ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಅಡಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ವೆಬ್‌ಸೈಟ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅನಿಲ್ ಚಕ್ರವರ್ತಿ ಅವರನ್ನು ದೆಹಲಿಯ ನ್ಯಾಯಾಲಯವು ಬುಧವಾರ ಒಂಭತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪೊಲೀಸರ ಕೋರಿಕೆ ಪುರಸ್ಕರಿಸಿದ ಪಟಿಯಾಲ ಹೌಸ್ ಕೋರ್ಟ್‌ಗಳ ಹೆಚ್ಚುವರಿ ಸತ್ರ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಪುರಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ನವೆಂಬರ್ 2ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಿದರು.
ಅಕ್ಟೋಬರ್ 3ರಂದು ದೆಹಲಿ ಪೊಲೀಸರು ಪ್ರಬೀರ್ ಮತ್ತು ಅಮಿತ್ ಅವರನ್ನು ಬಂಧಿಸಿದ್ದು, ಮೊದಲಿಗೆ ಏಳು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆನಂತರ ಅಕ್ಟೋಬರ್ 10ರಂದ 20ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಬಳಿಕ ಅದನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿತ್ತು. ಇಂದು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಸಂರಕ್ಷಿತ ಸಾಕ್ಷಿ ಮತ್ತು ವಿದ್ಯುನ್ಮಾನ ದಾಖಲೆ ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಸಬೇಕು. ಹೀಗಾಗಿ, ಕಸ್ಟಡಿಗೆ ನೀಡುವಂತೆ ಕೋರಿದರು. ಇದನ್ನು ನ್ಯಾಯಾಲಯ ಮನ್ನಿಸಿದೆ.