ನಿಠಾರಿ ಸರಣಿ ಹತ್ಯೆ: ಬಡ ಕೆಲಸಗಾರನ ಮೇಲೆ ಗೂಬೆ ಕೂರಿಸಿದ ಸಿಬಿಐ, ಉ.ಪ್ರದೇಶ ಪೋಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ಛೀಮಾರಿ

ಬಂಧನ, ವಶ ಹಾಗೂ ತಪ್ಪೊಪ್ಪಿಗೆಯಂತಹ ಪ್ರಮುಖ ವಿಚಾರಗಳಲ್ಲಿ ತನಿಖೆ ನಡೆಸುವವರು ವ್ಯವಹರಿಸಿದ ರೀತಿ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ.
ನಿಠಾರಿ ಸರಣಿ ಹತ್ಯೆ: ಬಡ ಕೆಲಸಗಾರನ ಮೇಲೆ ಗೂಬೆ ಕೂರಿಸಿದ ಸಿಬಿಐ, ಉ.ಪ್ರದೇಶ ಪೋಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ಛೀಮಾರಿ
Published on

ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತಿರುವ ನೋಯ್ಡಾದ ನಿಠಾರಿ ಗ್ರಾಮದಲ್ಲಿ 2005-2006ರಲ್ಲಿ ನಡೆದಿದ್ದ  ಸರಣಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಗಾಂಭೀರ್ಯರಹಿತವಾಗಿ ಮತ್ತು ನಿರ್ಲಕ್ಷ್ಯದಿಂದ ತನಿಖೆ ನಡೆಸಿದ ಉತ್ತರ ಪ್ರದೇಶ ಪೊಲೀಸರು, ಸಿಬಿಐ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ [ಸುರೇಂದ್ರ ಕೋಲಿ ಮತ್ತಿತರರು ಹಾಗೂ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನಿಠಾರಿ ಹತ್ಯೆ ಪ್ರಕರಣದಲ್ಲಿ ಮನೆ ಕೆಲಸಗಾರ ಸುರೇಂದ್ರ ಕೋಲಿಯನ್ನು ಏಕಮಾತ್ರ ಅಪರಾಧಿ ಎಂದು ಬಿಂಬಿಸಿದ ತನಿಖಾಧಿಕಾರಿಗಳು ಅಂಗಾಂಗ ವ್ಯಾಪಾರ ಮಾಡುವ ಕುಕೃತ್ಯದ ನೈಜ ಉದ್ದೇಶವನ್ನು ಮರೆಮಾಚಿರುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ.  

ಅಂಗಾಂಗ ವ್ಯಾಪಾರ ನಡೆದಿರುವ ಸಾಧ್ಯತೆಯನ್ನು ತನಿಖೆ ಮಾಡಲು ತನಿಖಾ ಸಂಸ್ಥೆಗಳು ವಿಫಲವಾಗಿರುವುದು ಸಾರ್ವಜನಿಕ ವಿಶ್ವಾಸ ದ್ರೋಹ ಎಂದು 308 ಪುಟಗಳ ತೀರ್ಪಿನಲ್ಲಿ, ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎಸ್‌ ಎ ಎಚ್  ರಿಜ್ವಿ ಅವರಿದ್ದ ವಿಭಾಗೀಯ ಪೀಠ ನುಡಿದಿದೆ.

"ಚಿಕ್ಕ ಮಕ್ಕಳು ಮತ್ತು ಹೆಣ್ಣುಮಕ್ಕಳ ಜೀವನ್ನು ಅಮಾನವೀಯ ರೀತಿಯಲ್ಲಿ ಅಂತ್ಯಗೊಳಿಸಿದ ಹತ್ಯೆ ಗಂಭೀರ ಕಳವಳಕಾರಿ ವಿಷಯ. ಆದರೆ ಅದರಿಂದ  ಆರೋಪಿಗೆ ನ್ಯಾಯಯುತ ವಿಚಾರಣೆಯ ನಿರಾಕರಣೆಯೂ ಆಗಬಾರದು ಇಲ್ಲವೇ ಸಾಕ್ಷ್ಯಗಳ ಕೊರತೆಯಿದ್ದಾಗ ಅವರನ್ನು ಶಿಕ್ಷಿಸುವುದನ್ನು ಸಮರ್ಥಿಸಿಕೊಳ್ಳುವಂತೆಯೂ ಆಗಬಾರದು" ಎಂದು ಅದು ಹೇಳಿದೆ.

ನಿಠಾರಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಆತನ ಮನೆ ಸಹಾಯಕ ಸುರೇಂದ್ರ ಕೋಲಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ಖುಲಾಸೆಗೊಳಿಸಿದೆ.

ಸರಣಿ ಹತ್ಯೆಗೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೊಳಗಾಗಿದ್ದ ಮೊನೀಂದರ್ ಸಿಂಗ್ ಪಂಧೇರ್ ಮತ್ತು ಆತನ ಮನೆಕೆಲಸಗಾರ ಸುರೇಂದ್ರ ಕೋಲಿ ಅವರಿಗೆ ಕೆಲ ಪ್ರಕರಣಗಳಲ್ಲಿ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.   

ನಿಠಾರಿ ಕೊಲೆ ಪ್ರಕರಣಗಳು 2005- 2006ರಲ್ಲಿ ನಡೆದಿದ್ದವು. ಪುಟ್ಟ ಮಕ್ಕಳು ಸೇರಿದಂತೆ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಇವರಿಬ್ಬರ ಮೇಲಿತ್ತು. ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮೋನಿಂದರ್‌ ಸಿಂಗ್‌ ಪಂಧೇರ್‌ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು. 

ಲೈಂಗಿಕ ಶೋಷಣೆಯಲ್ಲದೆ ಅಂಗಾಂಗ ವ್ಯಾಪಾರ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ರಚಿಸಿದ್ದ ಸಮಿತಿ 2015ರಲ್ಲಿ ವರದಿ ಸಲ್ಲಿಸಿದ್ದರೂ ಅದರಂತೆ ತನಿಖೆ ನಡೆದಿದೆ ಎನ್ನಲು ಯಾವುದೇ ದಾಖಲೆಗಳಿಲ್ಲ ಎಂಬುದಾಗಿ ನ್ಯಾಯಾಲಯ ಆದೇಶದಲ್ಲಿ ಕಿಡಿಕಾರಿದೆ.

"ಅಂಗಾಂಗ ವ್ಯಾಪಾರದ ಸಂಘಟಿತ ಚಟುವಟಿಕೆ ನಡೆದಿರುವ ಸಾಧ್ಯತೆಯಂತಹ ಹೆಚ್ಚು ಗಂಭೀರ ಅಂಶಗಳನ್ನು ಪತ್ತೆಹಚ್ಚಲು ಸೂಕ್ತ ಕಾಳಜಿ ವಹಿಸದ ತನಿಖೆ, ಮನೆಯ ಬಡ ಕೆಲಸಗಾರನನ್ನು ಖಳನನ್ನಾಗಿ ಬಿಂಬಿಸುವ ಸುಲಭದ ಮಾರ್ಗ ಆರಿಸಿಕೊಂಡಿದೆ ಎಂದು ತೋರುತ್ತಿದೆ" ಎಂಬುದಾಗಿ ಪೀಠ ಟೀಕಿಸಿದೆ.

ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದ ತೀರ್ಪು ಮತ್ತು ಅವರಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ್ದ ಪೀಠವು ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

Kannada Bar & Bench
kannada.barandbench.com