ಅನರ್ಹರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿಸುವುದು ಸಂವಿಧಾನಕ್ಕೆ ಎಸಗುವ ಅಪಚಾರ: ಹೈಕೋರ್ಟ್‌ ಕಿಡಿ

“ಕೆಪಿಎಸ್‌ಸಿ ಹಿಂದಿನ ಕಾರ್ಯದರ್ಶಿ ಲತಾ ಕುಮಾರಿ ವಿರುದ್ಧ ಕೈಗೊಂಡಿರುವ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಎಚ್ಚರಿಸಿರುವ ಹೈಕೋರ್ಟ್‌.
Karnataka HC and KPSC
Karnataka HC and KPSC
Published on

ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸದಸ್ಯರನ್ನು ನೇಮಿಸುವಾಗ ಶೋಧನಾ ಸಮಿತಿ ರಚಿಸಿ, ಅದರಲ್ಲಿ ಶಿಫಾರಸ್ಸು ಮಾಡಲ್ಪಡುವ ಅರ್ಹರನ್ನು ನೇಮಕ ಮಾಡಬೇಕೆ ವಿನಾ ವೆಂಕ, ಸೀನ, ನಾಣಿಯರನ್ನೆಲ್ಲಾ (ಅರ್ಹತೆ ಹೊಂದಿಲ್ಲದವರು) ಕೆಪಿಎಸ್‌ಸಿಯ ಸದಸ್ಯರನ್ನಾಗಿ ನೇಮಿಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಅಂತೆಯೇ, ಸದಸ್ಯರನ್ನು ನೇಮಿಸಲು ಶೋಧನಾ ಸಮಿತಿ ರಚಿಸುವ ಸಂಬಂಧ ರೂಪಿಸಲಾಗುವ ಯುಕ್ತ ಕಾರ್ಯವಿಧಾನವನ್ನು 15 ದಿನಗಳಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ರಾಮಚಂದ್ರ ಹುದ್ದಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಕೆಪಿಎಸ್‌ಸಿಗೆ ಸದಸ್ಯರನ್ನು ನೇಮಕ ಮಾಡುತ್ತಿದ್ದ ಸರ್ಕಾರವು ಈಗ ಎಚ್ಚೆತ್ತುಕೊಂಡು ಯುಕ್ತ ಕಾರ್ಯವಿಧಾನದ ಮೂಲಕ ಶೋಧನಾ ಸಮಿತಿ ರಚಿಸಿ, ಆ ಮೂಲಕ ಅರ್ಹರನ್ನು ಕೆಪಿಎಸ್‌ಸಿಗೆ ಸದಸ್ಯರನ್ನಾಗಿ ನೇಮಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ 2000ರ ಅಡಿ ಕುಲಪತಿಗಳನ್ನು ನೇಮಕ ಮಾಡಲು ರಚಿಸುವ ಶೋಧನಾ ಸಮಿತಿಯ ಮಾದರಿಯಲ್ಲಿ ಶೋಧನಾ ಸಮಿತಿ ರಚಿಸುವುದು ಶ್ಲಾಘನೀಯ ಕ್ರಮ. ಅನರ್ಹರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಿದರೆ ಅವರು ಅತ್ಯುತ್ತಮ ವಿದ್ಯಾರ್ಥಿಗಳ ಸಂದರ್ಶನವನ್ನು ಹೇಗೆ ನಡೆಸುತ್ತಾರೆ? ಈ ವಿಚಾರದಲ್ಲಿ ಹೆಚ್ಚನ್ನು ಹೇಳಬೇಕಿಲ್ಲ. ಏನು ಹೇಳದಂತೆಯೂ ಇಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಲತಾ ವಿರುದ್ಧದ ಕ್ರಮದ ವರದಿ ಸಲ್ಲಿಸಿ

ಸಕ್ಷಮ ಪ್ರಾಧಿಕಾರವಾದ ಮುಖ್ಯಮಂತ್ರಿಯವರು ಪೂರ್ವಾನುಮತಿ ನೀಡಿದ್ದರಿಂದ ಮಾರ್ಚ್‌ 25ರಂದು ಕೆಪಿಎಸ್‌ಸಿ ಹಿಂದಿನ ಕಾರ್ಯದರ್ಶಿ ಲತಾ ಕುಮಾರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದ್ದು, ಮಾರ್ಚ್‌ 28ಕ್ಕೆ ಲತಾ ಪ್ರತಿಕ್ರಿಯಿಸಿದ್ದಾರೆ ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಪೀಠಕ್ಕೆ ತಿಳಿಸಿದರು.

ಆಗ ನ್ಯಾಯಾಲಯವು “ಈ ಕುರಿತು ಸಕಾರಾತ್ಮಕ ಕ್ರಮಕೈಗೊಂಡು, ಆ ಸಂಬಂಧ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದನ್ನು ಮಾಡಲು ವಿಫಲವಾದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಆದೇಶಿಸಿತು.

ಇದರ ಅಗತ್ಯವಿಲ್ಲ ಎಂದು ಲಘುದಾಟಿಯಲ್ಲಿ ಎಜಿ ಹೇಳಿದಾಗ ಪೀಠವು ”ನ್ಯಾಯಾಲಯವು ಸಾಮಾನ್ಯವಾಗಿ ಪೆನ್‌ನಲ್ಲಿ ಆದೇಶ ಬರೆಯುವ ದಿನಗಳು ಮುಗಿದಿವೆ. ಈಗ ಆಸಿಡ್‌ನಲ್ಲಿ ಅದ್ದಿ ಆದೇಶ ಬರೆಯಬೇಕಿದೆ. ಅದೊಂದೇ ದಾರಿ ಉಳಿದಿರುವುದು. ಏಕೆಂದರೆ, ನ್ಯಾಯಾಲಯಗಳಿಗೆ ಪೊಲೀಸ್‌ ಅಧಿಕಾರವಿಲ್ಲ. ಏನು ಮಾಡಬೇಕು?” ಎಂದು ಮೌಖಿಕವಾಗಿ ಪ್ರಶ್ನಿಸಿತು.

“ನ್ಯಾಯದಾನವನ್ನು ಖಾತರಿಪಡಿಸಲು ನ್ಯಾಯಮೂರ್ತಿಗಳಿಗೆ ತಮ್ಮದೇ ಆದ ಭಾಷೆ ಮತ್ತು ತಂತ್ರಗಳು ಗೊತ್ತಿವೆ. ನಾವು ಕಾನೂನು ಪುಸ್ತಕಕ್ಕೆ ಮಾತ್ರ ಸೀಮಿತವಾಗುವುದಿಲ್ಲ” ಎಂದೂ ನ್ಯಾಯಾಲಯವು ಹೇಳಿತು.

ಕೆಪಿಎಸ್‌ಸಿ ಅಧಿಕಾರಿಗೆ ಜೈಲಿಗಟ್ಟುವ ಎಚ್ಚರಿಕೆ

“ಮೂಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಬೇಕು ಎಂದು ಮತ್ತೊಮ್ಮೆ ಕೆಪಿಎಸ್‌ಸಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇದರಲ್ಲಿ ಮುಂದಿನ ಬಾರಿ ವಿಫಲವಾದರೆ ಸಂಬಂಧಿತ ಅಧಿಕಾರಿಯನ್ನು ನ್ಯಾಯಾಲಯದಿಂದ ನೇರವಾಗಿ ಜೈಲಿಗೆ ಕಳುಹಿಸಲಾಗುವುದು. ದಾಖಲೆಗಳನ್ನು ನ್ಯಾಯಾಲಯಕ್ಕೆ ಏಕೆ ಸಲ್ಲಿಸುತ್ತಿಲ್ಲ? ಬಚ್ಚಿಡುವ ಕೆಲಸ ಆರಂಭವಾದಾಗಲೇ ಅನುಮಾನ ಸೃಷ್ಟಿಯಾಗುವುದು” ಎಂದು ನ್ಯಾಯಾಲಯವು ಖಡಕ್‌ ಎಚ್ಚರಿಕೆ ನೀಡಿದೆ.

ಸಿಬಿಐ ತನಿಖೆಗೆ ಎಜಿ ವಿರೋಧ

ಅರ್ಜಿದಾರರ ಪರ ಹಿರಿಯ ವಕೀಲರಾದ ಭಾಗವತ್‌ ಮತ್ತು ಲಕ್ಷ್ಮಿನಾರಾಯಣ ಅವರು “ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ತಮ್ಮ ಯಾವುದೇ ಆಕ್ಷೇಪವಿಲ್ಲ” ಎಂದರು. ಆದರೆ, ಎಜಿ ಶೆಟ್ಟಿ ಅವರು “ಪರೀಕ್ಷಾ ಅಕ್ರಮ ಸಂಬಂಧಿತ ಎಂಟು ಪ್ರಕರಣಗಳನ್ನು ಸಿಐಡಿಯು ಯಶಸ್ವಿಯಾಗಿ ನಿಭಾಯಿಸಿದ್ದು, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಎಲ್ಲಾ ರೀತಿಯಲ್ಲೂ ಸಮರ್ಥವಾದ ಅಧಿಕಾರಿಗಳನ್ನು ಸಿಐಡಿಗೆ ನಿಯೋಜಿಸಲಾಗಿದೆ. ಪಿಎಸ್‌ಐ ನೇಮಕಾತಿ ಹಗರಣ, ಪೊಲೀಸ್‌ ಪೇದೆ ನೇಮಕಾತಿ ಸಂಬಂಧ 65 ಪ್ರಕರಣ ದಾಖಲಿಸಲಾಗಿದೆ, ಎಸ್‌ಡಿಎ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದ 8 ಪ್ರಕರಣ ದಾಖಲಿಸಲಾಗಿದೆ. ಪ್ರೌಢಶಾಲಾ ಶಿಕ್ಷಕರ ಗ್ರೇಡ್‌-1 ನೇಮಕಾತಿ ಸಂಬಂಧ 3 ಪ್ರಕರಣ ದಾಖಲಿಸಲಾಗಿದೆ. ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ ನೇಮಕಾತಿ ಸಂಬಂಧಿತ 5 ಪ್ರಕರಣ, ಉರ್ದು ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿಯ ಒಂದು ಪ್ರಕರಣ, ಬಿಟ್‌ ಕಾಯಿನ್‌ ಪ್ರಕರಣವನ್ನೂ ಸಿಐಡಿ ಯಶಸ್ವಿಯಾಗಿ ನಡೆಸಿದೆ” ಎಂದು ಸಮರ್ಥಿಸಿಕೊಂಡರು.

Also Read
'ನೇಮಕಾತಿ ಆದೇಶ ನೀಡದಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಪತ್ರ ಬರೆದಿದ್ದರೂ ನಿರ್ಧಾರ ಕೈಗೊಂಡವರಾರು?' ಹೈಕೋರ್ಟ್‌ ಪ್ರಶ್ನೆ

ಆಗ ಪೀಠವು “ವಿವಿಧ ಏಜೆನ್ಸಿಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ದಳವನ್ನು ನ್ಯಾಯಾಲಯ ನೇಮಿಸಿದರೆ ಸರ್ಕಾರಕ್ಕೆ ಅಡ್ಡಿಯಿಲ್ಲವೇ? ಈ ಸಂಬಂಧ ಸಿಐಡಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ, ಸಿಐಡಿಯ ಸೈಬರ್‌ ಅಪರಾಧ ವಿಭಾಗದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ ಅನೂಪ್‌ ಶೆಟ್ಟಿ ಇತರೆ ಒಂದಷ್ಟು ಹೆಸರುಗಳನ್ನು ಸಲ್ಲಿಸಿ” ಎಂದು ಸೂಚಿಸಿತು.

ಇನ್ನು, ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ತರಬೇತಿಯನ್ನು ತಪ್ಪಿಸಿಕೊಳ್ಳುವಂತಿಲ್ಲ. ಆದರೆ, ಯಾವುದೇ ತರಬೇತಿಯು ಇಂಥ ಪ್ರಕರಣದಲ್ಲಿ ಅವರಿಗೆ ಸಮತೆಯ ಪರಿಹಾರ ಕಲ್ಪಿಸುವುದಿಲ್ಲ” ಎಂದು ಸ್ಪಷ್ಟಪಡಿಸಿತು.

2024ರ ಜುಲೈನಿಂದ 24 ಮಂದಿಗೆ ವೇತನ ಪಾವತಿಸಲಾಗಿಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದಕ್ಕೆ ಎಜಿಯವರು “ಕಳಂಕಿತರಲ್ಲದವರಿಗೂ ವೇತನ ನೀಡಿಲ್ಲ” ಎಂದರು.

Kannada Bar & Bench
kannada.barandbench.com