ವಕೀಲರ ತಿದ್ದುಪಡಿ ಮಸೂದೆ, ಸಿಇಸಿ ಆಯ್ಕೆ ಸಮಿತಿ ಮಸೂದೆ ಸೇರಿ ಸಂಸತ್‌ ವಿಶೇಷ ಅಧಿವೇಶನದಲ್ಲಿ 5 ಮಸೂದೆಗಳ ಮೇಲೆ ಚರ್ಚೆ

ʼಎಪ್ಪತ್ತೈದು ವರ್ಷಗಳ ಸಂಸದೀಯ ಯಾನʼ ಎಂಬ ವಿಷಯದ ಕುರಿತಂತೆ ಸೆಪ್ಟೆಂಬರ್ 18ರಂದು ನಡೆಯಲಿರುವ ಸಂಸತ್ ಅಧಿವೇಶನ ಚರ್ಚಿಸಲಿದ್ದು ಅಂದು ಐದು ಮಸೂದೆಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.
Parliament
Parliament

ಇದೇ ಸೆ. 18ರಿಂದ ಆರಂಭವಾಗಲಿರುವ ವಿಶೇಷ ಸಂಸತ್‌ ಅಧಿವೇಶನದಲ್ಲಿ ವಕೀಲರ (ತಿದ್ದುಪಡಿ) ಮಸೂದೆ- 2023, ಮುಖ್ಯ ಚುನಾವಣಾ ಆಯುಕ್ತರು ಮತ್ತಿತರ ಚುನಾವಣಾ ಆಯುಕ್ತರು (ನೇಮಕಾತಿ ಷರತ್ತು ಮತ್ತು ಹುದ್ದೆಯ ಅವಧಿ) ಮಸೂದೆ- 2023 ಸೇರಿದಂತೆ ಐದು ಮಸೂದೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಈ ಕುರಿತು ಕೇಂದ್ರ ಸರ್ಕಾರ ಬುಧವಾರ ಪ್ರಕಟಣೆ ಹೊರಡಿಸಿದ್ದು ʼಎಪ್ಪತ್ತೈದು ವರ್ಷಗಳ ಸಂಸದೀಯ ಯಾನ- ಸಾಧನೆ, ಅನುಭವ, ನೆನಪು ಹಾಗೂ ಪಾಠಗಳು ʼ ಎಂಬ ವಿಷಯದ ಕುರಿತಂತೆ ಸೆಪ್ಟೆಂಬರ್ 18ರಂದು ನಡೆಯಲಿರುವ ಸಂಸತ್‌ ಅಧಿವೇಶನ ಚರ್ಚಿಸಲಿದೆ. ಈ ವೇಳೆ ಐದು ಮಸೂದೆಗಳ ಕುರಿತು ಚರ್ಚೆ ಮತ್ತು ಅಂಗೀಕಾರ ನಡೆಯುವ ಸಾಧ್ಯತೆಯ ಸುಳಿವು ನೀಡಿದೆ.

ಇವುಗಳಲ್ಲಿ ನಾಲ್ಕನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಆ ನಾಲ್ಕರಲ್ಲಿ ಎರಡಕ್ಕೆ ಈಗಾಗಲೇ ರಾಜ್ಯಸಭೆಯ ಒಪ್ಪಿಗೆ ದೊರೆತಿದೆ. ಇನ್ನೆರಡು ಮಸೂದೆಗಳನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಬೇಕಿದೆ.

ಲೋಕಸಭೆಯಲ್ಲಿ ಚರ್ಚೆಗೆ ಬರಲಿರುವ ವಕೀಲರ (ತಿದ್ದುಪಡಿ) ಮಸೂದೆ- 2023ಕ್ಕೆ ರಾಜ್ಯಸಭೆ ಸಮ್ಮತಿ ಸೂಚಿಸಿದೆ. ಬಳಕೆಯಲ್ಲಿ ಇಲ್ಲದ ಎಲ್ಲಾ ಕಾನೂನುಗಳು ಅಥವಾ ಸ್ವಾತಂತ್ರ್ಯ ಪೂರ್ವ ಅವಧಿಯ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿ ಈ ಮಸೂದೆ ಮಂಡನೆಯಾಗುತ್ತಿದೆ.

ಲೋಕಸಭೆಯಲ್ಲಿ ಚರ್ಚಿಸಲಾಗುವ ಮತ್ತೊಂದು ಮಹತ್ವದ ಮಸೂದೆ, ಮುಖ್ಯ ಚುನಾವಣಾ ಆಯುಕ್ತರು ಮತ್ತಿತರ ಚುನಾವಣಾ ಆಯುಕ್ತರು (ನೇಮಕಾತಿ ಷರತ್ತು ಮತ್ತು ಹುದ್ದೆಯ ಅವಧಿ) ಮಸೂದೆ- 2023.
ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿರಿಸುವ ಉದ್ದೇಶ ಈ ಮಸೂದೆಯದ್ದಾಗಿದೆ.

ಮಸೂದೆ ಒಂದೊಮ್ಮೆ ಜಾರಿಯಾದರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತಿತರ ಆಯುಕ್ತರ ನೇಮಕಕ್ಕೆ ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇರುವ ಸಮಿತಿ ರಚಿಸಬೇಕು ಎಂದು ಮಾರ್ಚ್ 2023ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಸಲಹೆಗೆ ವಿರುದ್ಧವಾಗಿ ಸಮಿತಿಯಲ್ಲಿ ಸಿಜೆಐ ಅವರು ಇರುವುದಿಲ್ಲ.  ಮಸೂದೆಯನ್ನು ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಕಳೆದ ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು.

Also Read
ಭಾರತೀಯ ನ್ಯಾಯ ಸಂಹಿತೆ-2023: ನೂತನ ಮತ್ತು ರದ್ದುಗೊಂಡ ನಿಯಮಗಳ ಕುರಿತ ಮಾಹಿತಿ

ಚರ್ಚೆಗಾಗಿ ಪಟ್ಟಿ ಮಾಡಲಾದ ಇತರ ಮೂರು ಮಸೂದೆಗಳು ಈ ಕೆಳಗಿನಂತಿವೆ:

1. ರದ್ದತಿ ಮತ್ತು ತಿದ್ದುಪಡಿ ಮಸೂದೆ, 2023- ಇದನ್ನು ಜುಲೈ 2 ರಂದು ಲೋಕಸಭೆ ಅಂಗೀಕರಿಸಿದೆ. ಬಳಕೆಯಲ್ಲಿಲ್ಲದ ಅಥವಾ ಅನಗತ್ಯವಾಗಿರುವ 65 ಕಾನೂನುಗಳನ್ನು ರದ್ದುಗೊಳಿಸಲು ಈ ಮಸೂದೆ ಯತ್ನಿಸುತ್ತದೆ.

2. ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ- 2023 ಅನ್ನು ಆಗಸ್ಟ್ 3 ರಂದು ರಾಜ್ಯಸಭೆಯು ಅಂಗೀಕರಿಸಿದೆ. ಈ ಮಸೂದೆಯು 1867ರ ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯಿದೆಯನ್ನು ರದ್ದುಗೊಳಿಸಲಿದೆ.  ಈ ಮಸೂದೆ ನಿಯತಕಾಲಿಕಗಳ ನೋಂದಣಿಗೆ ಅವಕಾಶ ಕಲ್ಪಿಸಲಿದ್ದು ಸಾರ್ವಜನಿಕ ಸುದ್ದಿ ಅಥವಾ ಅಂತಹ ಸುದ್ದಿಗೆ ಸಂಬಂಧಿಸಿದ ಯಾವುದೇ ಅಭಿಪ್ರಾಯಗಳನ್ನು ಇದು ಒಳಗೊಂಡಿರುತ್ತದೆ. ನಿಯತಕಾಲಿಕಗಳು ಪುಸ್ತಕಗಳು ಅಥವಾ ವೈಜ್ಞಾನಿಕ ಮತ್ತು ಶೈಕ್ಷಣಿಕ ನಿಯತಕಾಲಿಕಗಳನ್ನು ಇದು ಒಳಗೊಳ್ಳುವುದಿಲ್ಲ.  

3.  ಅಂಚ ಕಚೇರಿ ಮಸೂದೆ- 2023ನ್ನು ರಾಜ್ಯಸಭೆಯಲ್ಲಿ ಆಗಸ್ಟ್ 10 ರಂದು ಮಂಡಿಸಲಾಗಿದೆ. ಭಾರತೀಯ ಅಂಚೆ ಕಚೇರಿ ಕಾಯಿದೆ- 1898ಅನ್ನು ರದ್ದುಗೊಳಿಸಲಿರುವ ಈ ಮಸೂದೆ ಭಾರತ ಅಂಚೆ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿಷಯಗಳನ್ನು ಒದಗಿಸುತ್ತದೆ.

Related Stories

No stories found.
Kannada Bar & Bench
kannada.barandbench.com