ಸ್ವಜನ ಪಕ್ಷಪಾತ ಪ್ರಕರಣ: ಶಾಸಕ ಓಲೆಕಾರ್‌ ವಿರುದ್ಧದ ದೋಷಿ ಆದೇಶಕ್ಕೆ ಹೈಕೋರ್ಟ್‌ ತಡೆ; ಚುನಾವಣಾ ಸ್ಪರ್ಧೆ ಸುಗಮ

ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರನ್ನು ಪರಿಗಣಿಸುವ ಕಾನೂನು ಪಾಲಿಸಿಲ್ಲ. ಹೀಗಾಗಿ, ಮೊದಲಿಗೆ ದೋಷಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಮಾರ್ಚ್‌ 4ರಂದು ಮಾನ್ಯ ಮಾಡಿತ್ತು.
BJP MLA Nehru Olekar and Karnataka HC
BJP MLA Nehru Olekar and Karnataka HC
Published on

ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್‌ ವಂಚನೆ ಪ್ರಕರಣದಲ್ಲಿ ಬಿಜೆಪಿಯ ಹಾವೇರಿ ಶಾಸಕ ನೆಹರೂ ಓಲೆಕಾರ್‌ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ವಿಚಾರಣಾಧೀನ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ. ಈಚೆಗೆ ಇದೇ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷ ಶಿಕ್ಷೆಯನ್ನು ಹೈಕೋರ್ಟ್‌ ಅಮಾನತ್ತಿನಲ್ಲಿರಿಸಿತ್ತು. ದೋಷಿ ಮತ್ತು ಶಿಕ್ಷೆ ಆದೇಶಗಳೆರಡಕ್ಕೂ ತಡೆಯಾಗಿರುವುದರಿಂದ ಓಲೆಕಾರ್‌ ಅವರು ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾದಿ ಸುಗಮವಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಎರಡು ವರ್ಷಗಳ ಶಿಕ್ಷೆ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಓಲೆಕಾರ್‌ ಅವರನ್ನು ಸಲ್ಲಿಸಿದ್ದ ಮಧ್ಯಂತರ ವಿಚಾರಣೆ ನಡೆಸಿ, ಮಾರ್ಚ್‌ 31ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.

ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಓಲೆಕಾರ್‌, ಅವರ ಇಬ್ಬರು ಪುತ್ರರು ಮತ್ತು ಅಧಿಕಾರಿಗಳನ್ನು ದೋಷಿಗಳು ಎಂದು ಪರಿಗಣಿಸಿ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಓಲೆಕಾರ್‌ ಅವರು ಫೆಬ್ರವರಿ 23ರಂದು ಹೈಕೋರ್ಟ್‌ ಕದ ತಟ್ಟಿದ್ದರು. ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರನ್ನು ಪರಿಗಣಿಸುವ ಕಾನೂನು ಪಾಲಿಸಿಲ್ಲ ಎಂದು ವಾದಿಸಿದ್ದರು. ಇದನ್ನು ಪುರಸ್ಕರಿಸಿದ್ದ ಪೀಠವು ಮೊದಲಿಗೆ ಜೈಲು ಶಿಕ್ಷೆ ಆದೇಶವನ್ನು ಅಮಾನತ್ತಿನಲ್ಲಿರಿಸಿತ್ತು. ಇದರ ಆಧಾರದ ಮೇಲೆ ದೋಷಿ ಎನ್ನುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮತ್ತೊಂದು ಮಧ್ಯಂತರ ಅರ್ಜಿಯನ್ನು ದಾಖಲಿಸಲಾಗಿತ್ತು. ಈಗ ಅದನ್ನೂ ಹೈಕೋರ್ಟ್‌ ಮಾನ್ಯ ಮಾಡಿರುವುದರಿಂದ ಓಲೆಕಾರ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಾಗಿದೆ.

ಅರ್ಜಿದಾರರ ಪರವಾಗಿ ವಕೀಲ ಆರ್‌ ಸ್ವರೂಪ್‌ ಆನಂದ್‌ ಅವರು ವಾದ ಮಂಡಿಸಿದ್ದರು.

R Swaroop Anand, Counsel
R Swaroop Anand, Counsel

ಪ್ರಕರಣದ ಹಿನ್ನೆಲೆ: ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್‌ ವಂಚನೆ ಪ್ರಕರಣದಲ್ಲಿ ಶಾಸಕ ನೆಹರೂ ಓಲೆಕಾರ್‌ ಮತ್ತು ಅವರ ಇಬ್ಬರು ಪುತ್ರರಾದ ದೇವರಾಜ್‌ ಮತ್ತು ಮಂಜುನಾಥ್‌ ಹಾಗೂ ಐವರು ಅಧಿಕಾರಿಗಳಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಫೆಬ್ರವರಿ 13ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿತ್ತು.

Also Read
ಓಲೆಕಾರ್ ದೋಷಿ ಪ್ರಕರಣ: "ಬೇರೆಯವರನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ, ಇವರನ್ನೇಕೆ ಮಾಡಿಲ್ಲ?" ಹೈಕೋರ್ಟ್‌ ಪ್ರಶ್ನೆ

2013ರಲ್ಲಿ ಹಾವೇರಿಯ ಶಶಿಧರ್‌ ಹಳ್ಳಿಕೇರಿ ಅವರು ದೂರು ದಾಖಲಿಸಿ, 2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೆಕಾರ್‌ ಅವರು ಸರ್ಕಾರದ ಸಿವಿಲ್‌ ಕೆಲಸಗಳನ್ನು ಬೇರೆಯವರಿಗೆ ದಕ್ಕದಂತೆ ತಮ್ಮ ಇಬ್ಬರು ಪುತ್ರರಿಗೆ ಕೊಡಿಸಿದ್ದರು ಎಂದು ಆರೋಪಿಸಿದ್ದರು. ಈ ಖಾಸಗಿ ದೂರನ್ನು ಆಧರಿಸಿ ಹಾವೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.

ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 197, 198, 409 ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಡಿ) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿ, ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆಯ ಜೊತೆಗೆ ಶಾಸಕ ಓಲೆಕಾರ್‌ಗೆ ₹2,000 ದಂಡ ವಿಧಿಸಿದ್ದು, ಅವರ ಇಬ್ಬರು ಪುತ್ರರಿಗೆ ತಲಾ ₹6,000 ಹಾಗೂ 4,5,7,8 ಮತ್ತು 9ನೇ ಆರೋಪಿಗಳಿಗೆ ತಲಾ ₹8,000 ದಂಡ ವಿಧಿಸಿತ್ತು. ದೋಷಿಗಳ ಪೈಕಿ ಓಲೇಕಾರ್‌ ಮಾತ್ರ ಹೈಕೋರ್ಟ್‌ ಕದತಟ್ಟಿದ್ದಾರೆ.

Kannada Bar & Bench
kannada.barandbench.com