ನ್ಯಾಯಮೂರ್ತಿಯಾಗಿ 23 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಎಂದಿಗೂ ಕಾರ್ಯಾಂಗದಿಂದ ಒತ್ತಡ ಎದುರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಇಂಡಿಯಾ ಟುಡೆ ಆಂಗ್ಲ ನಿಯತಕಾಲಿಕದ ಎರಡು ದಿನಗಳ ಕಾರ್ಯಕ್ರಮ ಇಂಡಿಯಾ ಟುಡೇ ಕಾನ್ಕ್ಲೇವ್ - 2023ರ ಅಂತಿಮ ದಿನವಾದ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.
ಸಿಜೆಐ ಅವರ ಮಾತಿನ ಪ್ರಮುಖಾಂಶಗಳು
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನನ್ನ 23 ವರ್ಷಗಳ ವೃತ್ತಿ ಜೀವನದಲ್ಲಿ ಯಾರೂ ಹೀಗೆಯೇ ತೀರ್ಪು ನೀಡಬೇಕು ಎಂದು ಹೇಳಲಿಲ್ಲ.
ಕಾರ್ಯಾಂಗದಿಂದ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆದರೆ ಸರಿಯಾದ ಪರಿಹಾರ ಒದಗಿಸುವುದಕ್ಕಾಗಿ ಆತ್ಮಸಾಕ್ಷಿ ಅಥವಾ ಮನಸ್ಸಿನ ಮೇಲೆ ಒತ್ತಡವಿರುವುದು ಹೌದು.
ಒತ್ತಡದ ಪ್ರಶ್ನೆಯೇ ಉದ್ಭವಿಸುವುದಿಲ್ಲ; ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ತೀರ್ಪನ್ನೇ ನೋಡಿ… ಅತಿದೊಡ್ಡ ದಾವೆದಾರ ಸರ್ಕಾರವೇ ಆಗಿದ್ದು ಅಪರಾಧ, ಉದ್ಯೋಗ, ವಿಮೆ ಮುಂತಾದ ದೊಡ್ಡ ಸಂಖ್ಯೆಯ ಸಮಸ್ಯೆಗಳಲ್ಲಿ ಸರ್ಕಾರವನ್ನು ಗುರಿಯಾಗಿಸಿ ತೀರ್ಪು ನೀಡಿದ್ದೇವೆ.
ನಾವು ಸಾರ್ವಜನಿಕ ಸಂಸ್ಥೆಗಳ ಬಗ್ಗೆ ಅಪನಂಬಿಕೆಯನ್ನು ಹೊಂದಿರುವ ಯುಗದಲ್ಲಿ ಬದುಕುತ್ತಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಹೊಣೆಗಾರಿಕೆ ಇರಬೇಕು ಎಂದು ನ್ಯಾಯಾಂಗ ಸರ್ಕಾರಕ್ಕೆ ನಿರಂತರವಾಗಿ ಹೇಳುತ್ತ ಬಂದಿದೆ.
(ಸಲಿಂಗ ಮನೋಧರ್ಮದ ನ್ಯಾಯಮೂರ್ತಿಯೊಬ್ಬರ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿದ ಕುರಿತಂತೆ ಕಾನೂನು ಸಚಿವ ಕಿರೆನ್ ರಿಜಿಜು ಅವರು ಗುಪ್ತಚರದಳದ ವರದಿ ಬಗ್ಗೆ ಆಕ್ಷೇಪಣೆ ಇದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸುತ್ತಾ) ಅವರಿಗೊಂದು ಗ್ರಹಿಕೆ ಇದೆ ನನಗೊಂದು ಗ್ರಹಿಕೆ ಇದೆ ನಾನು ಅವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಆದರೆ ಅದಕ್ಕೂ ಮಿಗಿಲಾಗಿ ನಾವು ಸಾಂವಿಧಾನಿಕ ರಾಜಧರ್ಮವನ್ನು ಪಾಲಿಸುತ್ತೇವೆ. ನಮ್ಮಲ್ಲಿ ಪಾರದರ್ಶಕತೆ ಇಲ್ಲ ಎಂಬ ಟೀಕೆ ಬಂದ ಹಿನ್ನೆಲೆಯಲ್ಲಿ ನಮ್ಮ ನಿರ್ಣಯಗಳನ್ನು ಬಹಿರಂಗವಾಗಿ ಪ್ರಕಟಿಸಿದೆವು.
ನ್ಯಾಯಮೂರ್ತಿ ಅಭ್ಯರ್ಥಿಯಾಗಿದ್ದ ವಕೀಲ ಸೌರಭ್ ಕಿರ್ಪಾಲ್ ಅವರ ಲೈಂಗಿಕ ಮನೋಧರ್ಮ ಈಗಾಗಲೇ ಸಾರ್ವಜನಿಕವಾಗಿ ತಿಳಿದಿತ್ತು. ಇದು ಯಾರೊಬ್ಬರ ಜೀವಕ್ಕೆ ಅಪಾಯ ತರುವಂತಹ ಪ್ರಕರಣವಾಗಿರಲಿಲ್ಲ. ಈ ಪ್ರಕರಣದಲ್ಲಿ ಗುಪ್ತಚರ ದಳದ ವರದಿ ಅವರನ್ನು ಬಹಿರಂಗವಾಗಿ ಸಲಿಂಗ ಮನೋಧರ್ಮದವರು ಎಂದು ಹೇಳಿದ್ದು ಅದು ಮಾಧ್ಯಮಗಳಿಗೆ ತಿಳಿದಿದೆ.
ಅಭ್ಯರ್ಥಿಯ ಲೈಂಗಿಕ ಮನೋಧರ್ಮಕ್ಕೂ ನ್ಯಾಯಮೂರ್ತಿಗೆ ಪದೋನ್ನತಿ ನೀಡುವುದಕ್ಕೂ ಸಂಬಂಧವಿಲ್ಲ.
(ನ್ಯಾಯಮೂರ್ತಿಗಳ ವಿರುದ್ಧ ಆನ್‌ಲೈನ್ ಟ್ರೋಲ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸುತ್ತಾ) ನಾನು ಟ್ವಿಟರ್ ಗಮನಿಸುವುದಿಲ್ಲ. ಆದರೆ ಅತಿರೇಕದ ಕಠೋರ ನುಡಿಗಳ ಪ್ರಭಾವಕ್ಕೆ ನಾವು ತುತ್ತಾಗಬಾರದು… ನ್ಯಾಯಾಲಯದ ಮೌಖಿಕ ಅವಲೋಕನಗಳು ಪ್ರಕರಣದ ಅಂತಿಮ ತೀರ್ಪನ್ನು ಸೂಚಿಸುವುದಿಲ್ಲ. ನ್ಯಾಯಮೂರ್ತಿಗಳ ಮೌಖಿಕ ಅವಲೋಕನಗಳನ್ನು ಸಾಮಾಜಿಕ ಮಾಧ್ಯಮ ಅದನ್ನು ಅಂತಿಮ ತೀರ್ಪು ಎಂದು ನಿರ್ಧರಿಸುತ್ತಿದೆ… ನಾನು ಅದರ ಬಳಕೆದಾರರನ್ನು ಅಥವಾ ಜನರನ್ನು ಟೀಕಿಸುತ್ತಿಲ್ಲ. ನಾವು ಹೆಚ್ಚು ಮುಕ್ತವಾದ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಿದೆ.
ಅಮೆರಿಕ ಸುಪ್ರೀಂ ಕೋರ್ಟ್ 80 ದಿನಗಳ ಕಾಲ ವಿಚಾರಣೆ ನಡೆಸುತ್ತದೆ, 3 ತಿಂಗಳಷ್ಟು ಕಾಲವೂ ಅದು ಕಲಾಪ ನಡೆಸುವುದಿಲ್ಲ. ಭಾರತದ ಸುಪ್ರೀಂ ಕೋರ್ಟ್ ಪ್ರತಿ ವರ್ಷ 200 ದಿನಗಳ ಕಾಲ ಕಲಾಪ ನಡೆಸುತ್ತದೆ… ನ್ಯಾಯಾಧೀಶರುಗಳಿಗೆ ಕುಟುಂಬದೊಂದಿಗೆ ಕಳೆಯಲು ಹೆಚ್ಚು ಸಮಯವೇ ಇರುವುದಿಲ್ಲ.
ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ನ್ಯಾಯಾಂಗದಲ್ಲಿ ಜನರು ಇಟ್ಟಿರುವ ನಂಬಿಕೆಯ ಪ್ರತೀಕ. ಆ ನಂಬಿಕೆಯನ್ನು ಉಳಿಸಿಕೊಳ್ಳಲು ನ್ಯಾಯಾಧೀಶರು ಹೆಚ್ಚು ಸಮರ್ಥರಾಗಬೇಕು.