ಕೊರೊನಾ ಆರ್ಥಿಕತೆ ಬಗ್ಗೆ ತಲೆಕೆಡಿಸಿಕೊಳ್ಳದು: ಸಿನಿಮಾ ಮಂದಿರಗಳ ಸೀಟು ಮಿತಿ ಹೆಚ್ಚಳಕ್ಕೆ ಮಧುರೈ ಹೈಕೋರ್ಟ್ ನಿರಾಕರಣೆ

ತಮಿಳುನಾಡು ಸರ್ಕಾರವು ಸಿನಿಮಾ ಮಂದಿರಗಳಲ್ಲಿ ಜ.13ರಿಂದ ಶೇ. 100ರಷ್ಟು ಸೀಟು ಭರ್ತಿ ಮಾಡಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಹೈಕೋರ್ಟ್‌ ಜ.11ರ ವರೆಗೆ ಶೇ. 50ರ ಮಿತಿಯಲ್ಲಿ ಸಿನಿಮಾ ಪ್ರದರ್ಶಿಸುವಂತೆ ಸೂಚಿಸಿದೆ.
Movie Theatre
Movie Theatre

ತಮಿಳುನಾಡು ಸರ್ಕಾರವು ಚಲನಚಿತ್ರ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ. 100ರಷ್ಟು ಸೀಟು ಭರ್ತಿ ಮಾಡಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆ ಕೈಗೆತ್ತಿಕೊಳ್ಳುವವರೆಗೆ ಅಂದರೆ ಜನವರಿ 11ರ ವರೆಗೆ ಶೇ. 50ಕ್ಕಿಂತ ಹೆಚ್ಚು ಆಸನಗಳು ಭರ್ತಿ ಮಾಡಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮದ್ರಾಸ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ತಮಿಳುನಾಡು ಸರ್ಕಾರವು ಜನವರಿ 4ರಂದು ಆದೇಶ ಹೊರಡಿಸಿದ್ದು, ಅದು ಜನವರಿ 13ರಿಂದ ಜಾರಿಗೆ ಬರಲಿದೆ ಎಂದು ಪೀಠಕ್ಕೆ ತಿಳಿಸಲಾಗಿದೆ. ನ್ಯಾಯಾಲಯವು ಶುಕ್ರವಾರ ತಾನು ಹೊರಡಿಸಿದ ಆದೇಶದಲ್ಲಿ ಸ್ಪಷ್ಟೀಕರಣವನ್ನು ದಾಖಲಿಸಿದೆ.

“ನಾವು ಸಾಂಕ್ರಾಮಿಕತೆಯ ವಿರುದ್ಧ ಹೋರಾಡುತ್ತಿದ್ದು, ಅದು ಅರ್ಥಿಕ ವಿಚಾರಗಳ ಮೇಲಿನ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಆದೇಶ ಹೊರಡಿಸುವಾಗ ಪೀಠ ಹೇಳಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಮನವಿದಾರರ ದೂರಿನಲ್ಲಿ ತಿರುಳಿದೆ ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎಸ್‌ ಅನಂತಿ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ.

ಸಮಸ್ಯೆಯನ್ನು ಪರಿಗಣಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಂವಹನ ನಿರೀಕ್ಷಿಸುತ್ತಿರುವುದಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಶ್ರೀಚರಣ್‌ ರಂಗರಾಜನ್‌ ಪೀಠಕ್ಕೆ ತಿಳಿಸಿದ್ದು, ಹೆಚ್ಚಿನ ಸಲಹೆ-ಸೂಚನೆ ಪಡೆಯಲು ಕಾಲಾವಕಾಶದ ಅಗತ್ಯವಿದೆ ಎಂದು ಎಎಜಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣವನ್ನು ಜನವರಿ 11ಕ್ಕೆ ಮುಂದ.

Also Read
ಅಂಚೆ ಮತದಾನ: ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್‌ 60 (ಸಿ) ಸಿಂಧುತ್ವ ಪ್ರಶ್ನೆ

ಮುಂದಿನ ವಿಚಾರಣೆಯ ವೇಳೆಗೆ ರಾಜ್ಯ ಸರ್ಕಾರವು ಪ್ರಕರಣವನ್ನು ಸೂಕ್ತ ದೃಷ್ಟಿಕೋನದಿಂದ ಮರುಪರಿಶೀಲಿಸಲಿದೆ ಎಂಬ ಭರವಸೆ ಮತ್ತು ನಂಬಿಕೆ ಹೊಂದಿರುವುದಾಗಿ ಪೀಠ ಹೇಳಿದೆ. ಇದರ ಜೊತೆಗೆ ಪ್ರಕರಣವನ್ನು ಸಿನಿಮಾ ಮಂದಿರಗಳ ಮಾಲೀಕರ ದೃಷ್ಟಿಯಿಂದಲೂ ಗಮನಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸಲಹೆ ನೀಡಿದೆ. ಇದೇ ವೇಳೆ, ಸಿನಿಮಾ ವೀಕ್ಷಣೆಗೆ ಸೀಟುಗಳನ್ನು ಹೆಚ್ಚಿಸುವ ಬದಲು ಸಿನಿಮಾ ಪ್ರದರ್ಶನಗಳನ್ನು ಹೆಚ್ಚಿಸುವ ಸಾಧ್ಯತೆಯ ಕುರಿತಾಗಿಯೂ ಪೀಠ ಸೂಚಿಸಿದೆ. ಈ ಅಂಶವೂ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಎಎಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನ ಪ್ರಧಾನ ಪೀಠದಲ್ಲೂ ಪಿಐಎಲ್‌ ಸಲ್ಲಿಸಲಾಗಿತ್ತು. ಆದರೆ, ಪ್ರಕರಣ ವಿಚಾರಣೆಗೆ ಬರುವ ವೇಳೆಗಾಗಲೇ ಮಧುರೈ ಪೀಠದಿಂದ ಆದೇಶ ಹೊರಬಿದ್ದಿರುವ ಬಗೆಗಿನ ಮಾಹಿತಿಯನ್ನು ಪ್ರಧಾನ ಪೀಠಕ್ಕೆ ನೀಡಲಾಯಿತು. ಇದನ್ನು ಗಮನಿಸಿದ ಪ್ರಧಾನ ಪೀಠವು ಈ ಕುರಿತ ಎಲ್ಲ ಅರ್ಜಿಗಳನ್ನೂ ಮಧುರೈ ಪೀಠವೇ ಆಲಿಸುವಂತೆ ನಿರ್ದೇಶಿಸಿತು.

Related Stories

No stories found.
Kannada Bar & Bench
kannada.barandbench.com