಕಾಶ ನೀಡಿದೆ.
ಜೂನ್ 15 ರಂದು ನಡೆಯಲಿರುವ ಪರೀಕ್ಷೆಗಳಲ್ಲಿ ಒಟ್ಟು 2.4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ನೀಟ್ ಪಿಜಿಯನ್ನು ಈ ಹಿಂದೆ ಒಂದೇ ಪಾಳಿಯಲ್ಲಿ ನಡೆಸಲಾಗುತ್ತಿತ್ತು, ಆದರೆ ಈಗ ಎನ್‌ಬಿಇ ಬದಲಾವಣೆ ತಂದಿದೆ. ಇದು ಅಪಾರದರರ್ಶಕವಾಗಿದೆ ಎಂದು ವಾದಿಸಿ ಅಭ್ಯರ್ಥಿಗಳ ಸಮೂಹ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆ ಬಹಿರಂಗಪಡಿಸುವಿಕೆ ವಿಚಾರವಾಗಿ ಜುಲೈ 14 ರಂದು ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.