ಅಂಚೆಯ ಮೂಲಕ ಮತದಾನ ಮಾಡಲು ಮತದಾರರ ವರ್ಗಗಳನ್ನು ನಿರ್ಧರಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡುವ ಪ್ರಜಾ ಪ್ರತಿನಿಧಿ ಕಾಯಿದೆ-1951ರ ಸೆಕ್ಷನ್ 60(ಸಿ)ಯ ಸಾಂವಿಧಾನಿಕ ಸಿಂಧುತ್ವವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಯಾವುದೇ ಮಾರ್ಗದರ್ಶಿ ತತ್ವಗಳಿಲ್ಲದೇ ಅಂಚೆಯ ಮೂಲಕ ಮತದಾನ ಮಾಡಲು ನಿರ್ದಿಷ್ಟ ವರ್ಗದ ಜನರನ್ನು ಮನಸೋ ಇಚ್ಛೆ ಸೇರ್ಪಡೆಗೊಳಿಸುವ ಅಧಿಕಾರವು ಅಧಿಕಾರಿ ವರ್ಗಕ್ಕೆ ಸೆಕ್ಷನ್ 60(ಸಿ)ಯಿಂದ ದೊರೆಯುತ್ತದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿರುವ ಮನವಿಯಲ್ಲಿ ತಕರಾರರು ಎತ್ತಲಾಗಿದೆ.
ಚುನಾವಣಾ ವೇಳಾಪಟ್ಟಿ ಆಧರಿಸಿ ಕಾಲಕ್ಕೆ ತಕ್ಕಂತೆ ನಿರ್ದಿಷ್ಟ ವರ್ಗಗಳ ಜನರನ್ನು ಅಂಚೆ ಮತದಾನ ವಿಭಾಗಕ್ಕೆ ಸೇರ್ಪಡೆಗೊಳಿಸಲು ಆಕ್ಷೇಪಿತ ನಿಬಂಧನೆಯು ಅವಕಾಶ ಮಾಡಿಕೊಡುತ್ತದೆ ಎಂದು ಅರ್ಜಿದಾರರು ತಗಾದೆ ಎತ್ತಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠವು ಗುರುವಾರ ಡಿಎಂಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು, ಮೊದಲು ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಾದ ಆಲಿಸಬೇಕು ಎಂದಿದೆ. ಅಲ್ಲದೇ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು, 4 ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಹಿರಿಯ ವಕೀಲ ಪಿ ವಿಲ್ಸನ್ ಅವರು ಡಿಎಂಕೆ ಪರ ವಾದಿಸಿದರು.
ಸೆಕ್ಷನ್ 60(ಸಿ) ಪ್ರಶ್ನೆ ಮಾಡುವುದರ ಜೊತೆಗೆ ಚುನಾವಣಾ ನಿರ್ವಹಣಾ ನಿಯಮಗಳು-1961ರ 27ಎ ರಿಂದ 27ಎಲ್ ವರೆಗೆ ಹಾಗೂ ಚುನಾವಣಾ ನಿರ್ವಹಣಾ (ತಿದ್ದುಪಡಿ) ನಿಯಮಗಳು-2019 ಮತ್ತು ಚುನಾವಣಾ ನಿರ್ವಹಣಾ (ತಿದ್ದುಪಡಿ) ನಿಯಮಗಳು-2020 ಅನ್ನೂ ಪ್ರಶ್ನಿಸಲಾಗಿದೆ. ಈ ನಿಯಮಗಳ ಅಡಿ ಸರ್ಕಾರವು "ಅಗತ್ಯ ಸೇವೆಗಳಲ್ಲಿ" ಕೆಲಸ ಮಾಡುವ ವ್ಯಕ್ತಿಗಳು, ಹಿರಿಯ ನಾಗರಿಕರು ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ಸೇರಿಸಲು "ಗೈರುಹಾಜರಿ ಮತದಾರರನ್ನು" ವ್ಯಾಖ್ಯಾನಿಸಿದೆ.
ಈ ವರ್ಗಗಳ ಜನರನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಇದರಿಂದ ನಕಲಿ ಮತದಾರರ ಸಂಖ್ಯೆ ಹೆಚ್ಚಳವಾಗಬಹುದು ಅಥವಾ ಮತದಾರರನ್ನು ಪ್ರಭಾವಿಸುವ ಸಾಧ್ಯತೆ ಹೆಚ್ಚಿದೆ. ಇದು ಪಾರದರ್ಶಕ ಚುನಾವಣೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿದೆ. ಅಂಚೆಯ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಮತದಾರರನ್ನು ಪ್ರಭಾವಿಸುವ ಹಾದಿಗೆ ಇಸಿಐ ನಾಂದಿ ಹಾಡಲಿದೆ ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿದೆ.
“ತಿದ್ದುಪಡಿಗಳಿಂದ ಅಧಿಕಾರದಲ್ಲಿರುವ ಪಕ್ಷ ಮತ್ತು ಅಭ್ಯರ್ಥಿಗಳಿಗೆ ಅನುಕೂಲವಾಗಲಿದ್ದು, ಇದು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಪ್ರಜಾಪ್ರಭುತ್ವದ ಅಡಿಗಲ್ಲು ನಾಶವಾಗಲಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಗೈರುಹಾಜರಿ ಮತದಾರರ ಪರಿಕಲ್ಪನೆಯು ನಕಲಿ ಮತದಾರರನ್ನು ಸೃಷ್ಟಿಸಲಿದ್ದು, ಸರ್ಕಾರಿ ಯಂತ್ರದ ಮೂಲಕ ಮತದಾರರನ್ನು ಪ್ರಭಾವಿಸುವ ತಂತ್ರವಾಗಲಿದೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಮಾನ ಅವಕಾಶ ಕಲ್ಪಿಸುವುದಿಲ್ಲ. ಆದ್ದರಿಂದ ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಪೂರಕವಾಗಿಲ್ಲ.
ಚುನಾವಣೆಯ ದಿನ ನಿರ್ದಿಷ್ಟ ಮತದಾನದ ಬೂತ್‌ಗಳಲ್ಲಿ ಮತದಾನ ಮಾಡಲು ಸಂಸತ್ತು 1951ರ ಕಾಯಿದೆಯ ಸೆಕ್ಷನ್ 60 (ಎ) (ಬಿ) ಮತ್ತು (ಡಿ) ಅಡಿ ಶಾಸನಬದ್ಧವಾಗಿ ಮತದಾರರ ವರ್ಗವನ್ನು ಗುರುತಿಸಿದ್ದು, ಅಂಚೆಯ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಹೊರರಾಜ್ಯಗಳಲ್ಲಿರುವ ಭದ್ರತಾ ಪಡೆ ಸಿಬ್ಬಂದಿ, ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ ಸರ್ಕಾರದ ಸಿಬ್ಬಂದಿ, ಗೃಹ ಬಂಧನಕ್ಕೆ ಒಳಗಾದವರು ಇತ್ಯಾದಿ ಮಂದಿ ಸೇರಿದ್ದಾರೆ.
ಇತರೆ ವಿನಾಯಿತಿಗಳಿಗೆ ಹೋಲಿಕೆ ಮಾಡಿದರೆ ಸೆಕ್ಷನ್ 60 (ಸಿ)ಯು ಪಾರದರ್ಶಕ ಮತದಾನ ನಿಯಮಕ್ಕೆ ವಿರುದ್ಧವಾಗಿದೆ.
ಆಕ್ಷೇಪಿತ ನಿಬಂಧನೆಗೆ ಅಪಾರ ಮತ್ತು ಅನಿರ್ದೇಶಿತ ಅಧಿಕಾರ ದೊರೆಯಲಿದ್ದು, ಇದರಿಂದ ಗೈರು ಹಾಜರಾತಿ ಮತದಾರರು ಎಂಬ ವರ್ಗದಡಿ ಅಪಾರ ಸಂಖ್ಯೆಯ ಮತದಾರರು ಸೃಷ್ಟಿಯಾಗುವ ಸಾಧ್ಯತೆ ಇದೆ.
ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಅಗತ್ಯ ಸೇವೆಗಳು ಎಂಬ ವರ್ಗದಡಿ 15 ವಿಭಿನ್ನ ವಿಭಾಗಗಳನ್ನು ಗುರುತಿಸಲಾಗಿತ್ತು. ಈ ಆಕ್ಷೇಪಾರ್ಹ ನಿಬಂಧನೆಯು ಚುನಾವಣಾ ವೇಳಾಪಟ್ಟಿ ಆಧರಿಸಿ ಕಾಲಕಾಲಕ್ಕೆ ವಿವಿಧ ವರ್ಗಗಳ ಜನರನ್ನು ಸೇರಿಸಲು ಅವಕಾಶ ಮಾಡಿಕೊಡುತ್ತದೆ. ಇದು ಪಾರದರ್ಶಕ ಚುನಾವಣೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅರ್ಜಿದಾರರು ತಕರಾರು ಎತ್ತಿದ್ದಾರೆ.
ಚುನಾವಣಾ ಪಟ್ಟಿಯ ದತ್ತಾಂಶದಲ್ಲಿ ಅಂಗವಿಕಲ ವ್ಯಕ್ತಿ ಎಂದು ವ್ಯಾಖ್ಯಾನಿಸಲಾಗಿದೆ. “ಅಂಗವಿಕಲ ವ್ಯಕ್ತಿ” ಎಂದರೆ ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಚುನಾವಣೆಯ ಪಟ್ಟಿ ತಯಾರಿಸುವಾಗ ಇದನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಸಣ್ಣ-ಪುಟ್ಟ ತೊಂದರೆ ಅಥವಾ ದೌರ್ಬಲ್ಯಗಳನ್ನು ಹೊಂದಿರುವವರನ್ನು “ಅಂಗವಿಕಲ ವ್ಯಕ್ತಿ” ಎಂದು ಗುರುತಿಸುವ ಸಾಧ್ಯತೆ ಇರುತ್ತದೆ.
ವ್ಯಕ್ತಿಯು “ಹಿರಿಯ ನಾಗರಿಕ” ಎಂದು ತಿಳಿಯಲು ವ್ಯಕ್ತಿಯ ವಯಸ್ಸನ್ನು ನಿರ್ಧರಿಸಲು ಯಾವುದೇ ಅಂಶಗಳನ್ನು ಸೂಚಿಸಲಾಗಿಲ್ಲ. ಅಂಚೆ ಮತದಾನದ ಅವಕಾಶ ಪಡೆಯಲು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಬಹುದು. 2020ರ ತಿದ್ದುಪಡಿ ಕಾಯಿದೆ ಅಡಿ ಹಿರಿಯ ನಾಗರಿಕರ ವಯೋಮಾನವನ್ನು 80ರಿಂದ 65 ವರ್ಷಕ್ಕೆ ಇಳಿಸಲಾಗಿದೆ. ಶೇ. 15ರಷ್ಟು ಮತದಾರರನ್ನು ಹಿರಿಯ ನಾಗರಿಕ ವಿಭಾಗಕ್ಕೆ ಸೇರಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದ್ದು, ಆಡಳಿತ ಪಕ್ಷದ ನೆರವಿನಿಂದ ದೊಡ್ಡ ಪ್ರಮಾಣದಲ್ಲಿ ನಕಲಿ ಮತಗಳ ಸೃಷ್ಟಿಗೆ ನಾಂದಿಯಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.