ಎನ್ಐಎ ಕಸ್ಟಡಿ ನನ್ನ ಬದುಕಿನ ಅತಿ ಆಘಾತಕಾರಿ ಅವಧಿ, ದಾಖಲೆಗಳಿಗೆ ಸಹಿ ಹಾಕಲು ಒತ್ತಡ: ಚಾಂಡಿವಾಲ್ ಸಮಿತಿಗೆ ವಾಜೆ

ಎನ್ಐಎ ಕಸ್ಟಡಿಯಲ್ಲಿದ್ದ ವೇಳೆ ಯಾವುದಾದರೂ ಒತ್ತಡ ಎದುರಾಯಿತೆ ಎಂದು ಅನಿಲ್ ದೇಶಮುಖ್ ಪರ ವಕೀಲರು ಪಾಟಿ ಸವಾಲಿನ ವೇಳೆ ಕೇಳಿದ ಪ್ರಶ್ನೆಗೆ ತನಗೆ ಕಿರುಕುಳ ನೀಡಿದ್ದು ಕೇಂದ್ರ ತನಿಖಾ ಸಂಸ್ಥೆಯೊಂದೇ ಎಂದು ವಾಜೆ ಪ್ರತಿಕ್ರಿಯಿಸಿದರು.
Sachin Waze and NIA
Sachin Waze and NIA

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಸ್ಟಡಿಯಲ್ಲಿ ಕಳೆದ 28 ದಿನಗಳು ತಮ್ಮ ಜೀವನದ ಅತಿ ಆಘಾತಕಾರಿ ಅವಧಿ ಎಂದು ಸೇವೆಯಿಂದ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ನ್ಯಾಯಮೂರ್ತಿ ಕೆ ಯು ಚಾಂಡಿವಾಲ್ ಅವರಿರುವ ಉನ್ನತ ಮಟ್ಟದ ಏಕಸದಸ್ಯ ಸಮಿತಿಗೆ ಮಂಗಳವಾರ ತಿಳಿಸಿದರು.

ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಮಾಡಿದ ಆರೋಪಗಳ ನ್ಯಾಯಾಂಗ ವಿಚಾರಣೆಯನ್ನು ಸಮಿತಿ ಕೈಗೆತ್ತಿಕೊಂಡಿದೆ. ವಿಚಾರಣೆ ವೇಳೆ ದೇಶ್‌ಮುಖ್ ಪರ ವಕೀಲರಾದ ಅನಿತಾ ಕ್ಯಾಸ್ಟೆಲಿನೊ ಅವರು ನಡೆಸಿದ ಪಾಟಿ ಸವಾಲಿನ ವೇಳೆ ವಾಜೆ ಈ ಹೇಳಿಕೆ ನೀಡಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಹೊರಗೆ ಸ್ಫೋಟಕ ತುಂಬಿದ ಎಸ್‌ಯುವಿ ಮತ್ತು ಉದ್ಯಮಿ ಮನಸುಖ್‌ ಹಿರೇನ್ ಅವರ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಜೆ ಅವರನ್ನು ಬಂಧಿಸಿರುವ ಕುರಿತು ಅನಿತಾ ಅವರು ಪ್ರಶ್ನೆಗಳನ್ನು ಕೇಳಿದರು. ಎನ್‌ಐಎ ಕಸ್ಟಡಿಯಲ್ಲಿದ್ದಾಗ ಯಾವುದೇ ರೀತಿಯ ಒತ್ತಡ ಅಥವಾ ಪ್ರತಿಕೂಲ ಪರಿಸ್ಥಿತಿ ಎದುರಾಯಿತೆ ಎಂದು ತಿಳಿಯಲು ಯತ್ನಿಸಿದರು. ಇದಕ್ಕೆ ವಾಜೆ ಪ್ರತಿಕ್ರಿಯಿಸಿ, "ಇದು ನನ್ನ ಜೀವನದ ಅತಿ ಆಘಾತಕಾರಿ ಸಮಯ” ಎಂದರು.

Also Read
ತಿಂಗಳಿಗೆ ನೂರು ಕೋಟಿ ಅಕ್ರಮ ಹಣ ವಸೂಲಿಗೆ ಸಂಚು ಹೂಡಿದ್ದ ದೇಶ್‌ಮುಖ್‌-ವಾಜೆ; ಹತ್ತಾರು ಕೋಟಿ ಹಣ ವಸೂಲಿ: ಇ ಡಿ ಮಾಹಿತಿ

ಯಾವುದೇ ಕೇಂದ್ರೀಯ ತನಿಖಾ ಸಂಸ್ಥೆ ವಾಜೆ ಹೇಳಿಕೆಗಳನ್ನು ದಾಖಲಿಸಿದೆಯೇ ಎಂದು ಅನಿತಾ ಪ್ರಶ್ನಿಸಿದಾಗ ಆ 28 ದಿನಗಳ ಕಸ್ಟಡಿ ವೇಳೆ, ಕಿರುಕುಳ ಅಥವಾ ಅವಮಾನವನ್ನು ಉಂಟು ಮಾಡಿದ ಏಕೈಕ ಸಂಸ್ಥೆ ಎಂದರೆ ಎನ್‌ಐಎ. ಆ ಆಘಾತ ಇನ್ನೂ ಉಳಿದಿದೆ" ಎಂದು ವಾಜೆ ಉತ್ತರಿಸಿದರು.

ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ ಹೇಳಿಕೆಗಳನ್ನು ಸಾಬೀತುಪಡಿಸಲು ವಾಜೆ ಅವರ ಬಳಿ ಯಾವುದೇ ದಾಖಲೆಗಳಿವೆಯೇ ಎಂದು ಅನಿತಾ ಕೇಳಿದರು. ಎನ್‌ಐಎ ಹಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದೆ ಎಂದ ವಾಜೆ "ಒತ್ತಡವಿದ್ದುದರಿಂದ ತಮಗೆ ಯಾವುದೇ ದಾಖಲೆ ನೀಡಿಲ್ಲ” ಎಂಬುದಾಗಿ ತಿಳಿಸಿದರು.

ಆ ದಾಖಲೆಗಳನ್ನು ದೊರಕಿಸಿಕೊಡುವಂತೆ ಎನ್ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದು ಸದಕ್ಕೆ ಅಫಿಡವಿಟ್‌ನಲ್ಲಿ ನೀಡಿದ ಹೇಳಿಕೆಯನ್ನು ಬೆಂಬಲಿಸುವಂತಹ ಯಾವುದೇ ದಾಖಲೆ ಅವರ ಬಳಿ ಇಲ್ಲ ಎಂದು ವಿವರಿಸಿದರು.

ವಿಚಾರಣೆ ವೇಳೆ ಅನಿಲ್ ದೇಶಮುಖ್ ಕೂಡ ಮೊದಲ ಬಾರಿಗೆ ಸಮಿತಿ ಮುಂದೆ ಹಾಜರಾಗಿದ್ದರು. ಅನಿತಾ ಅವರು ದೇಶಮುಖ್ ಅವರಿಂದ ಸೂಚನೆಗಳನ್ನು ತೆಗೆದುಕೊಳ್ಳಲು ಸಮಯ ಕೋರಿದರು. ಜೊತೆಗೆ ಪ್ರಕರಣದಲ್ಲಿ ದೇಶಮುಖ್ ಪರವಾಗಿ ಹಿರಿಯ ವಕೀಲರು ಹಾಜರಾಗಬಹುದು ಎಂದು ತನಗೆ ಸೂಚನೆ ನೀಡಲಾಗಿದೆ ಎಂದು ತಿಳಿಸುವ ಮುಂದೂಡಿಕೆ ಅರ್ಜಿಯನ್ನು ಸಲ್ಲಿಸಿದರು. ಇದಕ್ಕೆ ಅನುಮತಿ ನೀಡಿದ ಸಮಿತಿ, ವಿಚಾರಣೆ ಮುಂದೂಡಿದ್ದಕ್ಕಾಗಿ ರಾಜ್ಯ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಶಮುಖ್‌ ಅವರು ₹ 15,000 ದಂಡ ಪಾವತಿಸಬೇಕು ಎಂದು ಸೂಚಿಸಿತು.

Related Stories

No stories found.
Kannada Bar & Bench
kannada.barandbench.com