ದಿನಪತ್ರಿಕೆಗಳಿಗೊಂದು ನಿಯಮ ಅದೇ ಪತ್ರಿಕೆಗಳ ಜಾಲತಾಣಗಳಿಗೊಂದು ನಿಯಮ: ವಿರೋಧಾಭಾಸ ಪ್ರಶ್ನಿಸಿದ ಬಾಂಬೆ ಹೈಕೋರ್ಟ್

ಐಟಿ ತಿದ್ದುಪಡಿ ನಿಯಮ- 2023ರ ಮೂಲಕ ಫ್ಯಾಕ್ಟ್-ಚೆಕ್ ಘಟಕಗಳನ್ನು ಅಸ್ತಿತ್ವಕ್ಕೆ ತರುವುದನ್ನು ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಪೀಠ ತೀರ್ಪು ಕಾಯ್ದಿರಿಸಿತು.
Bombay High Court and “Amendment to IT Rules”
Bombay High Court and “Amendment to IT Rules”

ಮಾಹಿತಿ ತಂತ್ರಜ್ಞಾನ ಮಧ್ಯಸ್ಥವೇದಿಕೆಗಳ ನಿಯಮಾವಳಿ ತಿದ್ದುಪಡಿಯು ಪತ್ರಿಕೆಗಳಿಗೆ ಅನ್ವಯಿಸುತ್ತಿಲ್ಲ ಆದರೆ ಅದೇ ಮಾಹಿತಿಯನ್ನು ಪುನರಾವರ್ತಿಸುವ ಆ ಪತ್ರಿಕೆಗಳ ಆನ್‌ಲೈನ್  ವೇದಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬ ಅಂಶದಲ್ಲಿನ ವಿರೋಧಾಭಾಸವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಎತ್ತಿ ತೋರಿಸಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಾವಳಿ 2023ಕ್ಕೆ ಮಾಡಲಾದ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಐ ಟಿ ನಿಯಮಾವಳಿಗೆ ತಿದ್ದುಪಡಿ: ಹೇಗಿರಲಿದೆ ದೂರು ಮೇಲ್ಮನವಿ ಸಮಿತಿಯ ಸ್ವರೂಪ?

"ಸರ್ಕಾರ ಅನುಮೋದಿಸಿರುವುದನ್ನು ಮಾತ್ರ ಮುದ್ರಿಸಬೇಕು ಎಂಬ ಯಾವುದಾದರೂ ಬಾಧ್ಯತೆ ಪತ್ರಿಕೆಗಳಿಗೆ ಇದೆಯೇ? ಪತ್ರಿಕೆಗಳಿಗೆ ಅಂತಹ ಯಾವುದೇ ಬಾಧ್ಯತೆ ಇಲ್ಲದಿದ್ದಾಗ ನಂತರ ಅದೇ ಪತ್ರಿಕೆಯ ಜಾಲತಾಣದಿಂದ ಅದೇ ಸುದ್ದಿಯನ್ನು ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ಆಗ ಈ ನಿರ್ದೇಶನ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಪತ್ರಿಕೆಯ ವಿಚಾರಕ್ಕೆ ಸರ್ಕಾರ ಹೋಗಿಲ್ಲ. ಇದು ನಮಗೆ ಅರ್ಥವಾಗದ ವಿಷಯ" ಎಂದು ನ್ಯಾಯಾಲಯ ಹೇಳಿತು.

ಐಟಿ ತಿದ್ದುಪಡಿ ನಿಯಮಾವಳಿ- 2023ರ ಮೂಲಕ  ಫ್ಯಾಕ್ಟ್-ಚೆಕ್  ಘಟಕಗಳನ್ನು ಅಸ್ತಿತ್ವಕ್ಕೆ ತರುವುದನ್ನು ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜೀನ್ಸ್ ಮತ್ತು ನ್ಯೂಸ್ ಬ್ರಾಡ್‌ಕಾಸ್ಟ್ ಅಂಡ್‌ ಡಿಜಿಟಲ್ ಅಸೋಸಿಯೇಷನ್ ಸಲ್ಲಿಸಿದ್ದ ನಾಲ್ಕು ಅರ್ಜಿಗಳಿಗೆ ಸಂಬಂಧಿಸಿದಂತೆ ಪೀಠ ತೀರ್ಪು ಕಾಯ್ದಿರಿಸಿತು. ಡಿಸೆಂಬರ್ 1, 2023 ರೊಳಗೆ ತೀರ್ಪು ಪ್ರಕಟಿಸಲು ಯತ್ನಿಸುವುದಾಗಿ ಅದು ಹೇಳಿದೆ.

ಅರ್ಜಿಗಳು ಐಟಿ ನಿಯಮಾವಳಿಗಳಿಗೆ ಅದರಲ್ಲಿಯೂ ನಿಯಮ 3ಕ್ಕೆ ಮಾಡಿದ ತಿದ್ದುಪಡಿಗಳನ್ನು ಪ್ರಶ್ನಿಸಿವೆ. ತಿದ್ದುಪಡಿ ಪ್ರಕಾರ ಕೇಂದ್ರ ಸರ್ಕಾರ ಫ್ಯಾಕ್ಟ್‌ ಚೆಕ್‌ ಘಟಕಗಳನ್ನು ರಚಿಸಬಹುದಾಗಿದ್ದು  ಸರ್ಕಾರದ ಚಟುವಟಿಕೆಗಳಿಗೆ ಸಂಬಂಧಿಸಿದ ಸುಳ್ಳು ಅಥವಾ ನಕಲಿ ಆನ್‌ಲೈನ್‌ ಸುದ್ದಿಗಳನ್ನು ಪತ್ತೆ ಹಚ್ಚಲು ಆ ಘಟಕಕ್ಕೆ ಅಧಿಕಾರ ದೊರೆಯುತ್ತದೆ.  

Kannada Bar & Bench
kannada.barandbench.com