ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕಡಿಮೆ ಮಾಡಿದರೆ ವೈದ್ಯಕೀಯ ಅಧ್ಯಯನದ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ಸಮಾಜ ವಿನಾಶವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ದೆಹಲಿ ಹೈಕೋರ್ಟ್ ನೀಟ್ ಪಿಜಿ ಪ್ರವೇಶಾತಿಗಾಗಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕೆಂಬ ನಿಯಮ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.
ವೈದ್ಯಕೀಯ ಅಧ್ಯಯನ ಜೀವನ್ಮರಣದ ವಿಷಯವನ್ನು ಒಳಗೊಂಡಿರುವುದರಿಂದ ಆಡಳಿತ ಸಂಸ್ಥೆ ಸೂಕ್ತ ರೀತಿಯಲ್ಲಿ ಶ್ರದ್ಧೆಯಿಂದ ನಿಗದಿಪಡಿಸಿದ ಮಾನದಂಡಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠ ತಿಳಿಸಿತು.
ನೀಟ್ ಪಿಜಿ ಪ್ರವೇಶಾತಿಯಲ್ಲಿ ಅರ್ಹತೆ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ 50 ಹಾಗೂ ಮೀಸಲು ವರ್ಗಕ್ಕೆ ಶೇ 40ರಷ್ಟು ಅಂಕ ಮೀಸಲಿಡುವ ಪಿಜಿ ವೈದ್ಯಕೀಯ ಶಿಕ್ಷಣ ನಿಯಮಾವಳಿ (2018 ರ ತಿದ್ದುಪಡಿ) ನಿಯಮ 9(3) ಅನ್ನು ರದ್ದಗೊಳಿಸುವಂತೆ ಕೋರಿ ಮೂವರು ವೈದ್ಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅಸಮಂಜಸವಾಗಿ ಮನಸೋಇಚ್ಛೆಯಿಂದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ, ಇಲ್ಲವೇ ಶಾಸಕಾಂಗ ಅಸಾಮರ್ಥ್ಯದಿಂದ ಕೆಲಸ ಮಾಡಿದೆ ಮತ್ತು ಸಂವಿಧಾನದ ನಿಯಮಾವಳಿಗಳನ್ನು ಮೀರಲಾಗಿದೆ ಎಂದು ಅರ್ಜಿದಾರರು ವಾದ ಮಂಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿತು.