ಕಾಲ್ತುಳಿತ ಪ್ರಕರಣ: ಆರ್‌ಸಿಬಿ, ಡಿಎನ್‌ಎ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂಬ ಆದೇಶ ವಿಸ್ತರಿಸಿದ ಹೈಕೋರ್ಟ್‌

ಡಿಎನ್‌ಎ ವ್ಯವಸ್ಥಾಪಕ ನಿರ್ದೇಶಕರನ್ನು ಸರ್ಕಾರ ಬಂಧಿಸುವುದಿಲ್ಲ. ಬೇರೆಯಾರಿಗಾದರೂ ರಕ್ಷಣೆ ಬೇಕೆಂದಾದರೆ ಮಧ್ಯಪ್ರವೇಶಿಕೆ ಅರ್ಜಿ ಸಲ್ಲಿಸಬಹುದು ಎಂದು ಇದೇ ವೇಳೆ ನ್ಯಾಯಾಲಯ ಹೇಳಿತು.
ಕಾಲ್ತುಳಿತ ಪ್ರಕರಣ: ಆರ್‌ಸಿಬಿ, ಡಿಎನ್‌ಎ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂಬ ಆದೇಶ ವಿಸ್ತರಿಸಿದ ಹೈಕೋರ್ಟ್‌
Published on

ಕಾಲ್ತುಳಿತ ಪ್ರಕರಣದಲ್ಲಿ ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ವಿರುದ್ಧದ ತನಿಖೆ ಮುಂದುವರಿಯಬೇಕು. ಆದರೆ, ಬಲವಂತದ ಕ್ರಮಕೈಗೊಳ್ಳಬಾರದು ಎಂಬ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಿಸ್ತರಿಸಿದೆ.

ಪ್ರಕರಣದ ಸಂಬಂಧ ತಮ್ಮ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಕಿಲ್‌ ಸೋಸಲೆ ಅವರು ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice S R Krishna Kumar
Justice S R Krishna Kumar

ಅರ್ಜಿದಾರರ ಪರ ವಕೀಲರು “ತನಿಖಾಧಿಕಾರಿಗಳು ತಮ್ಮ ಉದ್ಯೋಗಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ” ಎಂದರು.

ಸರ್ಕಾರದ ಪರ ಹೆಚ್ಚುವರಿ ವಿಶೇಷ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಅರ್ಜಿದಾರರನ್ನು ಬಂಧಿಸುವುದಿಲ್ಲ. ಆದರೆ, ಕಾನೂನಿನ ಅನ್ವಯ ನಡೆಯಲಾಗುವುದು. ತನಿಖೆಗೆ ಸಹಕರಿಸಲು ಅವರಿಗೆ ಆದೇಶಿಸಿಬೇಕು. ಅಗತ್ಯಬಿದ್ದರೆ ಅವರು ನ್ಯಾಯಾಲಯ ಮೊರೆ ಹೋಗಬಹುದು” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಡಿಎನ್‌ಎನ ೫೦೦ ಉದ್ಯೋಗಿಗಳಿದ್ದಾರೆ ಎಂದರೆ ಅವರ ಪರವಾಗಿ ಬ್ಲಾಂಕೆಟ್‌ ಆದೇಶ ಮಾಡಲಾಗದು. ಸರ್ಕಾರವು ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ತೆರನಾದ ಬಲವಂತದ ಕ್ರಮಕೈಗೊಳ್ಳುವುದಿಲ್ಲ. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ಡಿಎನ್‌ಎ ವ್ಯವಸ್ಥಾಪಕ ನಿರ್ದೇಶಕರನ್ನು ಸರ್ಕಾರ ಬಂಧಿಸುವುದಿಲ್ಲ. ಬೇರೆಯಾರಿಗಾದರೂ ರಕ್ಷಣೆ ಬೇಕೆಂದಾದರೆ ಮಧ್ಯಪ್ರವೇಶಿಕೆ ಅರ್ಜಿ ಸಲ್ಲಿಸಬಹುದು ಎಂದು ಇದೇ ವೇಳೆ ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com