ಸರ್ಕಾರಗಳಿಂದ ಯಾವುದೇ ರಾಜಕೀಯ ಒತ್ತಡ ಎದುರಿಸಿಲ್ಲ: ಸಿಜೆಐ ಡಿ ವೈ ಚಂದ್ರಚೂಡ್

ಲಂಡನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್, "ನಾನು ನ್ಯಾಯಾಧೀಶನಾಗಿದ್ದ 24 ವರ್ಷಗಳಲ್ಲಿ ಎಂದಿಗೂ ಸರ್ಕಾರಗಳಿಂದ ರಾಜಕೀಯ ಒತ್ತಡ ಎದುರಿಸಿಲ್ಲ" ಎಂದರು.
CJI DY Chandrachud
CJI DY Chandrachud

ನ್ಯಾಯಾಧೀಶರಾಗಿ ತಮ್ಮ 24 ವರ್ಷಗಳ ಸುದೀರ್ಘ ಅಧಿಕಾರಾವಧಿಯಲ್ಲಿ ಯಾವುದೇ ಸರ್ಕಾರದಿಂದ ರಾಜಕೀಯ ಒತ್ತಡ ಎದುರಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ ಲಂಡನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ "ಕಾನೂನನ್ನು ಮಾನವೀಕರಣಗೊಳಿಸುವಲ್ಲಿ ನ್ಯಾಯಾಲಯಗಳ ಪಾತ್ರ" ಎಂಬ ವಿಷಯದ ಕುರಿತು ಮಾತನಾಡಿದ ಬಳಿಕ ನಡೆದ ಸಂವಾದದ ವೇಳೆ ಅವರು ಈ ವಿಚಾರ ತಿಳಿಸಿದರು.  

ಸಿಜೆಐ ಭಾಷಣ ಮತ್ತು ಸಂವಾದ ಪ್ರಮುಖಾಂಶಗಳು

ಭಾರತದಲ್ಲಿ ನಾವು ಪಾಲಿಸುವ ಕೆಲವು ಪ್ರಜಾಸತ್ತಾತ್ಮಕ ಸಂಪ್ರದಾಯಗಳ ಕಾರಣಕ್ಕೆ ನಾನು ನ್ಯಾಯಾಧೀಶನಾಗಿದ್ದ 24 ವರ್ಷಗಳಲ್ಲಿ ಎಂದಿಗೂ ಆಡಳಿತಾರೂಢರಿಂದ ರಾಜಕೀಯ ಒತ್ತಡ ಎದುರಿಸಲಿಲ್ಲ. ಸರ್ಕಾರದ ರಾಜಕೀಯ ಬಾಹುಗಳಿಂದ ಪ್ರತ್ಯೇಕವಾಗಿ ನಾವು ಬದುಕುತ್ತೇವೆ.

ಆದರೂ, ನ್ಯಾಯಾಧೀಶರು ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣಗಳನ್ನು ನಿರ್ಧರಿಸುವಾಗ  ಬೇರೆ ರೀತಿಯ ರಾಜಕೀಯ ಒತ್ತಡ ಎದುರಿಸುತ್ತಾರೆ.

ನ್ಯಾಯಾಲಯಗಳು ಕೂಡ ಆಗಾಗ ಸಾಮಾಜಿಕ ಒತ್ತಡಗಳನ್ನು ಎದುರಿಸುತ್ತವೆ. ನಾವು ನಿರ್ಧರಿಸುವ ಅನೇಕ ಪ್ರಕರಣಗಳು ತೀವ್ರವಾದ ಸಾಮಾಜಿಕ ಪರಿಣಾಮಗಳನ್ನು ಒಳಗೊಂಡಿದ್ದು ನ್ಯಾಯಾಧೀಶರಾಗಿ ಸಾಮಾಜಿಕ ಗುಂಪುಗಳ ಮೇಲೆ ನಮ್ಮ ತೀರ್ಪುಗಳು ಬೀರುವ ಪ್ರಭಾವವನ್ನು ತಿಳಿಯುವುದು ನಮ್ಮ ಕರ್ತವ್ಯ ಎಂದು ನಾನು ನಂಬುತ್ತೇನೆ.  

ಕಾನೂನು ಮತ್ತು ನ್ಯಾಯಾಲಯದ ವಿಚಾರಣೆ ಕೆಲವೊಮ್ಮೆ ಜನರ ಮೇಲೆ ಅಮಾನವೀಯ ಪರಿಣಾಮ ಬೀರಲಿದ್ದು ಅದನ್ನು ಪರಿಹರಿಸಲು ನ್ಯಾಯಾಲಯಗಳು ಹೆಜ್ಜೆ ಹಾಕಬೇಕಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯ ಮೇಲೆ ಕಾನೂನು ಬೀರಬಹುದಾದ ಪರಿಣಾಮಗಳನ್ನು ಗಮನಿಸಿ ನಡೆಯುವ ನ್ಯಾಯಾಂಗ ಪರಿಶೀಲನೆ ಪ್ರಕ್ರಿಯೆಯು ನ್ಯಾಯಾಲಯಗಳು ಕಾನೂನನ್ನು ಮಾನವೀಯಗೊಳಿಸುವ ಒಂದು ಮಾರ್ಗವಾಗಿದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಕುರಿತು ಸಂಸತ್ತು ನಿರ್ಧರಿಸಬೇಕೇ ವಿನಾ  ನ್ಯಾಯಾಲಯವಲ್ಲ

ಸಲಿಂಗ ವಿವಾಹ ಕುರಿತು ಸುಪ್ರೀಂ ಕೋರ್ಟ್‌ ಕೆಲ ದಿನಗಳ ಹಿಂದೆ ನೀಡಿದ ತೀರ್ಪನ್ನು ನಾನು ಸಮರ್ಥಿಸದಿದ್ದರೂ, ನ್ಯಾಯಾಲಯದ ನ್ಯಾಯಾಂಗ ಪರಿಶೀಲನೆಯ ಅಧಿಕಾರಕ್ಕೆ ಮಿತಿಗಳು ಇವೆ.

ಸಂಸತ್ತು ಮಧ್ಯಪ್ರವೇಶಿಸುವವರೆಗೆ ಸಲಿಂಗ ಜೋಡಿ ಕನಿಷ್ಠ ಸಿವಿಲ್‌ ಯೂನಿಯನ್‌ನಲ್ಲಿ ತೊಡಗುವುದಕ್ಕಾದರೂ ಮಾನ್ಯತೆ ನೀಡಬೇಕು.

Kannada Bar & Bench
kannada.barandbench.com