ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆಯನ್ನು ಸಂಸತ್ತು ಅಂಗೀಕರಿಸಿದರೆ ಗುಂಪು ಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ.
ಗುಂಪು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಹೊಸ ಮಸೂದೆ ಶಿಕ್ಷಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಅಪರಾಧವನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸದಿದ್ದರೂ, ಕೊಲೆಯನ್ನು ವ್ಯಾಖ್ಯಾನಿಸುವ ಸೆಕ್ಷನ್ 101ರಡಿಯೇ ಗುಂಪು ಹತ್ಯೆ ಕೂಡ ಶಿಕ್ಷಾರ್ಹವಾಗಿದೆ.
ಗುಂಪು ಹತ್ಯೆಗೆ ದಂಡವನ್ನು ಸೆಕ್ಷನ್ 101(ಬಿ) ಅಡಿಯಲ್ಲಿ ವಿಧಿಸಲಾಗುತ್ತದೆ. “ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪೊಂದು ಜನಾಂಗ, ಜಾತಿ, ಸಮುದಾಯ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ವೈಯಕ್ತಿಕ ನಂಬಿಕೆ ಅಥವಾ ಯಾವುದೇ ಇತರ ಆಧಾರದ ಮೇಲೆ ಹತ್ಯೆ ನಡೆಸಿದಾಗ ಅಂತಹ ಗುಂಪಿನ ಪ್ರತಿಯೊಬ್ಬ ಸದಸ್ಯನಿಗೆ , ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷ ಇಲ್ಲವೇ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ” ಎಂದು ವಿವರಿಸಲಾಗಿದೆ.
ಮಸೂದೆಯಲ್ಲಿ ʼಗುಂಪು ಹತ್ಯೆ ಪದವನ್ನು ಸ್ಪಷ್ಟವಾಗಿ ಬಳಸದೇ ಇದ್ದರೂ ಗುಂಪು ಹತ್ಯೆಯ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹೊಸ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ಗೃಹಸಚಿವರು ಹೇಳಿದ್ದಾರೆ.
“ಗುಂಪು ಹತ್ಯೆ ಬಗ್ಗೆ ಸಾಕಷ್ಟು ಕೂಗು ಎದ್ದಿದೆ, ನಾವು ಅದನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಈ ಕಾನೂನಿನಲ್ಲಿ ಗುಂಪು ಹತ್ಯೆಗೆ 7 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲು ಅವಕಾಶಗಳಿವೆ” ಎಂದು ಅವರು ಹೇಳಿದ್ದಾರೆ.
[ಭಾರತೀಯ ನ್ಯಾಯ ಸಂಹಿತೆ ಪ್ರತಿಯನ್ನು ಇಲ್ಲಿ ಓದಿ]