
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಅಸಮರ್ಪಕವಾಗಿ ಒದಗಿಸಿದ ಪರಿಣಾಮ ಗಂಗಾ ನದಿಯ ದಡದಲ್ಲಿ ವ್ಯಾಪಕ ಬಯಲು ಬಹಿರ್ದೆಸೆ ಸಮಸ್ಯೆ ತಲೆದೋರಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಹಾಗೂ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಈಚೆಗೆ ನೋಟಿಸ್ ಜಾರಿ ಮಾಡಿದೆ.
ಫೆಬ್ರವರಿ 24 ರಂದು ನಡೆಯಲಿರುವ ವಿಚಾರಣೆಗೆ ಮುನ್ನ ಈ ಸಂಬಂಧ ಪ್ರತಿಕ್ರಿಯಿಸುವಂತೆ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ. ಎ. ಸೆಂಥಿಲ್‌ವೇಲ್ ಅವರಿದ್ದ ಪೀಠ ಸೂಚಿಸಿದೆ.
ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ ಲಕ್ಷಾಂತರ ಜನ ಗಂಗಾ ನದಿಯ ದಡದ ಬಯಲಿನಲ್ಲಿ ಮಲವಿಸರ್ಜನೆಗೆ ತೊಡಗುವಂತಾಗಿದೆ ಎಂದಿರುವ ಅರ್ಜಿ ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ನ್ಯಾಯಮಂಡಳಿಯೊಂದಿಗೆ ಹಂಚಿಕೊಂಡಿದೆ.
ನೈರ್ಮಲ್ಯ ಸೌಲಭ್ಯ ಒದಗಿಸದ ಉತ್ತರ ಪ್ರದೇಶ ಸರ್ಕಾರ ₹10 ಕೋಟಿ ಪರಿಸರ ಪರಿಹಾರ ನೀಡಬೇಕು ಎಂದು ಕೋರಿ ಅರ್ಜಿ ನಿಪುಣ್ ಭೂಷಣ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಪರಿಸರಕ್ಕೆ ಉಂಟಾಗುವ ಹಾನಿಯ ವೆಚ್ಚವನ್ನು ಮಾಲಿನ್ಯಕಾರರೇ ಭರಿಸಬೇಕು ಎಂದು ಪರಿಸರ ಕಾನೂನು ಹೇಳುತ್ತದೆ. ಅಲ್ಲದೆ ಪರಿಸರ ರಕ್ಷಣೆ ಸರ್ಕಾರದ ಬದ್ಧ ಕರ್ತವ್ಯ ಎಂದು ಹೇಳುವ ಸಂವಿಧಾನದ 48 ಎ ವಿಧಿಯನ್ನು ಉಲ್ಲಂಘಿಸಲಾಗಿದೆ ಎಂದು ಅವರು ದೂರಿದ್ದಾರೆ.
ಜೈವಿಕ ಶೌಚಾಲಯಗಳನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತಾದರೂ ಅಂತಹ ಸೌಲಭ್ಯಗಳು ದೊರೆಯದೆ ಸಾವಿರಾರು ಯಾತ್ರಿಕರು ಬಯಲಿನಲ್ಲಿ ಮಲ ವಿಸರ್ಜಿಸುವಂತಾಗಿದೆ. 1.5 ಲಕ್ಷ ಜೈವಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದರೂ ಯಾತ್ರಿಕರ ಸಂಖ್ಯೆ ವಿಪರೀತ ಇದೆ. ಸಂದರ್ಶಕರೇ ರೆಕಾರ್ಡ್ ಮಾಡಿದ ವಿಡಿಯೋಗಳು ನದಿ ದಡದಲ್ಲಿ ಮಾನವ ತ್ಯಾಜ್ಯ ಸಂಗ್ರಹವಾಗಿರುವುದನ್ನು ತೋರಿಸುತ್ತವೆ. ಇದು ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕುತ್ತದೆ ಎಂದು ಅರ್ಜಿ ತಿಳಿಸಿದೆ.
ನವೆಂಬರ್ 2024ರಲ್ಲಿ ನಡೆದಿದ್ದ ನೀರಿನ ಗುಣಮಟ್ಟ ಪರೀಕ್ಷೆಯನ್ನು ಸಹ ಉಲ್ಲೇಖಿಸಿರುವ ಅರ್ಜಿ ನೀರಿನಲ್ಲಿರುವ ಮಾಲಿನ್ಯಕಾರಕಗಳಿಂದಾಗಿ ಕಾಲರಾ, ಹೆಪಟೈಟಿಸ್ ಎ ಮತ್ತು ಪೋಲಿಯೊದಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.
ಈಚೆಗೆ ಮಹಾಕುಂಭದ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ. ಸಂಗಮದ ನೀರಿನಲ್ಲಿ ಕೊಳಚೆ ನೀರಿನ ಮಾಲಿನ್ಯದ ಸೂಚಕವಾದ ಫೀಕಲ್ ಕೊಲಿಫಾರ್ಮ್ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎನ್‌ಜಿಟಿಗೆ ತಿಳಿಸಿತ್ತು. ಇದೇ ವೇಳೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟದ ಇತ್ತೀಚಿನ ಮಾಹಿತಿ ಹಂಚಿಕೊಳ್ಳದೆ ಇರುವುದರಿಂದ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಈ ಮನವಿ ಹೇಳಿತ್ತು.