ಹೊಸ ಪ್ರಕರಣಗಳ ಉಲ್ಲೇಖ ಮತ್ತು ಪಟ್ಟಿ: ಜುಲೈ 3ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನೂತನ ವಿಧಾನ

ಅದೇ ದಿನ ಪ್ರಕರಣಗಳನ್ನು ಪಟ್ಟಿ ಮಾಡಲು ಕೋರುವವರು, ನಮೂದು ಅಧಿಕಾರಿಗೆ ಪ್ರೋಫಾರ್ಮಾಗಳನ್ನು ತುರ್ತು ಪತ್ರದೊಂದಿಗೆ ಬೆಳಿಗ್ಗೆ 10:30ಕ್ಕೆ ಸಲ್ಲಿಸಬೇಕಿದೆ.
Supreme Court, CJI DY Chandrachud
Supreme Court, CJI DY Chandrachud

ಬೇಸಿಗೆ ರಜೆಯ ಬಳಿಕ ಕಾರ್ಯಾರಂಭ ಮಾಡಲಿರುವ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಪ್ರಕರಣಗಳನ್ನು ಉಲ್ಲೇಖಿಸಲು ಮತ್ತು ಪಟ್ಟಿ ಮಾಡಲು ನೂತನ ವಿಧಾನವೊಂದನ್ನು ಜಾರಿಗೆ ತರಲಾಗುತ್ತಿದೆ.

ಮಂಗಳವಾರದ ವೇಳೆಗೆ ಪರಿಶೀಲಿಸಲಾದ ಎಲ್ಲಾ ಹೊಸ ಮಿಸಲೇನಿಯಸ್‌ ಪ್ರಕರಣಗಳನ್ನುಮುಂದಿನ ಸೋಮವಾರಗಳಂದು ಸ್ವಯಂಚಾಲಿತವಾಗಿ  ಪಟ್ಟಿ ಮಾಡುವ ವಿಧಾನವನ್ನು ಜುಲೈ 3ರಿಂದ ಜಾರಿಗೆ ತರಲಾಗುತ್ತಿದೆ. ಇದೇವೇಳೆ ಮಂಗಳವಾರದ ನಂತರ ಪರಿಶೀಲನೆ ನಡೆಯಲಿರುವ ಅರ್ಜಿಗಳನ್ನು ತದನಂತರದ ಶುಕ್ರವಾರದಂದು ಪಟ್ಟಿ ಮಾಡಲಾಗುತ್ತದೆ.

ಪರಿಶೀಲನೆಗೊಳಗಾದ ಹೊಸ ಅರ್ಜಿಗಳನ್ನು ನಿಗದಿತ ದಿನಕ್ಕಿಂತ ಮೊದಲೇ ಪಟ್ಟಿ ಮಾಡುವಂತೆ ಕೋರುವ ವಕೀಲರು ಮರುದಿನವೇ  ಅವರ ಪ್ರಕರಣಗಳು ವಿಚಾರಣೆಗೆ ಬರುವಂತೆ ಮಾಡಲು ಮಧ್ಯಾಹ್ನ  3ಗಂಟೆಯೊಳಗೆ ಪ್ರೊಫಾರ್ಮಾಗಳನ್ನು ಸಲ್ಲಿಸುವ ಅಗತ್ಯವಿದೆ.

ಅದೇ ದಿನ ಪ್ರಕರಣಗಳನ್ನು ಪಟ್ಟಿ ಮಾಡಲು ಕೋರುವವರು, ನಮೂದು ಅಧಿಕಾರಿಗೆ ಪ್ರೋಫಾರ್ಮಾಗಳನ್ನು ತುರ್ತು ಪತ್ರದೊಂದಿಗೆ ಬೆಳಿಗ್ಗೆ 10:30ಕ್ಕೆ ಸಲ್ಲಿಸಬೇಕಿದೆ.

ಸಿಜೆಐ ಊಟದ ಸಮಯದಲ್ಲಿ ಅಥವಾ ಅವಶ್ಯಕತೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಇದಾಗಲೇ ನೋಟಿಸ್‌ ನೀಡಲಾಗಿರುವ ಮತ್ತು ನಿಯಮಿತ ವಿಚಾರಣೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಲು ಕೋರುವ ವಕೀಲರು ಮೊದಲು ನಮೂದು ಅಧಿಕಾರಿ (ಮೆನ್ಷನಿಂಗ್‌ ಆಫೀಸರ್‌) ಬಳಿ ಹೋಗಿ ಪ್ರೊಫಾರ್ಮಾ ಮತ್ತು ತುರ್ತು ಪತ್ರ ನೀಡಿ ದಾಖಲಿಸಬೇಕು.

ಸಿಜೆಐ ಅವರಿಂದ ಸೂಚನೆ ಪಡೆದ ಬಳಿಕ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ (ನ್ಯಾಯಾಂಗ ಆಡಳಿತ) ಅವರು ಸೂಕ್ತ ಪೀಠಗಳ ಮುಂದೆ ಪ್ರಕರಣಗಳನ್ನು ಉಲ್ಲೇಖಿಸುವುದಕ್ಕಾಗಿ ರಚಿಸಲಾದ ಪಟ್ಟಿಗಳನ್ನು ಸೂಚಿಸಲಿದ್ದಾರೆ.

ಒಂದು ದಿನದ ಮೊದಲು ಅಪ್‌ಲೋಡ್ ಮಾಡಲಾದ ಉಲ್ಲೇಖಿತ ಪಟ್ಟಿಗಳಲ್ಲಿನ ಅರ್ಜಿಗಳನ್ನು ಹೊರತುಪಡಿಸಿ ಬೇರಾವುದೇ ಪ್ರಕರಣಗಳ ಪಟ್ಟಿಗೆ ಅನುಮತಿ ಇರುವುದಿಲ್ಲ.   

ಎಲ್ಲಾ ಹೊಸ ಪ್ರಕರಣಗಳು ಅಥವಾ ನೂತನ ಪೀಠ ನಿಗದಿಯಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳಿಗ್ಗೆ 10:25 ಕ್ಕೆ ನಮೂದು ಪ್ರೊಫಾರ್ಮಾಗಳನ್ನು ಸಲ್ಲಿಸಬೇಕಿತ್ತು. ನಂತರ ಸಿಜೆಐ ಬೆಳಿಗ್ಗೆ 10.30 ರಿಂದ ಎಲ್ಲಾ ಉಲ್ಲೇಖಗಳನ್ನು ಆಲಿಸಿ ದಿನಾಂಕ ನಿಗದಿಪಡಿಸುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಕೆಲ ದಿನ 300ಕ್ಕೂ ಹೆಚ್ಚು ಐಟಂಗಳವರೆಗೆ ಅರ್ಜಿಗಳನ್ನು ಉಲ್ಲೇಖಿಸಿದ್ದಿದೆ. ಇದಾಗಲೇ ನೋಟಿಸ್ ನೀಡಲಾಗಿರುವ ಮತ್ತು ಭಾಗಶಃ ಆಲಿಸಿದ ನಿಯಮಿತ ಪ್ರಕರಣಗಳನ್ನು ಸಂಬಂಧಪಟ್ಟ ಪೀಠಗಳ ಮುಂದೆ ಪ್ರಸ್ತಾಪಿಸಲಾಗುತ್ತಿತ್ತು.

[ಸುತ್ತೋಲೆಯನ್ನು ಓದಿ]

Related Stories

No stories found.
Kannada Bar & Bench
kannada.barandbench.com