'ಮಾಂಗಲ್ಯ ಇಲ್ಲದಿದ್ದರೆ ನಿಮ್ಮ ಪತಿ ನಿಮ್ಮೆಡೆಗೆ ಆಸಕ್ತಿ ತೋರುವುದು ಹೇಗೆ?' ಮಧ್ಯಸ್ಥಿಕೆ ವೇಳೆ ನ್ಯಾಯಾಧೀಶರ ಪ್ರಶ್ನೆ
ವ್ಯಾಜ್ಯ ಪರಿಹಾರ ಸಾಧನವಾದ ಮಧ್ಯಸ್ಥಿಕೆ ಎಂಬುದು ದಾವೆ ಹೂಡುವವರಿಗೆ ಹೇಗೆ ಸವಾಲಿನ ಸಂಗತಿಯಾಗುತ್ತದೆ ಮತ್ತು ತರಬೇತಿ ಪಡೆದ ಪರಿಣತ ಮಧ್ಯಸ್ಥಿಕೆದಾರರು ಏಕೆ ಇಂತಹ ಪ್ರಕರಣಗಳನ್ನು ನಿರ್ವಹಿಸಬೇಕು ಎಂಬುದನ್ನು ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆಳೆಸಿರುವ ಪೋಸ್ಟ್ ಒಂದು ಹೇಳುತ್ತಿದೆ.
ಪರಿತ್ಯಕ್ತ ಪತಿ-ಪತ್ನಿಯ ನಡುವಿನ ಸಂಧಾನದ ಪ್ರಕರಣ ನಿರ್ವಹಿಸುತ್ತಿದ್ದ ಪುಣೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಮಂಗಳಸೂತ್ರ ಅಥವಾ ಬಿಂದಿ ಧರಿಸದೆ ಇದ್ದಕ್ಕಾಗಿ ಮಹಿಳೆಯನ್ನು ಪ್ರಶ್ನಿಸುವ ಹೇಳಿಕೆ ನೀಡಿದ್ದಾರೆ ಎಂಬುದಾಗಿ ವಕೀಲ ಅಂಕುರ್ ಆರ್ ಜಹಗೀರ್‌ದಾರ್ ಎಂಬುವವರು ಲಿಂಕ್ಡ್‌ಇನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾರೆ.
"ನೀವು ಮಂಗಳಸೂತ್ರ ಹಾಗೂ ಬಿಂದಿ ಧರಿಸಿಲ್ಲ ಎನ್ನುವುದು ಕಾಣುತ್ತಿದೆ. ನೀವು ವಿವಾಹಿತ ಮಹಿಳೆಯಂತೆ ವರ್ತಿಸದಿದ್ದರೆ, ನಿಮ್ಮ ಪತಿ ನಿಮ್ಮ ಬಗ್ಗೆ ಆಸಕ್ತಿ ತೋರಿಸುವುದಾದರೂ ಹೇಗೆ?" ಎಂದು ನ್ಯಾಯಾಧೀಶರು ಕೇಳಿದ್ದಾರೆಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪರಿತ್ಯಕ್ತ ದಂಪತಿ ಕೌಟುಂಬಿಕ ಹಿಂಸಾಚಾರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆಗಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.
ದಂಪತಿ ನಡುವಿನ ಜೀವನಾಂಶ ವ್ಯಾಜ್ಯಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ ನಡೆದ ಘಟನೆಗಳನ್ನು ಜಹಗೀರ್‌ದಾರ್ ಅವರು ಹಂಚಿಕೊಂಡಿರುವುದು ಹೀಗೆ:
"ಒಬ್ಬ ಮಹಿಳೆ ಚೆನ್ನಾಗಿ ಸಂಪಾದಿಸುತ್ತಿದ್ದರೆ, ಅವಳು ಸದಾ ತನಗಿಂತ ಹೆಚ್ಚು ಸಂಪಾದಿಸುವ ಗಂಡನನ್ನು ಹುಡುಕುತ್ತಾಳೆ ಮತ್ತು ಕಡಿಮೆ ಸಂಪಾದಿಸುವವನನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಆದರೆ, ಚೆನ್ನಾಗಿ ಸಂಪಾದಿಸುವ ಪುರುಷ ಮದುವೆಯಾಗಲು ಬಯಸಿದರೆ, ಅವನು ತನ್ನ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸದಾಕೆಯನ್ನೂ ಮದುವೆಯಾಗಬಹುದು. ಪುರುಷರು ಎಷ್ಟು ಹೊಂದಿಕೊಳ್ಳುತ್ತಾರೆ ಎಂಬುದನ್ನು ನೋಡಿ. ನೀವು ಸ್ವಲ್ಪ ಮೃದುವಾಗಿಯೂ ವರ್ತಿಸಬೇಕು. ಅಷ್ಟು ಕಠೋರವಾಗಿರಬೇಡಿ”.
ಬಾರ್ ಅಂಡ್ ಬೆಂಚ್ ಜೊತೆ ಮಾತನಾಡಿದ ಜಹಗೀರ್‌ದಾರ್ ಅವರು ಎರಡನೇ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಎತ್ತಿದ ಪ್ರಶ್ನೆಗಳಿಂದಾಗಿ ಮಹಿಳೆ ಕುಪಿತರಾದರು ಎಂದಿದ್ದಾರೆ 2023ರಲ್ಲಿ ಕಕ್ಷಿದಾರರ ನಡುವೆ ಮಧ್ಯಸ್ಥಿಕೆ ವಿಫಲವಾಗಲು ದೊಡ್ಡ ಕಾರಣವೆಂದರೆ ಮಧ್ಯಸ್ಥಿಕೆ ನಡೆಸುತ್ತಿದ್ದ ನ್ಯಾಯಾಧೀಶರು ಮಹಿಳೆಯ ಬಗ್ಗೆ ಅತ್ಯಂತ ಅಸಭ್ಯ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದಿದ್ದಾರೆ. ನ್ಯಾಯಾಧೀಶರು ಸೃಷ್ಟಿಸಿದ ಅಂತಹ ಸಂದರ್ಭದಿಂದಾಗಿ ಕಕ್ಷಿದಾರರು ಕಣ್ಣೀರು ಹಾಕಿದರು ಎಂದಿದ್ದಾರೆ.
ಇಂಥದ್ದೆಲ್ಲಾ ನಡೆದಾಗ ದಾವೆದಾರರು ಮಧ್ಯಸ್ಥಿಕೆಯಲ್ಲಿ ನಂಬಿಕೆ ಕಳೆದುಕೊಂಡು ಪ್ರಕರಣ ಇತ್ಯರ್ಥವಾಗುವುದನ್ನು ಜಟಿಲಗೊಳಿಸಿಕೊಳ್ಳುತ್ತಾರೆ. ಮಧ್ಯಸ್ಥಿಕೆದಾರರ ತಪ್ಪಿನಿಂದಾಗಿ ಪರಿಹರಿಸಬಹುದಾದಂತಹ ಪ್ರಕರಣಗಳೂ ಬಾಕಿ ಉಳಿದು ನ್ಯಾಯ ವ್ಯವಸ್ಥೆಯ ಹೊರೆ ಹೆಚ್ಚುತ್ತದೆ ಎಂದು ಜಹಗೀರ್‌ದಾರ್ ಹೇಳಿದ್ದಾರೆ.