ರಾಜ್ಯಾಧ್ಯಕ್ಷ ಹುದ್ದೆ, ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲ್ಲ: ಹೈಕೋರ್ಟ್‌ಗೆ ಜೆಡಿಎಸ್‌ ಮೌಖಿಕ ವಿವರಣೆ

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “ಸಿ ಎಂ ಇಬ್ರಾಹಿಂ ಅವರನ್ನು ಪುನಾ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು. ಚುನಾವಣೆಗೆ ತಡೆ ನೀಡಬೇಕು” ಎಂದು ಕೋರಿದರು.
C M Ibrahim and Karnataka HC
C M Ibrahim and Karnataka HC

ರಾಜ್ಯ ಘಟಕದ ಅಧ್ಯಕ್ಷ ಹುದ್ದೆ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಯಾವುದೇ ಚುನಾವಣೆ ನಡೆಸುವುದಿಲ್ಲ ಎಂಬ ಜೆಡಿಎಸ್‌ ಪಕ್ಷದ ಮೌಖಿಕ ಹೇಳಿಕೆಯನ್ನು ಆಧರಿಸಿ ಕರ್ನಾಟಕ ಹೈಕೋರ್ಟ್‌ ಜೆಡಿಎಸ್‌ನ ಉಚ್ಚಾಟಿತ ಅಧ್ಯಕ್ಷ ಸಿಎಂ ಇಬ್ರಾಹಿಂ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ಮುಂದೂಡಿದೆ.

ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಉಚ್ಚಾಟನೆ ಮಾಡಿರುವುದನ್ನು ಪ್ರಶ್ನಿಸಿ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್‌ ಡಿ ಕುಮಾರಸ್ವಾಮಿ ನೇಮಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ವಜಾ ಮಾಡಿದ್ದರ ವಿರುದ್ಧ ಜೆಡಿಎಸ್‌ ಉಚ್ಚಾಟಿತ ಅಧ್ಯಕ್ಷ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಪ್ರಥಮ ಮೇಲ್ಮನವಿಯನ್ನು (ಆರ್‌ಎಫ್‌ಎ) ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಜೆಡಿಎಸ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಜೆಡಿಎಸ್‌ ಅಧ್ಯಕ್ಷ ಹುದ್ದೆ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಯಾವುದೇ ಚುನಾವಣೆ ನಡೆಸುವುದಿಲ್ಲ” ಎಂದು ಮೌಖಿಕವಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.

Also Read
ಜೆಡಿಎಸ್‌ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ಆಕ್ಷೇಪಿಸಿ ಇಬ್ರಾಹಿಂ ಮೇಲ್ಮನವಿ

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “ಸಿ ಎಂ ಇಬ್ರಾಹಿಂ ಅವರನ್ನು ಪುನಾ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು. ಚುನಾವಣೆಗೆ ತಡೆ ನೀಡಬೇಕು” ಎಂದು ಕೋರಿದರು.

ಆಗ ಪೀಠವು “ಈ ಹಂತದಲ್ಲಿ ಸಿ ಎಂ ಇಬ್ರಾಹಿಂ ಅವರನ್ನು ಅಧ್ಯಕ್ಷರ ಹುದ್ದೆಗೆ ಮರು ನೇಮಕ ಮಾಡಲಾಗದು” ಎಂದಿತು. ಅಂತಿಮವಾಗಿ ಹಿರಿಯ ವಕೀಲ ಉದಯ್‌ ಹೊಳ್ಳ ಅವರ ಮೌಖಿಕ ಅಭಿಪ್ರಾಯ ಆಧರಿಸಿ ವಿಚಾರಣೆಯನ್ನು ಜೂನ್‌ 6ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com