ದೆಹಲಿ ಕಾಲ್ತುಳಿತ ದುರಂತ: 'ಮಿತಿ ಮೀರಿ ಟಿಕೆಟ್ ಮಾರಿದ್ದೇಕೆ?' ರೈಲ್ವೇಗೆ ಹೈಕೋರ್ಟ್ ಪ್ರಶ್ನೆ

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದಾಗಿ ಈಚೆಗೆ ಕನಿಷ್ಠ 18ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಅರ್ಥ್ ವಿಧಿ ಸರ್ಕಾರೇತರ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು.
Train
Train
Published on

ನವದೆಹಲಿ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತ ರೀತಿಯ ಘಟನೆಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತು ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರ, ಭಾರತೀಯ ರೈಲ್ವೆ ಮತ್ತು ರೈಲ್ವೆ ಮಂಡಳಿಗೆ ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿದೆ.

ಬೋಗಿಯೊಂದರಲ್ಲಿ ಪ್ರಯಣಿಸಲು ಅನುಮತಿಸಬಹುದಾದ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಮಾರಾಟ ಮಾಡಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ರೈಲ್ವೆ ಇಲಾಖೆಯನ್ನು ಪ್ರಶ್ನಿಸಿತು.

Also Read
ಮಹಾ ಕುಂಭಮೇಳ ಸಂಚಾರ ದಟ್ಟಣೆ: ಹಲವು ಪ್ರಕರಣಗಳನ್ನು ಮುಂದೂಡಿದ ಅಲಾಹಾಬಾದ್ ಹೈಕೋರ್ಟ್

"ಬೋಗಿಯು ಇಂತಿಷ್ಟು ಪ್ರಯಾಣಿಕರನ್ನು ಒಳಗೊಳ್ಳಬಹುದು ಎಂದು ರೈಲ್ವೆ ನಿಗದಿಪಡಿಸಿರುವಾಗ ಹೆಚ್ಚಿನ ಸಂಖ್ಯೆಯ ಟಿಕೆಟ್‌ ಮಾರಾಟ ಮಾಡಿದ್ದೇಕೆ? ಇದೊಂದು ಸಮಸ್ಯೆ" ಎಂದು ನ್ಯಾಯಾಲಯ ಟೀಕಿಸಿತು.

ಒಂದು ಬೋಗಿಯಲ್ಲಿ ಸಾಗಿಸಬಹುದಾದ ಗರಿಷ್ಠ ಸಂಖ್ಯೆಯ ಪ್ರಯಾಣಿಕರ ನಿಗದಿ ಬಗ್ಗೆ ಪ್ರಸ್ತಾಪಿಸುವ ರೈಲ್ವೆ ಕಾಯಿದೆಯ ಸೆಕ್ಷನ್ 57ನ್ನು ನ್ಯಾಯಾಲಯ ನಿರ್ದಿಷ್ಟವಾಗಿ ಉಲ್ಲೇಖಿಸಿತು.

ರೈಲ್ವೆ ಸರಳ ವಿಚಾರವನ್ನು ಸಕಾರಾತ್ಮಕ ರೀತಿಯಲ್ಲಿ ಜಾರಿಗೊಳಿಸಿದ್ದರೆ ಅಂತಹ ಪರಿಸ್ಥಿತಿ ತಪ್ಪುತ್ತಿತ್ತು. ಹೆಚ್ಚು ಜನರಿದ್ದ ದಿನಗಳಲ್ಲಿ ಟಿಕೆಟ್‌ ಸಂಖ್ಯೆ ಹೆಚ್ಚಿಸಬಹುದು. ಆದರೆ ಬೋಗಿಗಳ ಸಂಖ್ಯೆ ಹೆಚ್ಚು ಮಾಡದೆ ಹಾಗೆ ಮಾಡಿರುವುದು ರೈಲ್ವೆ ಕಾಯಿದೆಯನ್ನು ಒಟ್ಟಾರೆ ನಿರ್ಲಕ್ಷಿಸಿದಂತೆ ತೋರುತ್ತದೆ ಎಂದು ಪೀಠ ಕಿಡಿಕಾರಿತು.

ವಿಚಾರಣೆಯ ವೇಳೆ ರೈಲ್ವೆಯ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂಬ ವಾದವನ್ನು ನ್ಯಾಯಾಲಯ ಆರಂಭದಲ್ಲಿ ಒಪ್ಪಲಿಲ್ಲವಾದರೂ ದುರಂತದ ಗಂಭೀರತೆಯ ಬಗ್ಗೆ ಹಾಗೂ ರೈಲ್ವೆಯ ವೈಫಲ್ಯಗಳ ಬಗ್ಗೆ ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದಕ್ಕೆ ಸಮ್ಮತಿ ವ್ಯಕ್ತಪಡಿಸಿತು.

ಅರ್ಜಿದಾರರ ಕಳವಳ ಕೇವಲ ಈ ದುರದೃಷ್ಟಕರ ಘಟನೆಗೆ ಮಾತ್ರ ಸೀಮಿತವಾಗಿಲ್ಲ. ರೈಲ್ವೆ ತನ್ನ ನಿಯಮಗಳನ್ನು ಪಾಲಿಸಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂಬುದು ಅವರ ಕಾಳಜಿ. ಭವಿಷ್ಯದಲ್ಲಿ ಕಾಯಿದೆಯ ಅನುಷ್ಠಾನಗೊಳಿಸುವಂತೆ ರೈಲ್ವೆಗೆ ನಿರ್ದೇಶನ ನೀಡುವಂತೆ ಅವರು ಕೇಳುತ್ತಿದ್ದಾರೆ. ಅರ್ಜಿಗೆ ಯಾವುದೇ ವಿರೋಧ ಇರಬಾರದು" ಎಂದು ನ್ಯಾಯಮೂರ್ತಿ ಉಪಾಧ್ಯಾಯ ಹೇಳಿದರು.

Also Read
ಕುಂಭಮೇಳ ಕಾಲ್ತುಳಿತ ದುರಂತ: ಉತ್ತರ ಪ್ರದೇಶ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರಿ ಸುಪ್ರೀಂಗೆ ಪಿಐಎಲ್

ಭಾರತೀಯ ರೈಲ್ವೆ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ತಾವು ಪ್ರತಿಕೂಲ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ವಾದಿಸಿದರು.

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದಾಗಿ ಈಚೆಗೆ ಕನಿಷ್ಠ 18 ಜನ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ವಕೀಲರು, ಉದ್ಯಮಿಗಳು ಮತ್ತು ಇತರ ವೃತ್ತಿಪರರ ಸಂಘಟನೆಯಾದ ʼಅರ್ಥ್ ವಿಧಿʼ ವಕೀಲ ಆದಿತ್ಯ ತ್ರಿವೇದಿ ಅವರ ಮೂಲಕ ಅರ್ಜಿ ಸಲ್ಲಿಸಿತ್ತು. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಕಾರಣಕ್ಕೆ ಜನದಟ್ಟಣೆ ಉಂಟಾಗಿ ನಿಲ್ದಾಣ ಕಿಕ್ಕಿರಿದು ತುಂಬಿತ್ತು.  ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 26ರಂದು ನಡೆಯಲಿದೆ.

Kannada Bar & Bench
kannada.barandbench.com