"ಶೌಚಾಲಯ, ಕುಡಿವ ನೀರಿಲ್ಲದ ಶಾಲೆಗಳಿಗೆ ಯಾವ ಪೋಷಕರು ಮಕ್ಕಳನ್ನು ಕಳುಹಿಸುತ್ತಾರೆ?" ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಹಂಚಿಕೆ ಮಾಡಬೇಕು. ಹೀಗೆ ಮಾಡುವುದರಿಂದ ಆರ್‌ಟಿಇ ಕಾಯಿದೆ ಮತ್ತು ಅದರ ನಿಯಮಗಳ ಅಡಿ ಮಾಡಲಾದ ಶಿಫಾರಸ್ಸುಗಳನ್ನು ನೈಜವಾಗಿ ಸಾಧಿಸಿದಂತಾಗುತ್ತದೆ ಎಂದ ಪೀಠ.
Karnataka HC and Students
Karnataka HC and Students

ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಹಂಚಿಕೆ ಮಾಡಬೇಕೆಂದು ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ರಾಜ್ಯದ ವಿವಿಧ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿರುವ ಬಗ್ಗೆ ಕೆರಳಿ ಕೆಂಡವಾದ ಹೈಕೋರ್ಟ್‌, ರಾಜ್ಯದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದಿರುವ ಶಾಲೆಗಳ ಸಂಖ್ಯೆ ಕೇವಲ 38 ಮಾತ್ರ ಎಂಬ ಸರ್ಕಾರದ ಅನುಪಾಲನಾ ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸಿತು

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009 (ಆರ್‌ಟಿಇ) ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಹಂಚಿಕೆ ಮಾಡಬೇಕು. ಹೀಗೆ ಮಾಡುವುದರಿಂದ ಆರ್‌ಟಿಇ ಕಾಯಿದೆ ಮತ್ತು ಅದರ ನಿಯಮಗಳ ಅಡಿ ಶಿಫಾರಸ್ಸಿನ ಉದ್ದೇಶವನ್ನು ನೈಜವಾಗಿ ಸಾಧಿಸಿದಂತಾಗುತ್ತದೆ. ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡದಿದ್ದರೆ ಯಾವುದೇ ಉದ್ದೇಶ ಈಡೇರುವುದಿಲ್ಲ. ಹೀಗಾಗಿ, ರಾಜ್ಯ ಸರ್ಕಾರವು ನಿರ್ದಿಷ್ಟ ಅನುದಾನವನ್ನು ಆರ್‌ಟಿಇ ನಿಯಮಗಳ ಅಡಿ ನಿರ್ದಿಷ್ಟ ಕಾಲಾವಧಿಯಲ್ಲಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಹಂಚಿಕೆ ಮಾಡಬೇಕು” ಎಂದು ಆದೇಶ ಮಾಡಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಪರಿಸ್ಥಿತಿ ಉಲ್ಲೇಖಿಸಿದ ನ್ಯಾಯಾಲಯವು “ಇಂಥ ಶಾಲೆಗೆ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಇಚ್ಛಿಸುವುದಿಲ್ಲ ಎಂದಷ್ಟೇ ನಾವು ಹೇಳುತ್ತೇವೆ. ಶೌಚಾಲಯ ಪರಿಸ್ಥಿತಿ ಎಂಬುದು ನಾಮ್ಕೆವಾಸ್ತೆಗೆ ಇದ್ದು, ನಾಲ್ಕು ಗೋಡೆ, ಬಾಗಿಲು ಮಾತ್ರ ಇದೆ. ಇದೆಲ್ಲಕ್ಕೂ ಮಿಗಿಲಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲೆಯ ಪ್ರಾಧಿಕಾರಗಳು ಮಾಡಿರುವ ಪ್ರಯತ್ನವು ಕಣ್ಣೊರೆಸುವ ತಂತ್ರವಷ್ಟೆ” ಎಂದು ಆದೇಶದಲ್ಲಿ ಕಿಡಿಕಾರಿದೆ.

“ಸೋಲಾ ತಾಂಡ ಏಕಂಬದಲ್ಲಿನ ಶಾಲೆಯ ಪರಿಶೀಲನಾ ವರದಿಯ ಜೊತೆಗೆ ಸಲ್ಲಿಸಲಾಗಿರುವ ಚಿತ್ರವು ಆತ್ಮಸಾಕ್ಷಿಗೆ ಆಘಾತ ಉಂಟು ಮಾಡುವಂತಿದೆ. ಮೊದಲಿಗೆ ಇಲ್ಲಿ ನಿರ್ಮಿಸಲಾಗಿರುವ ಶೌಚಾಲಯವು ಗಂಡು ಮಕ್ಕಳಿಗೋ ಅಥವಾ ಹೆಣ್ಣು ಮಕ್ಕಳಿಗೋ ಎಂಬುದೇ ತಿಳಿಯದು. ಎರಡನೇಯದಾಗಿ ಶೌಚಾಲಯವು ದುಸ್ಥಿತಿಯಲ್ಲಿದ್ದು, ಶೌಚಾಲಯದ ಹೊರಗೋಡೆ, ಬಾಗಿಲುಗಳಿಗೆ ಈಚೆಗೆ ಬಣ್ಣ ಬಳಿಯಲಾಗಿದೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ” ಎಂದೂ ಆದೇಶದಲ್ಲಿ ದಾಖಲಿಸಿದೆ.

ಈ ಹಿನ್ನೆಲೆಯಲ್ಲಿ “ಹೊಸದಾಗಿ ರಾಜ್ಯದ ಶಾಲೆಗಳಲ್ಲಿ ಸೌಕರ್ಯದ ಕುರಿತು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತಿದ್ದು, ಈ ಸಮೀಕ್ಷಾ ಪ್ರಕ್ರಿಯೆಯಲ್ಲಿ ಶಾಲಾ ಆಡಳಿತವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ತಾಲ್ಲೂಕು ಸದಸ್ಯ ಕಾರ್ಯದರ್ಶಿ ಅವರನ್ನು ಒಳಗೊಳ್ಳಬೇಕು. ಈ ಸಮೀಕ್ಷೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ, ಕೆಎಸ್‌ಎಲ್‌ಎಸ್‌ಎ ತಾಲ್ಲೂಕು ಸದಸ್ಯ ಕಾರ್ಯದರ್ಶಿ ಸಹಿ ಮಾಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಆದೇಶಿಸಿದೆ.

“ಎಲ್ಲೆಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲವೋ ಅಲ್ಲಿ ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲಾ ವಿಧಾನಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ತಕ್ಷಣ ಮಾಡಬೇಕು. ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಎರಡು ವಾರಗಳಲ್ಲಿ ಸೌಲಭ್ಯ ಕಲ್ಪಿಸಬೇಕು. ಸಮೀಕ್ಷೆ ನಡೆಸುವಾಗ ಕೆಟ್ಟ ಪರಿಸ್ಥಿತಿ ಕಂಡು ಬಂದರೆ ವರದಿ ಸಲ್ಲಿಸುವುದಕ್ಕಾಗಿ ಕಾಯಬಾರದು. ಅಲ್ಲಿನ ಪರಿಸ್ಥಿತಿ ಸುಧಾರಿಸಲು ಕ್ರಮಕೈಗೊಳ್ಳಬೇಕು. ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತರಬೇಕು” ಎಂದು ಆದೇಶ ಮಾಡಿದೆ.

ಪೀಠ ಪ್ರಸ್ತಾಪಿಸಿದ ಪ್ರಮುಖ ವಿಚಾರಗಳು

 • ರಾಜ್ಯದ ಬಾಕಿ ಇರುವ 464 ಶಾಲೆಗಳ ಪೈಕಿ 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇಲ್ಲ. 430 ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ ಎಂದು ವರದಿ ಸಲ್ಲಿಸಿದ್ದೀರಿ. ಆದರೆ, ಇದು ತಪ್ಪಾದ ಮಾಹಿತಿಯಾಗಿದೆ.

 • ಸರ್ಕಾರದ ಮಾಹಿತಿಯನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಯಾರು? ಯಾರಾದರೂ ಅವುಗಳನ್ನು ಪರಿಶೀಲಿಸಿದ್ದಾರೆಯೇ? ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಶೌಚಾಲಯಗಳಲ್ಲಿ ಸಾಕಷ್ಟು ಧೂಳು, ಗಿಡಗಂಟಿ ಬೆಳೆದು ನಿಂತಿವೆ. ಶೌಚಾಲಯಕ್ಕೆ ಬಾಗಿಲೇ ಇಲ್ಲ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾಗ ಶೌಚಾಲಯಗಳನ್ನು ಹೀಗೆ ನಿರ್ವಹಿಸಲಾಗಿತ್ತೇ?

 • ಇಂಥ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿಲು ಯಾವ ಪೋಷಕರು ಇಚ್ಛಿಸುತ್ತಾರೆ? ಆರ್ಥಿಕವಾಗಿ ಸಬಲರಲ್ಲದಿದ್ದರೂ ತಮ್ಮ ಮಕ್ಕಳನ್ನು ಇಂಥ ಶಾಲೆಗಳಿಗೆ ಕಳುಹಿಸಲು ಬಯಸುವುದಿಲ್ಲ.

 • ಕಳೆದ ಮಾರ್ಚ್‌ನಲ್ಲಿ ನ್ಯಾಯಾಲಯವು ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನ ಪಾಲಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಒಂದಷ್ಟು ಪ್ರಯತ್ನ ಮಾಡಿದ್ದಾರೆ. ಒಟ್ಟು 47,601 ಶಾಲೆಗಳಿದ್ದು, ಆರ್‌ಟಿಇ ಕಾಯಿದೆ ಅಡಿ 4,092 ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಹೇಳಲಾಗಿದೆ. ಕೊಠಡಿ ಕೊರತೆ ಇರುವ ಶಾಲೆಗಳು 745, ಶೌಚಾಲಯ ಕೊರತೆ ಇರುವ ಶಾಲೆಗಳು 464, ಕುಡಿಯುವ ನೀರು ಮತ್ತು ಆಟದ ಮೈದಾನ ಇಲ್ಲದಿರುವ ಶಾಲೆಗಳು 1,224 ಮತ್ತು ಕಾಂಪೌಂಡ್‌ ಇಲ್ಲದ ಶಾಲೆಗಳು 77  ಎಂದು ವಿವರಿಸಲಾಗಿದೆ. ಮತ್ತೊಂದು ಕೋಷ್ಠಕದಲ್ಲಿ ಭಿನ್ನ ಅಂಕಿಸಂಖ್ಯೆಗಳನ್ನು ತೋರಿಸಲಾಗಿದೆ. ಅಲ್ಲಿ, 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ಇಲ್ಲ ಮತ್ತು ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ತೋರಿಸುವ ಪ್ರಯತ್ನ ಮಾಡಲಾಗಿದೆ.

 • ಸ್ಥಳವನ್ನು ಸ್ವಚ್ಛಗೊಳಿಸಲು ಮತ್ತು ಕುಡಿಯಲು ಯಾರೋ ನೀರು ಹೊತ್ತು ತರುತ್ತಿದ್ದಾರೆ. ನೀವು ಸಲ್ಲಿಸಿರುವುದು ಅನುಪಾಲನಾ ವರದಿಯೇ? ಈ ಪರಿಸ್ಥಿತಿಯು ಆಘಾತಕ್ಕಿಂತ ಹೆಚ್ಚಾಗಿ ನಮಗೆ ನೋವುಂಟು ಮಾಡಿದೆ.

 • ಹೊರಗಡೆಯಿಂದ ಕುಡಿಯುವ ನೀರು ತರಲಾಗುತ್ತಿದೆ. ಕುಡಿಯುವ ನೀರನ್ನು ಬ್ಯಾರಲ್‌ನಲ್ಲಿ ಇಡಬಾರದೆ? ನೀರು ಬೇಕಾದರೆ ಏನು ಮಾಡಬೇಕು?

 • ಸರ್ಕಾರಿ ಶಾಲೆಗೆ ಕಳುಹಿಸಲು ಇಚ್ಛಿಸುವ ಪೋಷಕರು ನಿರ್ದಿಷ್ಟ ಕಾಲಮಿತಿಯಲ್ಲಿ ಶಾಲಾ ಕಟ್ಟಡ ನಿರೀಕ್ಷಿಸುವುದು ದೂರದ ಕನಸಾಗಬಾರದು.

Also Read
ಕಡ್ಡಾಯ ಶಿಕ್ಷಣ ಹಕ್ಕು: ಶಾಲೆಯಿಂದ ಹೊರಗುಳಿದಿರುವ 17,266 ಮಕ್ಕಳು ಶಾಲೆಗೆ ದಾಖಲು; ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಅಮಿಕಸ್‌ ಕ್ಯೂರಿ ಶಿಫಾರಸ್ಸುಗಳ ಮತ್ತು ಸರ್ಕಾರದ ಪ್ರತಿಕ್ರಿಯೆ

ಆದೇಶದ ವೇಳೆ ನ್ಯಾಯಾಲಯವು ಅಮಿಕಸ್‌ ಕ್ಯೂರಿ ಮಾಡಿದ್ದ ಶಿಫಾರಸ್ಸುಗಳು ಹಾಗೂ ಅದಕ್ಕೆ ಸರ್ಕಾರವು ಸಲ್ಲಿಸಿರುವ ಅನುಪಾಲನಾ ಪ್ರತಿಕ್ರಿಯೆಯನ್ನು ದಾಖಲಿಸಿಕೊಂಡಿತು.

 • 0-18 ವಯೋಮಾನದ ಮಕ್ಕಳನ್ನು ಪತ್ತೆ ಮಾಡುವ ಸಂಬಂಧ ಮನೆ-ಮನೆ ಸಮೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯ ಎಂಬುದಕ್ಕೆ ಈ ಶಿಫಾರಸ್ಸು ಪರಿಗಣೆನೆಗೆ ಒಳಪಟ್ಟಿದ್ದು, ಈ ಸಂಬಂಧದ ತೀರ್ಮಾನವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

 • ಶಾಲೆಯಿಂದ ಹೊರಗಳಿದಿರುವ ಅಥವಾ ಶಾಲೆ ಬಿಟ್ಟಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಬೇಕಿದೆ ಎಂಬ ಅಮಿಕಸ್‌ ಕ್ಯೂರಿ ಶಿಫಾರಸ್ಸಿಗೆ ಕೋಷ್ಠಕದಲ್ಲಿ (ಚಾರ್ಟ್‌) ಮಾಹಿತಿ ಒದಗಿಸಲಾಗಿದೆ. 24,308 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, 22,227 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಇನ್ನೂ 2,081 ಮಕ್ಕಳನ್ನು ಪತ್ತೆ ಮಾಡಬೇಕಿದೆ. ತಪ್ಪಾದ ಸಂಪರ್ಕ ಸಂಖ್ಯೆ ಮತ್ತು ವಿಳಾಸದಿಂದ ಮಕ್ಕಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದೂ ಸರ್ಕಾರ ಉತ್ತರಿಸಿದೆ.

 • ಆರ್‌ಟಿ ಕಾಯಿದೆ 2009 ಮತ್ತು ಅದರ ಅಡಿ ರೂಪಿಸಿಲಾಗಿರುವ ನಿಯಮಗಳ ಅಡಿ ಎಲ್ಲಾ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕಾಲಮಿತಿ ನಿಗದಿ ಮತ್ತು ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಲಭ್ಯವಿರುವ ಅನುದಾನ ಬಳಸಿ ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಇದನ್ನು ಒಪ್ಪಲಾಗದು. ಸರ್ಕಾರವು ವಿಶೇಷ ಅನುದಾನ ಮೀಸಲಿಟ್ಟು, ನಿರ್ದಿಷ್ಟ ಕಾಲಮಿತಿಯಲ್ಲಿ ಅದನ್ನು ವ್ಯಯಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

 • ಶಾಲೆ ಬಿಟ್ಟಿರುವ ಮಕ್ಕಳ ಮೇಲೆ ನಿರಂತರ ನಿಗಾ ಮತ್ತು ಆರ್‌ಟಿಇ ನಿಯಮದ ಪರಿಣಾಮಕಾರಿ ಜಾರಿಗೆ ಶಿಫಾರಸ್ಸು ಮಾಡಲಾಗಿದೆ. ಈ ಶಿಫಾರಸ್ಸು ಜಾರಿಗೊಳಿಸಲು ಕೆಲವು ಸಕಾರಾತ್ಮಕ ಕ್ರಮಕೈಗೊಳ್ಳಲಾಗಿದೆ ಎಂಬುದು ಅನುಪಾಲನ ವರದಿಯಲ್ಲಿ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com