[ನೀಟ್‌ ಪ್ರಕರಣ] ಘಟನೆ ಬಗ್ಗೆ ಮರುಕವಿದೆ, ಆದರೆ ಇಬ್ಬರಿಗಾಗಿ ಮರುಪರೀಕ್ಷೆ ನಡೆಸಲಾಗದು: ಸುಪ್ರೀಂ ಕೋರ್ಟ್‌

ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಅಜಾಗರೂಕತೆಯಿಂದಾಗಿ ತಮ್ಮ ಪರೀಕ್ಷಾ ಬುಕ್‌ಲೆಟ್‌ ಹಾಗೂ ಒಎಂಆರ್‌ ಉತ್ತರ ಪತ್ರಿಕೆಗಳು ಕಲಬೆರಕೆಯಾಗಿವೆ ಎಂದು ಆರೋಪಿಸಿ ಇಬ್ಬರು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
[ನೀಟ್‌ ಪ್ರಕರಣ] ಘಟನೆ ಬಗ್ಗೆ ಮರುಕವಿದೆ,
ಆದರೆ ಇಬ್ಬರಿಗಾಗಿ ಮರುಪರೀಕ್ಷೆ ನಡೆಸಲಾಗದು: ಸುಪ್ರೀಂ ಕೋರ್ಟ್‌
Supreme court and NEET 2021

ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಅಜಾಗರೂಕತೆಯಿಂದಾಗಿ ತಮ್ಮ ಪರೀಕ್ಷಾ ಬುಕ್‌ಲೆಟ್‌ ಹಾಗೂ ಒಎಂಆರ್‌ ಉತ್ತರ ಪತ್ರಿಕೆಗಳು ಕಲಬೆರಕೆಯಾಗಿವೆ ಎಂದು ಆರೋಪಿಸಿದ್ದ ಇಬ್ಬರು ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಪರೀಕ್ಷೆಗೆ ಆದೇಶಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಬದಿಗೆ ಸರಿಸಿದೆ.

ಈ ಇಬ್ಬರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪ್ರಶ್ನೆಪತ್ರಿಕೆಯೊಂದಿಗೆ ಸರಿಯಾಗಿ ಹೊಂದಿಸಲಾಗುವುದು ಎಂದು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ನೀಡಿದ ಭರವಸೆಗೆ ನ್ಯಾ. ಎಲ್‌ ನಾಗೇಶ್ವರ ರಾವ್‌ ಹಾಗೂ ನ್ಯಾ ಬಿ ಅರ್ ಗವಾಯಿ ಅವರಿದ್ದ ಪೀಠವು ಸಮ್ಮತಿಸಿತು.

ಇದೇ ವೇಳೆ, ಪ್ರಶ್ನೆ ಮತ್ತು ಉತ್ತರಪತ್ರಿಕೆಗಳ ಕಲಬೆರಕೆಯಿಂದಾಗಿ ಪರೀಕ್ಷಾ ಅವಧಿಯಲ್ಲಿ ಅಮೂಲ್ಯ ವೇಳೆಯು ವ್ಯಯವಾಯಿತು ಎನ್ನುವ ವಿದ್ಯಾರ್ಥಿಗಳ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿತು. ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ತಮಗೆ ಮರುಕವಿದೆ ಎಂದ ಪೀಠವು, ಆದರೆ ಇಬ್ಬರು ವಿದ್ಯಾರ್ಥಿಗಳಿಗಾಗಿ ಮರುಪರೀಕ್ಷೆ ನಡೆಸಲಾಗದು ಎಂದಿತು.

“ಅಮೂಲ್ಯ ವೇಳೆಯು ನಷ್ಟವಾಗಿದ್ದರಿಂದ ಎಲ್ಲ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಲಾಗಲಿಲ್ಲ ಎನ್ನುವ ವಿದ್ಯಾರ್ಥಿಗಳ ಪರ ವಕೀಲ ಸುಧಾಂಶು ಚೌಧರಿ ಅವರ ವಾದದಲ್ಲಿ ತಿರುಳಿರುವುದನ್ನು ನಾವು ಒಪ್ಪುತ್ತೇವೆ. ಅದೇ ರೀತಿ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಸಹ ನಾವು ಶ್ಲಾಘಿಸುತ್ತೇವೆ. ಇಬ್ಬರು ವಿದ್ಯಾರ್ಥಿಗಳ ಸನ್ನಿವೇಶದ ಬಗ್ಗೆ ನಮಗೆ ಮರುಕವಿದೆಯಾದರೂ, ಇಬ್ಬರಿಗಾಗಿಯೇ ಮರುಪರೀಕ್ಷೆ ನಡೆಸಲು ಆದೇಶಿಸುವುದು ನಮಗೆ ಕಷ್ಟಕರವೆನಿಸುತ್ತಿದೆ. ಹಾಗಾಗಿ, ಇಬ್ಬರು ವಿದ್ಯಾರ್ಥಿಗಳಿಗೆ ಹೊಸತಾಗಿ ಪರೀಕ್ಷೆ ನಡೆಸಬೇಕು ಎನ್ನುವ ಹೈಕೋರ್ಟ್‌ ಆದೇಶವನ್ನು ನಾವು ಬದಿಗೆ ಸರಿಸುತ್ತೇವೆ” ಎಂದು ಪೀಠವು ಹೇಳಿತು.

Also Read
ನೀಟ್ ಪದವಿ 2021: ಫಲಿತಾಂಶ ಪ್ರಕಟಿಸಲು ಎನ್‌ಟಿಎಗೆ ಹಸಿರು ನಿಶಾನೆ ತೋರಿದ ಸುಪ್ರೀಂಕೋರ್ಟ್

ಸೆಪ್ಟೆಂಬರ್ 12ರಂದು ನಡೆದ ನೀಟ್‌ ಪರೀಕ್ಷೆಯಲ್ಲಿ ಪರೀಕ್ಷಾ ಬುಕ್‌ಲೆಟ್‌ಗಳು ಕೆಳಗೆ ಬಿದ್ದ ಪರಿಣಾಮ ಒಎಂಆರ್‌ ಶೀಟ್‌ಗಳು ಬೆರಕೆಯಾಗಿವೆ ಎಂದು ಆರೋಪಿಸಿ ಇಬ್ಬರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಿಸದಂತೆ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ)ಗೆ ಬಾಂಬೆ ಹೈಕೋರ್ಟ್‌ ಸೂಚಿಸಿತ್ತು.

ಇಬ್ಬರು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಇರುವ ಯಾವುದೇ ಗೊಂದಲ ಸರಿಪಡಿಸಲಾಗುವುದು ಆದರೆ ಇತರ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಬಾರದು ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ ಫಲಿತಾಂಶ ಪ್ರಕಟಣೆಗೆ ಅನುವು ಮಾಡಿಕೊಟ್ಟಿತ್ತು. ಈ ವೇಳೆ ಅದು, ಇಬ್ಬರು ವಿದ್ಯಾರ್ಥಿಗಳ ಸಮಸ್ಯೆ ಪರಿಶೀಲಿಸೋಣ ಆದರೆ ಅದಕ್ಕಾಗಿ 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗದು ಎಂದಿತ್ತು.

Related Stories

No stories found.
Kannada Bar & Bench
kannada.barandbench.com