[ಪಾಸ್‌ಪೋರ್ಟ್‌ ನವೀಕರಣ] ಕ್ರಿಮಿನಲ್‌ ಪ್ರಕರಣ ಬಾಕಿ ಇದ್ದರೂ ಮ್ಯಾಜಿಸ್ಟ್ರೇಟ್‌ ಅನುಮತಿ ಬೇಕಿಲ್ಲ: ಹೈಕೋರ್ಟ್‌

ಬೆಂಗಳೂರಿನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ 2022ರ ಜನವರಿ 12 ಮತ್ತು ಮಾರ್ಚ್‌ 11ರಂದು ಹೊರಡಿಸಿದ್ದ ಸಂವಹನಗಳನ್ನು ವಜಾ ಮಾಡಿದ ನ್ಯಾಯಾಲಯ.
Karnataka High Court (Kalaburgi Bench) and Passport
Karnataka High Court (Kalaburgi Bench) and Passport
Published on

ಪಾಸ್‌ಪೋರ್ಟ್‌ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿ ಇದ್ದರೆ ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಹೊಸದಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದರೆ ಮಾತ್ರ ಅದು ಅನ್ವಯಿಸುತ್ತದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಆದೇಶ ಮಾಡಿದೆ.

ಮಾಜಿ ಶಾಸಕ ಹಾಗೂ ಉದ್ಯಮಿ ಅಶೋಕ್‌ ಖೇಣಿ ಸಹೋದರ ಸಂಜಯ್‌ ಖೇಣಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಬೆಂಗಳೂರಿನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ 2022ರ ಜನವರಿ 12 ಮತ್ತು ಮಾರ್ಚ್‌ 11ರಂದು ಹೊರಡಿಸಿದ್ದ ಸಂವಹನಗಳನ್ನು ವಜಾ ಮಾಡಿದೆ.

“ಪಾಸ್‌ಪೋರ್ಟ್‌ ನವೀಕರಿಸಿಕೊಳ್ಳಲು ಕಾನೂನಿನ ಪ್ರಕಾರ ಅರ್ಜಿದಾರ ಸಂಜಯ್‌ ಖೇಣಿ ಅವರು ಅರ್ಹರಾಗಿದ್ದರೆ ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆಯುವಂತೆ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರ ಸೂಚಿಸದೇ ತುರ್ತಾಗಿ ಅರ್ಜಿ ಪರಿಗಣಿಸಬೇಕು. ಈ ಆದೇಶದ ದೃಢೀಕೃತ ಪ್ರತಿ ದೊರೆತ ಎರಡು ತಿಂಗಳ ಒಳಗೆ ಪಾಸ್‌ಪೋರ್ಟ್‌ ನವೀಕರಣ ಅರ್ಜಿಯನ್ನು ಪರಿಗಣಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2021ರ ಜನವರಿ 23ರಂದು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯು ಸಂಜಯ್‌ ಖೇಣಿ ಅವರಿಗೆ ಪಾಸ್‌ಪೋರ್ಟ್‌ ಮಂಜೂರು ಮಾಡಿತ್ತು. ಇದರ ಅವಧಿ 2022ರ ಜನವರಿ 22ರಂದು ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಸೇವಾ ಕೇಂದ್ರದ ಮೂಲಕ 2021ರ ಅಕ್ಟೋಬರ್‌ 25ರಂದು ಖೇಣಿ ಅವರು ಪಾಸ್‌ಪೋರ್ಟ್‌ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ 2021ರ ಅಕ್ಟೋಬರ್‌ 29ರಂದು ಪಾಸ್‌ಪೋರ್ಟ್‌ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಅವರು ಹಾಜರಾಗಿ, ಸಂಬಂಧಪಟ್ಟ ದಾಖಲೆ ಸಲ್ಲಿಸಿ, ಔಪಚಾರಿಕತೆ ಪೂರ್ಣಗೊಳಿಸಿದ್ದರು.

ಆನಂತರ, 2021ರ ಡಿಸೆಂಬರ್‌ 6ರಂದು ಪಾಸ್‌ಪೋರ್ಟ್‌ ಪ್ರಾಧಿಕಾರವು ಖೇಣಿ ಅವರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣದ ಬಗ್ಗೆ ವಿವರಣೆ ಕೇಳಿತ್ತು. ಈ ಕುರಿತು ಪ್ರಾಧಿಕಾರದ ಮುಂದೆ ಹಾಜರಾಗಿದ್ದ ಖೇಣಿ ಅವರು ಸದರಿ ಪ್ರಕರಣದಲ್ಲಿ ಜಾಮೀನು ಮಂಜೂರಾಗಿರುವ ದಾಖಲೆಗಳನ್ನು ಸಲ್ಲಿಸಿದ್ದರು. 2022ರ ಜನವರಿ 12ರಂದು ಮತ್ತೆ ಖೇಣಿ ಅವರಿಗೆ ಸಂಬಂಧಿತ ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆಯುವಂತೆ ನೋಟಿಸ್‌ ನೀಡಿತ್ತು.

ಇದಕ್ಕೆ ಕರ್ನಾಟಕ ಹೈಕೋರ್ಟ್‌ 2020ರಲ್ಲಿ ಕೃಷ್ಣ ಚಿರಂಜೀವಿ ರಾವ್‌ ಪಲುಕುರಿ ವೆಂಕಟ ವರ್ಸಸ್‌ ಭಾರತ ಸರ್ಕಾರದ ಪ್ರಕರಣದಲ್ಲಿ ಆದೇಶ ಮಾಡಿದ್ದು, ಅದರ ಅನುಸಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯೆ ಸಲ್ಲಿಸಿದ್ದರು. ಅಲ್ಲದೇ, ಪಾಸ್‌ಪೋರ್ಟ್‌ ಅಧಿಕಾರದ ನೋಟಿಸ್‌ಗಳನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಅರುಣ್‌ಕುಮಾರ್‌ ಅಮರಗುಂಡಪ್ಪ ಅವರು “ಪಾಸ್‌ಪೋರ್ಟ್‌ ನವೀಕರಿಸಿಕೊಳ್ಳಲು ಖೇಣಿ ಅವರು ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಕ್ರಿಮಿನಲ್‌ ಪ್ರಕರಣ ಬಾಕಿ ಇರುವುದಕ್ಕೆ ಪಾಸ್‌ಪೋರ್ಟ್‌ ನವೀಕರಣವನ್ನು ಪ್ರತಿವಾದಿಗಳು ನಿರಾಕರಿಸಲಾಗದು” ಎಂದು ವಾದಿಸಿದ್ದರು.

ಪಾಸ್‌ಪೋರ್ಟ್‌ ಪ್ರಾಧಿಕಾರ ಮತ್ತು ಇತರೆ ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದ ವಕೀಲ ಸಂಜೀವ್‌ ಕುಮಾರ್‌ ಸಿ. ಪಾಟೀಲ್‌ ಅವರು “ಖೇಣಿ ಅವರು ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ, ಅರ್ಜಿ ವಜಾ ಮಾಡಬೇಕು” ಎಂದು ಕೋರಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

Kannada Bar & Bench
kannada.barandbench.com