ಪ್ರಸಕ್ತ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ- ಎನ್‌ಐಆರ್‌ಎಫ್‌ನ ಕಾನೂನು ಶಾಲೆ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು), ಅಗ್ರಸ್ಥಾನ ಕಾಯ್ದುಕೊಂಡಿದೆ. ನಂತರದ ಸ್ಥಾನದಲ್ಲಿ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎನ್‌ಎಲ್‌ಯುಡಿ) ಮುಂದುವರೆದಿದೆ.
ಈ ಎರಡೂ ಸಂಸ್ಥೆಗಳು ತಮ್ಮ ಹಿಂದಿನ ಸಾಲಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿವೆ. ಅಚ್ಚರಿಯ ಸಂಗತಿಯೆಂದರೆ ಪುಣೆಯ ಸಿಂಬಯೋಸಿಸ್ ಕಾನೂನು ಶಾಲೆ (ಎಸ್‌ಎಲ್‌ಎಸ್) ಮೂರನೇ ಸ್ಥಾನದಲ್ಲಿದೆ. 2021ರ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎಸ್‌ಎಲ್‌ಎಸ್ ಒಂಬತ್ತನೇ ಸ್ಥಾನದಲ್ಲಿತ್ತು.ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ಕಾನೂನು ವಿವಿ ಮತ್ತು ಕೋಲ್ಕತ್ತೆಯ ಪ. ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ (ಡಬ್ಲ್ಯೂಬಿಎನ್‌ಯುಜೆಎಸ್) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ಮೊದಲ ಹತ್ತರಲ್ಲಿ ಸ್ಥಾನ ಪಡೆದ ಇತರ ರಾಷ್ಟ್ರೀಯ ಕಾನೂನು ವಿವಿಗಳೆಂದರೆ ಗಾಂಧಿನಗರದ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಜಿಎನ್‌ಎಲ್‌ಯು), ಮತ್ತು ಜೋಧ್‌ಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, (ಎನ್‌ಎಲ್‌ಯುಜೆ) ಕ್ರಮವಾಗಿ 8 ಮತ್ತು 10 ರ ಶ್ರೇಣಿಯಲ್ಲಿವೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ 7ನೇ ಸ್ಥಾನದಲ್ಲಿದೆ. ಈ ವರ್ಷದ ಟಾಪ್ ಟೆನ್ ಪಟ್ಟಿಯಲ್ಲಿ ಭುವನೇಶ್ವರದ ಶಿಕ್ಷಾ ಒ ಅನುಸಂಧಾನ್ 9ನೇ ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದೆ.
ಒಟ್ಟು 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ 12 ಮಾತ್ರ 30 ಅತ್ಯುತ್ತಮ ಕಾನೂನು ಶಾಲೆಗಳಲ್ಲಿ ಸ್ಥಾನ ಗಳಿಸಿವೆ. ಈ ವರ್ಷ 100 ಕಾನೂನು ಕಾಲೇಜುಗಳು ರ‍್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಕೆಳಗಿನ ಅಂಶಗಳನ್ನು ಆಧರಿಸಿ ಪ್ರಸಕ್ತ ಸಾಲಿನ ರ‍್ಯಾಂಕಿಂಗ್ ಪಟ್ಟಿ ತಯಾರಿಸಲಾಗಿತ್ತು.