
ತ೬೭೭೭೭ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ಮರುಪರಿಶೀಲಿಸುವ ಅಥವಾ ತೆಗೆದುಹಾಕುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ. ಈ ಪದಗಳನ್ನು ಬದಲಿಸಲು ಯಾವುದೇ ಔಪಚಾರಿಕ ಪ್ರಕ್ರಿಯೆ ಪ್ರಾರಂಭಿಸಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಸಂವಿಧಾನದ ಪೀಠಿಕೆಯಿಂದ "ಸಮಾಜವಾದ" ಮತ್ತು "ಜಾತ್ಯತೀತತೆ" ಪದಗಳನ್ನು ಮರುಪರಿಶೀಲಿಸುವ ಅಥವಾ ತೆಗೆದುಹಾಕುವ ಯಾವುದೇ ಯೋಜನೆ ಅಥವಾ ಉದ್ದೇಶವಿಲ್ಲ ಎಂಬುದು ಸರ್ಕಾರದ ಅಧಿಕೃತ ನಿಲುವು. ಪೀಠಿಕೆಗೆ ತಿದ್ದುಪಡಿಗಳ ಕುರಿತು ಸಂಪೂರ್ಣ ಚರ್ಚೆ ಮತ್ತು ದೊಡ್ಡಮಟ್ಟದ ಒಮ್ಮತದ ಅಗತ್ಯವಿರುತ್ತದೆ. ಆದರೆ ಇಲ್ಲಿಯವರೆಗೆ ಈ ಪದಗಳನ್ನು ಬದಲಿಸಲು ತಾನು ಯಾವುದೇ ಔಪಚಾರಿಕ ಪ್ರಕ್ರಿಯೆ ಪ್ರಾರಂಭಿಸಿಲ್ಲ ಎಂದು ಸರ್ಕಾರ ವಿವರಿಸಿದೆ.
ಸಮಾಜವಾದಿ ಪಕ್ಷದ (ಎಸ್‌ಪಿ) ರಾಜ್ಯಸಭಾ ಸದಸ್ಯ ರಾಮ್‌ಜಿ ಲಾಲ್ ಸುಮನ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ.
ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದ ಮತ್ತು ಜಾತ್ಯತೀತತೆ ಎಂಬ ಪದಗಳ ಬಳಕೆಯನ್ನು ಸರ್ಕಾರ ಮರುಪರಿಶೀಲಿಸಲು ಮುಂದಾಗುತ್ತಿದೆ ಎಂಬುದು ಸತ್ಯವೇ? ಈ ನಿಟ್ಟಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಪೂರಕ ಸನ್ನಿವೇಶ ರೂಪಿಸುತ್ತಿದ್ದಾರೆಯೇ? ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದ ಮತ್ತು ಜಾತ್ಯತೀತತೆ ಎಂಬ ಪದಗಳ ಬಳಕೆಯ ಮರುಪರಿಶೀಲನೆಯ ಬಗ್ಗೆ ಸರ್ಕಾರದ ನಿಲುವು ಎಂಥದ್ದು ಎಂಬ ಮೂರು ಪ್ರಶ್ನೆಗಳನ್ನು ಅವರು ಕೇಳಿದ್ದರು.
ಕೆಲವು ಸಾರ್ವಜನಿಕ ಅಥವಾ ರಾಜಕೀಯ ವಲಯಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿರಬಹುದಾದರೂ ಸರ್ಕಾರ ಯಾವುದೇ ಔಪಚಾರಿಕ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಆ ಬಗೆಯ ಚರ್ಚೆ ಸರ್ಕಾರದ ಅಧಿಕೃತ ನಿಲುವಲ್ಲ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಸ್ಪಷ್ಟಪಡಿಸಿದೆ.
ಇದಲ್ಲದೆ ಪೀಠಿಕೆಯನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಇರುವ ಅಧಿಕಾರವನ್ನು ಎತ್ತಿಹಿಡಿದು ಡಾ. ಬಲರಾಮ್ ಸಿಂಗ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕೂಡ ಅದು ಉಲ್ಲೇಖಿಸಿದೆ.
"ನವೆಂಬರ್ 2024 ರಲ್ಲಿ, ಭಾರತದ ಸುಪ್ರೀಂ ಕೋರ್ಟ್ ಡಾ. ಬಲರಾಮ್ ಸಿಂಗ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವು ಪೀಠಿಕೆಗೂ ಅನ್ವಯಿಸುತ್ತದೆ ಎಂದು ಎತ್ತಿಹಿಡಿದು 1976 ರ ತಿದ್ದುಪಡಿಯನ್ನು (42 ನೇ ಸಾಂವಿಧಾನಿಕ ತಿದ್ದುಪಡಿ) ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿತ್ತು. ಭಾರತೀಯ ಸಂದರ್ಭದಲ್ಲಿ"ಸಮಾಜವಾದ" ಎನ್ನುವುದು ಕಲ್ಯಾಣ ರಾಜ್ಯವನ್ನು ಸೂಚಿಸುತ್ತದೆ ಹಾಗೂ ಖಾಸಗಿ ವಲಯದ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ, ಅಂತೆಯೇ ಜಾತ್ಯತೀತತೆ ಸಂವಿಧಾನದ ಮೂಲಭೂತ ಅಂಶವಾಗಿದೆ ಎಂದು ನ್ಯಾಯಾಲಯ ಹೇಳಿತ್ತು” ಎಂಬುದಾಗಿ ಸರ್ಕಾರ ವಿವರಿಸಿದೆ.
ಸಂವಿಧಾನದ ಮೂಲ ಪೀಠಿಕೆಯಲ್ಲಿ 'ಸಮಾಜವಾದಿ' ಮತ್ತು 'ಜಾತ್ಯತೀತ' ಎಂಬ ಪದಗಳು ಇರಲಿಲ್ಲ. 1976ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡುವ ಮೂಲಕ ಅವುಗಳನ್ನು ಸೇರಿಸಲಾಗಿತ್ತು.
[ಸರ್ಕಾರದ ಉತ್ತರದ ಪ್ರತಿ]