
ಕೊಲೆ ದೋಷಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302ರ ಅಡಿ ಆಜೀವ ಜೈಲು ಶಿಕ್ಷೆ ಅಥವಾ ಮರಣದಂಡನೆಗಿಂತ ಕಡಿಮೆ ಶಿಕ್ಷೆ ವಿಧಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ನಟರಾಜನ್ ಅವರಿದ್ದ ಪೀಠ ಹೊರಡಿಸಿರುವ ಆದೇಶದಲ್ಲಿ ಹೀಗೆ ಹೇಳಲಾಗಿದೆ,
ಘಟನೆಯ ವಿವರ
ಕೊಲೆಯಾದ ವ್ಯಕ್ತಿಯ ಮನೆಯಲ್ಲಿ ಮೊದಲನೇ ಆರೋಪಿ ಸಿಲ್ಕ್ ಕೈಮಗ್ಗದ ಕೆಲಸ ಮಾಡುತ್ತಿದ್ದರು. ಮೊದಲ ಆರೋಪಿ ಮತ್ತು ಎರಡನೆಯ ಆರೋಪಿಯಾದ ಕೊಲೆಯಾದ ವ್ಯಕ್ತಿಯ ಪತ್ನಿ ನಡುವೆ ಅಕ್ರಮ ಸಂಬಂಧವಿತ್ತು. ಇದನ್ನು ತಿಳಿದು ಕೊಲೆಯಾದ ವ್ಯಕ್ತಿಯು ಆರೋಪಿಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಪತ್ನಿಯ ಒತ್ತಾಯದ ಮೇರೆಗೆ ಮತ್ತೆ ಆತನನ್ನು ಕೊಲೆಯಾದ ವ್ಯಕ್ತಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. 2013ರ ಜನವರಿ 1ರಂದು ತನ್ನ ತಂದೆ (ಎರಡನೇ ಆರೋಪಿಯ ಪತಿ) ಕೊಲೆಯಾಗಿರುವುದನ್ನು ಅವರ ಪುತ್ರ ನೋಡಿದರು.
ತನ್ನ ತಾಯಿ ಹಾಗೂ ಅವರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ (ಮೊದಲ ಆರೋಪಿ) ಕೊಲೆ ನಡೆಸಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿ, ದೂರು ನೀಡಿದ್ದರು. ಇದನ್ನು ಆಧರಿಸಿ, ಉಭಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಐಪಿಸಿ ಸೆಕ್ಷನ್ 302 ಮತ್ತು 201 ಜೊತೆಗೆ 34 ರ ಅಡಿ ಇಬ್ಬರೂ ಆರೋಪಿಗಳನ್ನು ದೋಷಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಮೊದಲ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 10,000 ರೂಪಾಯಿದಂಡ ಹಾಗೂ ಎರಡನೇ ಆರೋಪಿಗೆ ಆಜೀವ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಎರಡನೇ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ದಿಗಂಬರ್ ವೈಷ್ಣವ್ ವರ್ಸಸ್ ರಾಜ್ಯ ಸರ್ಕಾರ ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷಿ ಪರಿಗಣಿಸುವಾಗ ಅನುಸರಿಸಬೇಕಾದ ತತ್ವಗಳ ಕುರಿತು ಸುಪ್ರೀಂ ಕೋರ್ಟ್ ನಿಗದಿಗೊಳಿಸಿರುವ ಮಾನದಂಡಗಳತ್ತ ದೃಷ್ಟಿ ಹರಿಸಿದ ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷಿಗಳು ಪ್ರತಿಕೂಲವಾಗಿವೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡಿತು.
ಎರಡನೇ ಆರೋಪಿಗೆ ಅನುಮಾನದ ಲಾಭ ನೀಡಬೇಕಿದೆ ಎಂದಿರುವ ನ್ಯಾಯಾಲಯವು ಸಾಂದರ್ಭಿಕ ಸಾಕ್ಷಿಗಳನ್ನು ಹೆಣೆಯುವುದರಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದ್ದು, ಹೀಗೆ ಹೇಳಿದೆ:
“…ಸಂತ್ರಸ್ತ ವ್ಯಕ್ತಿಯ ಹತ್ಯೆ ಹೊರತುಪಡಿಸಿ, ಸಾಮಾನ್ಯ ಉದ್ದೇಶಕ್ಕಾಗಿ ಮೊದಲನೇ ಆರೋಪಿಯ ಜೊತೆಗೂಡಿ ಎರಡನೇ ಆರೋಪಿಯಾದ ಪತ್ನಿಯು ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿಲ್ಲ… ಆದ್ದರಿಂದ ಆರೋಪಿ ಮತ್ತು ಕೇವಲ ಆರೋಪಿ ಮಾತ್ರವೇ ಸಂತ್ರಸ್ತರ ಸಾವಿಗೆ ಕಾರಣವೆಂದು, ಅನುಮಾನಕ್ಕೆ ಆಸ್ಪದವಿಲ್ಲದಂತೆ ಪರಿಣಾಮಕಾರಿಯಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನಾವು ಭಾವಿಸುತ್ತೇವೆ. ಈ ಹಿನ್ನೆಲೆಯಲ್ಲಿ ಅನುಮಾನದ ಲಾಭವನ್ನು ಮೇಲ್ಮನವಿದಾರರಾದ ಎರಡನೇ ಆರೋಪಿಗೆ ವಿಸ್ತರಿಸಲಾಗಿದೆ” ಎಂದು ಪೀಠ ಹೇಳಿದೆ.
ಮೇಲಿನ ಕಾರಣ ನೀಡಿ ಎರಡನೇ ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್ ಬದಿಗೆ ಸರಿಸಿದೆ. ಇದರ ಜೊತಗೆ ವಿಚಾರಣಾಧೀನ ನ್ಯಾಯಾಲಯವು ಕೊಲೆ ದೋಷಿಯಾದ ಮೊದಲನೇ ಆರೋಪಿಗೆ ಕೇವಲ ಏಳು ವರ್ಷ ಶಿಕ್ಷೆ ವಿಧಿಸುವ ಮೂಲಕ ತಪ್ಪು ಹೆಜ್ಜೆ ಇಟ್ಟಿದೆ ಎಂದು ಪೀಠ ಹೇಳಿದೆ.
ಮೊದಲನೇ ಆರೋಪಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ರಾಜ್ಯ ಸರ್ಕಾರವು ಪ್ರಶ್ನಿಸಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿಲ್ಲ ಎಂಬುದನ್ನೂ ನ್ಯಾಯಾಲಯವು ಗಮನಿಸಿದೆ. ಈ ತೀರ್ಪಿನ ಅಂತಿಮ ಪ್ಯಾರಾಗಳಲ್ಲಿ ಮಾಡಿದ ಅವಲೋಕನಗಳನ್ನು ಎಲ್ಲಾ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಮತ್ತು ಅವರು ಎಲ್ಲಾ ನ್ಯಾಯಾಂಗದ ಅಧಿಕಾರಿಗಳಿಗೆ ರವಾನಿಸುವಂತೆ ರಿಜಿಸ್ಟ್ರಿಗೆ ನ್ಯಾಯಾಲಯವು ನಿರ್ದೇಶಿಸಿದೆ.
ಸಾಂದರ್ಭಿಕ ಸಾಕ್ಷಿಯ ಮೇಲೆ ಪ್ರಾಸಿಕ್ಯೂಷನ್ ವಾದ ನಿಂತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಿಚಾರಣಾಧೀನ ನ್ಯಾಯಾಲಯದ ಆದೇಶದ ಕುರಿತು ಎರಡನೇ ಆರೋಪಿ ಪರ ವಕೀಲರಾದ ಎಂ ಆರ್ ನಂಜುಂಡ ಗೌಡ ವಾದಿಸಿದರು.
ವಿಚಾರಣಾಧೀನ ನ್ಯಾಯಾಲಯದ ತೀರ್ಪಿಗೆ ಬೆಂಬಲವನ್ನು ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ್ ಮಜಗೆ ಅವರು ವ್ಯಕ್ತಪಡಿಸಿದರು. ಆದರೆ, ಅವರು ಐಪಿಸಿ ಸೆಕ್ಷನ್ 302ರ ಅಡಿ ಕೊಲೆ ಪ್ರಕರಣಗಳಡಿ ಕನಿಷ್ಠ ಆಜೀವ ಜೈಲು ಶಿಕ್ಷೆ ವಿಧಿಸಬೇಕು. ಇದಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎನ್ನುವುದನ್ನು ಒಪ್ಪಿದರು. ಹಾಗಾಗಿ, ಕಾನೂನು ರೀತ್ಯಾ ಮೊದಲನೇ ಆರೋಪಿಗೆ ವಿಧಿಸಲಾಗಿರುವ ಶಿಕ್ಷೆಯು ನಿಲ್ಲುವುದಿಲ್ಲ ಎಂದು ವಾದ ಮಂಡಿಸಿದ್ದರು.